
ಬಾಲಿವುಡ್ ನಟ ಸಲ್ಮಾನ್ ಖಾನ್ ಬಿಗ್ ಬಾಸ್ ಸೀಸನ್ 20ರ ಮೂಲಕ ನಿರೂಪಕರಾಗಿ ಮರಳಲಿದ್ದಾರೆ.
ಬಿಗ್ ಬಾಸ್ 20ಗೆ ಸಲ್ಮಾನ್ ಖಾನ್ ಕಮ್‌ಬ್ಯಾಕ್: ಸೆಪ್ಟೆಂಬರ್‌ನಿಂದ ಶೋ ಆರಂಭ?
ಬಾಲಿವುಡ್ ನಟ ಸಲ್ಮಾನ್ ಖಾನ್ ಬಿಗ್ ಬಾಸ್ ಸೀಸನ್ 20ರ ಮೂಲಕ ನಿರೂಪಕರಾಗಿ ಮರಳಲಿದ್ದು, ಈ ಹೊಸ ಸೀಸನ್ ಸೆಪ್ಟೆಂಬರ್ 21 ರಿಂದ ಪ್ರಸಾರವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತೊಮ್ಮೆ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ನಿರೂಪಕರಾಗಿ ಮರಳಲು ಸಜ್ಜಾಗಿದ್ದಾರೆ.
ಬಿಗ್ ಬಾಸ್ ಸೀಸನ್ 19 ಮುಕ್ತಾಯಗೊಂಡು, ಗೌರವ್ ಖನ್ನಾ ಟ್ರೋಫಿ ಗೆದ್ದ ನಂತರ ಮುಂದಿನ ಸೀಸನ್ ಬಗ್ಗೆ ಯಾವುದೇ ಅಧಿಕೃತ ಅಪ್‌ಡೇಟ್ ಸಿಕ್ಕಿರಲಿಲ್ಲ. ಆದರೆ ಈಗ ಬಿಗ್ ಬಾಸ್ ಸೀಸನ್ 20ರ ಲೇಟೆಸ್ಟ್ ಮಾಹಿತಿ ಹೊರಬಿದ್ದಿದ್ದು, ಸೆಪ್ಟೆಂಬರ್ 21 ರಿಂದ ಈ ಹೊಸ ಸೀಸನ್ ಪ್ರಸಾರವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಸಲ್ಮಾನ್ ಖಾನ್ ಅವರ ಶೂಟಿಂಗ್ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ವಾಹಿನಿ ಹಾಗೂ ನಿರ್ಮಾಣ ಸಂಸ್ಥೆಯು ಈ ದಿನಾಂಕವನ್ನು ನಿಗದಿಪಡಿಸಲು ಚರ್ಚೆ ನಡೆಸುತ್ತಿದೆ. ನಟ ಸಲ್ಮಾನ್ ಖಾನ್ ಸದ್ಯ ನಯನತಾರಾ ನಾಯಕಿಯಾಗಿ ನಟಿಸುತ್ತಿರುವ ನಿರ್ದೇಶಕ ವಂಶಿ ಪೈಡಿಪಲ್ಲಿ ಅವರ ಹೊಸ ಚಿತ್ರದ ಪ್ರಮುಖ ಭಾಗದ ಚಿತ್ರೀಕರಣವನ್ನು ಮುಗಿಸಲು ಯೋಜಿಸುತ್ತಿದ್ದಾರೆ. ಚಿತ್ರದ ಶೂಟಿಂಗ್‌ಗೆ ಯಾವುದೇ ತೊಂದರೆಯಾಗದಂತೆ ಬಿಗ್ ಬಾಸ್ ಶೋಗೆ ಡೇಟ್ಸ್ ಹೊಂದಿಸಲು ಅವರ ತಂಡ ಕೆಲಸ ಮಾಡುತ್ತಿದೆ.
ಈ ಹೊಸ ಸೀಸನ್‌ಗಾಗಿ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಇನ್ನು ಅಧಿಕೃತವಾಗಿ ಆರಂಭವಾಗಬೇಕಿದೆ. ಆದರೆ ಕಾಸ್ಟಿಂಗ್ ತಂಡವು ಈಗಾಗಲೇ ಪ್ರಮುಖ ಟಿವಿ ತಾರೆಯರು, ಡಿಜಿಟಲ್ ಒಟಿಟಿ ಸೆಲೆಬ್ರಿಟಿಗಳು ಹಾಗೂ ಹಳೆಯ ಸೀಸನ್‌ಗಳ ಕೆಲವು ಜನಪ್ರಿಯ ಸ್ಪರ್ಧಿಗಳನ್ನು ಸಂಪರ್ಕಿಸಲು ತಯಾರಿ ನಡೆಸುತ್ತಿದೆ. ಇದರೊಂದಿಗೆ ಸಲ್ಮಾನ್ ಖಾನ್ ನಟನೆಯ, ಅಪೂರ್ವ ಲಖಿಯಾ ನಿರ್ದೇಶನದ 'ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್' ಸಿನಿಮಾ ಕೂಡ ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗುತ್ತಿದೆ.

