ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ; ಆಗಿದ್ದೇನು?
x

ಸಲೀಂ ಖಾನ್ ಅವರಿಗೆ ಹೆಚ್ಚಿನ ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಂಡಿತ್ತು.

ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ; ಆಗಿದ್ದೇನು?

ಸಲೀಂ ಖಾನ್ ಅವರಿಗೆ ಹೆಚ್ಚಿನ ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಂಡಿತ್ತು. ಮುಂಜಾಗ್ರತಾ ಕ್ರಮವಾಗಿ ವೈದ್ಯರು ಅವರನ್ನು ವೆಂಟಿಲೇಟರ್ ಸಹಾಯದೊಂದಿಗೆ ಚಿಕಿತ್ಸೆ ನೀಡುತ್ತಿದ್ದಾರೆ.


Click the Play button to hear this message in audio format

ಬಾಲಿವುಡ್‌ನ ಹಿರಿಯ ಚಿತ್ರಕಥೆಗಾರ ಮತ್ತು ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ (90) ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಬೆಳಗ್ಗೆ ಅವರಿಗೆ ಸಣ್ಣ ಪ್ರಮಾಣದ ಬ್ರೈನ್ ಹೆಮರೇಜ್ (ಮೆದುಳಿನಲ್ಲಿ ರಕ್ತಸ್ರಾವ) ಕಾಣಿಸಿಕೊಂಡಿದ್ದರಿಂದ ತುರ್ತು ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ.

ವೈದ್ಯರ ಪ್ರಕಾರ, ಸಲೀಂ ಖಾನ್ ಅವರಿಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದು, ಮುಂಜಾಗ್ರತಾ ಕ್ರಮವಾಗಿ ವೆಂಟಿಲೇಟರ್ ನೆರವು ನೀಡಲಾಗಿದೆ. ಲೀಲಾವತಿ ಆಸ್ಪತ್ರೆಯ ಖ್ಯಾತ ವೈದ್ಯ ಡಾ. ಜಲೀಲ್ ಪಾರ್ಕರ್ ಅವರು, "ಸಲೀಂ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಮೆದುಳಿನ ಸ್ಥಿತಿಯನ್ನು ಪರೀಕ್ಷಿಸಲು 'ಡಿಜಿಟಲ್ ಸಬ್ಟ್ರಾಕ್ಷನ್ ಆಂಜಿಯೋಗ್ರಫಿ' ಎಂಬ ಸಾಮಾನ್ಯ ವೈದ್ಯಕೀಯ ಪ್ರಕ್ರಿಯೆಯನ್ನು ನಡೆಸಲಾಗಿದೆ," ಎಂದು ಸ್ಪಷ್ಟಪಡಿಸಿದ್ದಾರೆ.

ಆಸ್ಪತ್ರೆಗೆ ದೌಡಾಯಿಸಿದ ಸಲ್ಮಾನ್ ಖಾನ್

ತಂದೆಯ ಅನಾರೋಗ್ಯದ ಸುದ್ದಿ ತಿಳಿಯುತ್ತಿದ್ದಂತೆಯೇ ನಟ ಸಲ್ಮಾನ್ ಖಾನ್ ಅವರು ಬಿಗಿ ಭದ್ರತೆಯೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದರು. ಸಹೋದರರಾದ ಅರ್ಬಾಜ್ ಖಾನ್, ಸೊಹೈಲ್ ಖಾನ್ ಹಾಗೂ ಸಹೋದರಿಯರಾದ ಅಲ್ವಿರಾ ಮತ್ತು ಅರ್ಪಿತಾ ಕೂಡ ಆಸ್ಪತ್ರೆಯಲ್ಲಿದ್ದು, ತಂದೆಯ ಆರೈಕೆಯಲ್ಲಿ ತೊಡಗಿದ್ದಾರೆ. ಸಲ್ಮಾನ್ ಖಾನ್ ಅವರು ತಂದೆಗೆ ಅತ್ಯಂತ ಆಪ್ತರಾಗಿದ್ದು, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅವರೊಂದಿಗೆ ಸಮಯ ಕಳೆಯುತ್ತಾರೆ.

ಗಣ್ಯರ ಭೇಟಿ ಮತ್ತು ಹಾರೈಕೆ

ಸಲೀಂ ಖಾನ್ ಅವರ ದೀರ್ಘಕಾಲದ ಗೆಳೆಯ ಹಾಗೂ ಸಹ-ಲೇಖಕ ಜಾವೇದ್ ಅಖ್ತರ್, ನಟ ಸಂಜಯ್ ದತ್, ಮಲೈಕಾ ಅರೋರಾ ಸಹೋದರಿ ಅಮೃತಾ ಅರೋರಾ, ಅರ್ಬಾಜ್ ಖಾನ್ ಪತ್ನಿ ಶೌರಾ ಖಾನ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಇದೇ ವೇಳೆ, ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ ಸೋಮಿ ಅಲಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. "ಸಲೀಂ ಖಾನ್ ಅವರು ನನಗೆ ತಂದೆಯ ಸಮಾನ. ನಾನು ಅವರ ಮನೆಯಲ್ಲಿದ್ದಾಗ ನನ್ನನ್ನು ಮಗಳಂತೆ ನೋಡಿಕೊಂಡಿದ್ದರು. ಅವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ," ಎಂದು ಬರೆದುಕೊಂಡಿದ್ದಾರೆ.

1970-80ರ ದಶಕದಲ್ಲಿ 'ಶೋಲೆ', 'ದೀವಾರ್', 'ಜಂಜೀರ್' ನಂತಹ ಸಾರ್ವಕಾಲಿಕ ಹಿಟ್ ಚಿತ್ರಗಳನ್ನು ನೀಡಿದ್ದ 'ಸಲೀಂ-ಜಾವೇದ್' ಜೋಡಿಯ ಸಲೀಂ ಖಾನ್, ಭಾರತೀಯ ಚಿತ್ರರಂಗದ ದಂತಕಥೆಯಾಗಿದ್ದಾರೆ. ಅವರ ಆರೋಗ್ಯ ಚೇತರಿಕೆಗಾಗಿ ಅಪಾರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

Read More
Next Story