
ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಆರೋಗ್ಯದಲ್ಲಿ ಚೇತರಿಕೆ
ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಗುಣಮುಖ: ಇಂದು ಆಸ್ಪತ್ರೆಯಿಂದ ಬಿಡುಗಡೆ
ಬಾಲಿವುಡ್‌ನ ಹಿರಿಯ ಚಿತ್ರಕಥೆಗಾರ ಹಾಗೂ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ (90) ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದು, ಇಂದು ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.
ಹಿರಿಯ ಚಿತ್ರಕಥೆಗಾರ ಹಾಗೂ ಬಾಲಿವುಡ್ ಸುಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರು ಸಂಪೂರ್ಣವಾಗಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಕಳೆದ ಒಂದು ತಿಂಗಳಿನಿಂದ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಈಗ 90 ವರ್ಷ ವಯಸ್ಸು.
ವಯೋಸಹಜ ಆರೋಗ್ಯ ಸಮಸ್ಯೆಗಳಿಂದಾಗಿ ಫೆಬ್ರವರಿ 17 ರಂದು ಸಲೀಂ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆಯ ವೇಳೆ ಅವರ ಮೆದುಳಿನಲ್ಲಿ ಸಣ್ಣ ಪ್ರಮಾಣದ ರಕ್ತಸ್ರಾವವಾಗಿರುವುದು ಪತ್ತೆಯಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ವೈದ್ಯರು ಅವರಿಗೆ 'ಡಿಜಿಟಲ್ ಸಬ್ಟ್ರಾಕ್ಷನ್ ಆಂಜಿಯೋಗ್ರಫಿ' ಎಂಬ ವಿಶೇಷ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದರು. ಚಿಕಿತ್ಸೆಯ ನಂತರ ಕೆಲವು ದಿನಗಳ ಕಾಲ ವೆಂಟಿಲೇಟರ್ ಸಹಾಯದೊಂದಿಗೆ ಅವರಿಗೆ ನಿಗಾ ವಹಿಸಲಾಗಿತ್ತು. ಹಿರಿಯ ವಯಸ್ಸಿನ ಕಾರಣದಿಂದಾಗಿ ಚೇತರಿಕೆ ಸ್ವಲ್ಪ ವಿಳಂಬವಾದರೂ, ಈಗ ಅವರು ಸಂಪೂರ್ಣ ಚೇತರಿಸಿಕೊಂಡಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ಪುತ್ರರಾದ ಸಲ್ಮಾನ್ ಖಾನ್, ಅರ್ಬಾಜ್ ಖಾನ್ ಮತ್ತು ಸೊಹೈಲ್ ಖಾನ್ ನಿರಂತರವಾಗಿ ತಂದೆಯ ಆರೈಕೆಯಲ್ಲಿದ್ದರು. ಅಷ್ಟೇ ಅಲ್ಲದೆ, ಬಾಲಿವುಡ್ ದಿಗ್ಗಜರಾದ ಶಾರುಖ್ ಖಾನ್, ಅಮೀರ್ ಖಾನ್ ಹಾಗೂ ಸಲೀಂ ಅವರ ಆತ್ಮೀಯ ಗೆಳೆಯ ಜಾವೇದ್ ಅಖ್ತರ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಕಳೆದ ವಾರವಷ್ಟೇ ಇಫ್ತಾರ್ ಕೂಟವೊಂದರಲ್ಲಿ ಭಾಗವಹಿಸಿದ್ದ ಅರ್ಬಾಜ್ ಖಾನ್, ತಂದೆಯ ಆರೋಗ್ಯ ಸುಧಾರಿಸುತ್ತಿದ್ದು ಶೀಘ್ರವೇ ಮನೆಗೆ ಮರಳಲಿದ್ದಾರೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದರು.
60ರ ದಶಕದಲ್ಲಿ ನಟನಾಗಿ ವೃತ್ತಿಜೀವನ ಆರಂಭಿಸಿದ್ದ ಸಲೀಂ ಖಾನ್, ನಂತರ ಬರಹಗಾರರಾಗಿ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದರು. ಜಾವೇದ್ ಅಖ್ತರ್ ಅವರೊಂದಿಗೆ ಜೋಡಿಯಾಗಿ 'ಶೋಲೆ', 'ದೀವಾರ್', 'ಜಂಜೀರ್' ಮತ್ತು 'ಮಿಸ್ಟರ್ ಇಂಡಿಯಾ' ಅಂತಹ ಸಾರ್ವಕಾಲಿಕ ಹಿಟ್ ಚಿತ್ರಗಳನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸದ್ಯ ಅವರ ಅಭಿಮಾನಿಗಳು ಮತ್ತು ಕುಟುಂಬಸ್ಥರು ಸಲೀಂ ಖಾನ್ ಅವರ ಸುದೀರ್ಘ ಆಯಸ್ಸು ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.
ಸಲೀಂ ಖಾನ್ ಅವರು ಎರಡು ಮದುವೆಯಾಗಿದ್ದಾರೆ. ಅವರ ಮೊದಲ ಪತ್ನಿ ಸುಶೀಲಾ ಚರಕ್ ಮತ್ತು ಎರಡನೇ ಪತ್ನಿ ಹೆಲೆನ್ ರಿಚರ್ಡ್ಸನ್. ಅವರು ಸಲ್ಮಾನ್, ಸೋಹೈಲ್, ಅರ್ಬಾಜ್, ಅಲ್ವಿರಾ ಮತ್ತು ಅರ್ಪಿತಾ ಖಾನ್ ಅವರ ತಂದೆಯಾಗಿದ್ದಾರೆ.

