
ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಹೃದಯಘಾತವಾಗಿದೆ ಎಂಬ ಸುದ್ದಿ ವೈರಲ್ ಆಗಿದೆ.
ಸಂಜಯ್ ಲೀಲಾ ಬನ್ಸಾಲಿಗೆ ಹೃದಯಘಾತ; ಕುಟುಂಬದ ಸ್ಪಷ್ಟನೆ ಏನು?
ಖ್ಯಾತ ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ 63ನೇ ಜನ್ಮದಿನವನ್ನು ಆಚರಿಸಿಕೊಂಡ ಬೆನ್ನಲ್ಲೇ, ಅವರಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿತ್ತು.
ಖ್ಯಾತ ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಹೃದಯಾಘಾತವಾಗಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ್ದು, ಇದು ಅಭಿಮಾನಿಗಳಲ್ಲಿ ತೀವ್ರ ಆತಂಕ ಮೂಡಿಸಿತ್ತು. ಫೆಬ್ರವರಿ 24ರಂದು ತಮ್ಮ 63ನೇ ಜನ್ಮದಿನವನ್ನು ಆಚರಿಸಿಕೊಂಡ ಬೆನ್ನಲ್ಲೇ, ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುಳ್ಳು ಸುದ್ದಿಗಳು ಹರಿದಾಡಿದ್ದವು.
ಆದರೆ, ಈ ಕುರಿತು ಬನ್ಸಾಲಿ ಅವರ ಆಪ್ತ ಮೂಲಗಳು ಮತ್ತು ಕುಟುಂಬ ವರ್ಗ ಅಧಿಕೃತ ಸ್ಪಷ್ಟನೆ ನೀಡಿ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ತಿಳಿಸಿವೆ.
ಬನ್ಸಾಲಿ ಅವರ ತಂಡ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯಲ್ಲಿ, ನಿರ್ದೇಶಕರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಮತ್ತು ಅವರು ಕೇವಲ ವಾಡಿಕೆಯ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ತೆರಳಿದ್ದರು ಎಂದು ಸ್ಪಷ್ಟಪಡಿಸಲಾಗಿದೆ. ``ಸಂಜಯ್ ಲೀಲಾ ಬನ್ಸಾಲಿ ಅವರು ಆರಾಮವಾಗಿದ್ದಾರೆ, ಯಾವುದೇ ಆತಂಕದ ಅಗತ್ಯವಿಲ್ಲ. ಅಭಿಮಾನಿಗಳ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು" ಎಂದು ಅವರ ಕುಟುಂಬ ತಿಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ನಂಬದಂತೆ ಮತ್ತು ಇಂತಹ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳದಂತೆ ತಂಡವು ವಿನಂತಿಸಿದೆ.
ಪ್ರಸ್ತುತ ಸಂಜಯ್ ಲೀಲಾ ಬನ್ಸಾಲಿ ಅವರು ತಮ್ಮ ಮಹತ್ವಾಕಾಂಕ್ಷೆಯ 'ಲವ್ ಆಂಡ್ ವಾರ್' ಚಿತ್ರದ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ನ ‘ಶೋ ಮ್ಯಾನ್’ ಸಂಜಯ್ ಲೀಲಾ ಬನ್ಸಾಲಿ ಅವರ ಬಹುನಿರೀಕ್ಷಿತ ‘ಲವ್ ಆ್ಯಂಡ್ ವಾರ್’ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಕಳೆದ ಕೆಲವು ದಿನಗಳಿಂದ ಹಬ್ಬಿದ್ದ ವದಂತಿಗಳಿಗೆ ಇದೀಗ ತೆರೆಬಿದ್ದಿದೆ. ಸಿನಿಮಾ 2027ಕ್ಕೆ ಮುಂದೂಡಲ್ಪಟ್ಟಿದೆ ಎಂಬ ಸುದ್ದಿಯನ್ನು ಚಿತ್ರತಂಡದ ಆಪ್ತ ಮೂಲಗಳು ತಳ್ಳಿಹಾಕಿದ್ದು, ಅಂದುಕೊಂಡಂತೆ 2026ರಲ್ಲೇ ಸಿನಿಮಾ ತೆರೆಕಾಣಲಿದೆ ಎಂದು ಸ್ಪಷ್ಟಪಡಿಸಿವೆ. ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ಅವರಂತಹ ಘಟಾನುಘಟಿ ಕಲಾವಿದರ ಸಂಗಮವಿರುವ ಈ ಚಿತ್ರದ ಬಗ್ಗೆ ಬಾಲಿವುಡ್ ಅಂಗಳದಲ್ಲಿ ಭಾರೀ ಕುತೂಹಲವಿದೆ.
ಬಿಡುಗಡೆ ದಿನಾಂಕದ ಗೊಂದಲವೇನಿತ್ತು?
ಚಿತ್ರದ ಬಹುಪಾಲು ಶೂಟಿಂಗ್ ಇನ್ನೂ ಬಾಕಿ ಇದೆ ಮತ್ತು ವಿಎಫ್‌ಎಕ್ಸ್ ಕೆಲಸಗಳಿಗೆ ಹೆಚ್ಚಿನ ಸಮಯ ಹಿಡಿಯುವುದರಿಂದ ಸಿನಿಮಾ 2027ಕ್ಕೆ ಹೋಗಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿತ್ತು. ಆದರೆ, ಈ ವರದಿಗಳು ಸುಳ್ಳು ಎಂದು ಬನ್ಸಾಲಿ ಆಪ್ತ ಮೂಲಗಳು ತಿಳಿಸಿವೆ. "ಚಿತ್ರೀಕರಣ ನಿಗದಿತ ವೇಗದಲ್ಲಿ ಸಾಗುತ್ತಿದೆ. ಈಗಾಗಲೇ ಪ್ರಮುಖ ದೃಶ್ಯಗಳು ಹಾಗೂ ಒಂದು ಹಾಡಿನ ಚಿತ್ರೀಕರಣವನ್ನು ಬನ್ಸಾಲಿ ಪೂರ್ಣಗೊಳಿಸಿದ್ದಾರೆ. ಹೀಗಾಗಿ 2026ರಲ್ಲೇ (ಬಹುಶಃ ಮಾರ್ಚ್ ಅಥವಾ ಈದ್ ಸಮಯದಲ್ಲಿ) ಸಿನಿಮಾ ಬಿಡುಗಡೆಯಾಗುವುದು ಖಚಿತ," ಎಂದು ಸ್ಪಷ್ಟಪಡಿಸಲಾಗಿದೆ.

