ಮೋನಾಲಿಸಾ ಆರೋಪಕ್ಕೆ ಸನೋಜ್ ಮಿಶ್ರಾ ತಿರುಗೇಟು; ಮಾನನಷ್ಟ ಮೊಕದ್ದಮೆ ಎಚ್ಚರಿಕೆ
x

ನಟಿ ಮೋನಾಲಿಸಾ ಮಾಡಿರುವ ಲೈಂಗಿಕ ಕಿರುಕುಳದ ಆರೋಪವನ್ನು ನಿರ್ದೇಶಕ ಸನೋಜ್ ಮಿಶ್ರಾ ನಿರಾಕರಿಸಿದ್ದಾರೆ.

ಮೋನಾಲಿಸಾ ಆರೋಪಕ್ಕೆ ಸನೋಜ್ ಮಿಶ್ರಾ ತಿರುಗೇಟು; ಮಾನನಷ್ಟ ಮೊಕದ್ದಮೆ ಎಚ್ಚರಿಕೆ

ನಟಿ ಮೋನಾಲಿಸಾ ಮಾಡಿರುವ ಲೈಂಗಿಕ ಕಿರುಕುಳದ ಆರೋಪವನ್ನು ನಿರ್ದೇಶಕ ಸನೋಜ್ ಮಿಶ್ರಾ ನಿರಾಕರಿಸಿದ್ದಾರೆ. ಕುಟುಂಬದ ಪರವಾಗಿ ನಿಂತಿದ್ದಕ್ಕೆ ನನ್ನನ್ನು ಪಿತೂರಿಯಿಂದ ಸಿಲುಕಿಸಲಾಗುತ್ತಿದೆ ಎಂದಿದ್ದಾರೆ.


Click the Play button to hear this message in audio format

ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿರುವ ಲೈಂಗಿಕ ಕಿರುಕುಳದ ಆರೋಪಗಳ ಕುರಿತು ಕೊನೆಗೂ ಮೌನ ಮುರಿದಿರುವ ನಿರ್ದೇಶಕ ಸನೋಜ್ ಮಿಶ್ರಾ, ನಟಿ ಮೋನಾಲಿಸಾ ಭೋಂಸ್ಲೆ ಮಾಡಿರುವ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ತಮ್ಮ ಮೇಲಿನ ಆರೋಪಗಳು ಕೇವಲ ಸುಳ್ಳು ಅಷ್ಟೇ ಅಲ್ಲ, ಅದು ಪೂರ್ವಯೋಜಿತ ಪಿತೂರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಮೋನಾಲಿಸಾ, ನೇಪಾಳ ಮತ್ತು ಡೆಹ್ರಾಡೂನ್ ಚಿತ್ರೀಕರಣದ ವೇಳೆ ನಿರ್ದೇಶಕರು ಅನುಚಿತವಾಗಿ ವರ್ತಿಸಿದ್ದರು ಎಂದು ದೂರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಿಶ್ರಾ, "ನಾನು ಆಕೆಗೆ ನಟನೆ ಮತ್ತು ಸಂಭಾಷಣೆ ಹೇಳಿಕೊಟ್ಟಿದ್ದೇನೆ, ಈಗ ಅದೇ ನಟನೆಯನ್ನು ಬಳಸಿ ನನ್ನನ್ನು ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ. ಅಲ್ಲದೆ, ಮೋನಾಲಿಸಾ ಅವರ ಕುಟುಂಬದ ಏಳೆಂಟು ಸದಸ್ಯರು ಇಂದಿಗೂ ತಮ್ಮ ಮನೆಯಲ್ಲೇ ವಾಸವಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಅವರು ಹೊರಹಾಕಿದ್ದಾರೆ.

ಮೋನಾಲಿಸಾ ತನ್ನ ಸಂಗಾತಿಯೊಂದಿಗೆ ಓಡಿಹೋಗಲು ಪ್ರಯತ್ನಿಸಿದಾಗ ತಾವು ಕುಟುಂಬದ ಪರವಾಗಿ ನಿಂತಿದ್ದೇ ಈ ಎಲ್ಲಾ ಆರೋಪಗಳಿಗೆ ಕಾರಣ ಎಂದು ಮಿಶ್ರಾ ಪ್ರತಿಪಾದಿಸಿದ್ದಾರೆ. "ಒಂದು ವೇಳೆ ಅಂತಹ ಘಟನೆ ನಡೆದಿದ್ದರೆ ಆಕೆ ಅಂದೇ ದೂರು ನೀಡಬಹುದಿತ್ತು, ಚಿತ್ರ ಬಿಡುಗಡೆಯ ಹಂತದಲ್ಲಿ ಇಂತಹ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ" ಎಂದು ಅವರು ಪ್ರಶ್ನಿಸಿದ್ದಾರೆ. ಇದೇ ವೇಳೆ, ನಟಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಘೋಷಿಸಿರುವ ಅವರು, ವಿವಾದದ ಹಿನ್ನೆಲೆಯಲ್ಲಿ ಈ ಸಿನಿಮಾ ಇನ್ನು ಮುಂದೆ ಮುಂದುವರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ನಟಿಯೊಬ್ಬರಿಗೆ ವಂಚಿಸಿದ ಆರೋಪದ ಮೇಲೆ ಈ ಹಿಂದೆ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಸನೋಜ್ ಮಿಶ್ರಾ ಅವರಿಗೆ, ಮೋನಾಲಿಸಾ ಅವರ ಈ ಹೊಸ ಆರೋಪಗಳು ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಈ ಕಿರುಕುಳದ ಕುರಿತು ಶೀಘ್ರದಲ್ಲೇ ಅಧಿಕೃತವಾಗಿ ಪೊಲೀಸ್ ದೂರು ದಾಖಲಿಸುವುದಾಗಿ ನಟಿ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮೋನಾಲಿಸಾ ಪರವಾಗಿ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗುತ್ತಿದ್ದು, ಚಿತ್ರರಂಗದ ಈ ಕರಾಳ ಮುಖದ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.

ಮಿಶ್ರಾ ಮೇಲೆ ಇವೆ ಕೇಸ್​​ಗಳು

ಚಲನಚಿತ್ರರಂಗದಲ್ಲಿ 'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್' ನಂತಹ ವಿವಾದಾತ್ಮಕ ಚಿತ್ರಗಳ ಮೂಲಕ ಸದ್ದು ಮಾಡುತ್ತಿರುವ ಸನೋಜ್ ಮಿಶ್ರಾ ವಿರುದ್ಧ ದಶಕಗಳ ಹಿಂದೆಯೇ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ. ಮೂಲತಃ ಉತ್ತರ ಪ್ರದೇಶದವರಾದ ಮಿಶ್ರಾ ಅವರು ಚಿತ್ರರಂಗಕ್ಕೆ ಬರುವ ಮೊದಲು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. ಲಕ್ನೋ ಮತ್ತು ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಅವರ ವಿರುದ್ಧ ಈ ಹಿಂದೆ ಹತ್ತಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಇವುಗಳಲ್ಲಿ ಪ್ರಮುಖವಾಗಿ ಕೊಲೆ ಯತ್ನ, ಸುಲಿಗೆ, ಬೆದರಿಕೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಕೇಸುಗಳು ದಾಖಲಾಗಿದ್ದವು ಎಂಬುದು ಪೊಲೀಸ್ ಮೂಲಗಳ ಮಾಹಿತಿ. 90ರ ದಶಕದ ಅಂತ್ಯದಲ್ಲಿ ಮತ್ತು 2000ರ ಆರಂಭದ ವರ್ಷಗಳಲ್ಲಿ ಮಿಶ್ರಾ ಅವರ ಹೆಸರು ಸ್ಥಳೀಯ ಅಪರಾಧ ಜಗತ್ತಿನಲ್ಲಿ ಕೇಳಿಬರುತ್ತಿತ್ತು.

ಒಂದು ಕಾಲದಲ್ಲಿ ಪೊಲೀಸರ ವಾಂಟೆಡ್ ಪಟ್ಟಿಯಲ್ಲಿದ್ದ ಇವರು, ನಂತರದ ದಿನಗಳಲ್ಲಿ ತಮ್ಮ ಹಾದಿಯನ್ನು ಬದಲಿಸಿ ಚಿತ್ರರಂಗದತ್ತ ಮುಖ ಮಾಡಿದರು. ಸಿನಿಮಾ ರಂಗಕ್ಕೆ ಬಂದ ನಂತರವೂ ಅವರು ನಿರ್ದೇಶಿಸುವ ಚಿತ್ರಗಳ ಕಥಾವಸ್ತುಗಳು ಅನೇಕ ಬಾರಿ ಕಾನೂನು ಸಂಘರ್ಷಕ್ಕೆ ಕಾರಣವಾಗಿವೆ. ಪಶ್ಚಿಮ ಬಂಗಾಳದ ಕುರಿತಾದ ಅವರ ಇತ್ತೀಚಿನ ಚಿತ್ರದ ವಿವಾದದ ಸಂದರ್ಭದಲ್ಲೂ, ಅವರ ಹಳೆಯ ಕ್ರಿಮಿನಲ್ ದಾಖಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ ಮತ್ತೆ ಚರ್ಚೆಗೆ ಬಂದಿವೆ.

Read More
Next Story