
ರಣಬೀರ್ 'ಕಾಕ್‌ಟೇಲ್' ಸಿನಿಮಾ ರಿಜೆಕ್ಟ್ ಮಾಡಿದ್ದೇಕೆ
'ಕಾಕ್‌ಟೇಲ್' ಸಿನಿಮಾದ ಸೀಕ್ರೆಟ್ ಬ್ರೇಕ್ ಮಾಡಿದ ಸೈಫ್
ದೀಪಿಕಾ ಪಡುಕೋಣೆಯವರ 'ವೆರೋನಿಕಾ' ಪಾತ್ರ ಅತ್ಯಂತ ಪ್ರಬಲವಾಗಿದ್ದ ಕಾರಣ ರಣಬೀರ್ ಕಪೂರ್ ಮತ್ತು ಇಮ್ರಾನ್ ಖಾನ್ 'ಕಾಕ್‌ಟೇಲ್' ಚಿತ್ರವನ್ನು ತಿರಸ್ಕರಿಸಿದ್ದರು ಎಂದು ಸೈಫ್ ಅಲಿ ಖಾನ್ ಬಿಚ್ಚಿಟ್ಟಿದ್ದಾರೆ.
ಬಾಲಿವುಡ್‌ನ ಸಾರ್ವಕಾಲಿಕ ಹಿಟ್ ಚಿತ್ರಗಳಲ್ಲಿ ಒಂದಾದ 'ಕಾಕ್‌ಟೇಲ್' ಸಿನಿಮಾ ಬಿಡುಗಡೆಯಾಗಿ ಹಲವು ವರ್ಷಗಳೇ ಕಳೆದಿದ್ದರೂ, ಇಂದಿಗೂ ಪ್ರೇಕ್ಷಕರ ನೆಚ್ಚಿನ ಸಿನಿಮಾವಾಗಿ ಉಳಿದಿದೆ. ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ಶಹೀದ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೊನ್ ನಟನೆಯ 'ಕಾಕ್‌ಟೇಲ್ 2' ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಮೊದಲ ದಿನವೇ ವಿಶ್ವಾದ್ಯಂತ 20 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಬೆನ್ನಲ್ಲೇ, 2012ರಲ್ಲಿ ತೆರೆಕಂಡಿದ್ದ ಮೂಲ 'ಕಾಕ್‌ಟೇಲ್' ಚಿತ್ರದ ಕುರಿತಾದ ಕೆಲವು ಆಸಕ್ತಿದಾಯಕ ಸಂಗತಿಗಳು ಮತ್ತೆ ಮುನ್ನೆಲೆಗೆ ಬಂದಿವೆ. ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಸೈಫ್ ಅಲಿ ಖಾನ್ ಅವರು, ತಾವು ಈ ಪಾತ್ರಕ್ಕೆ ಮೊದಲ ಆಯ್ಕೆಯಾಗಿರಲಿಲ್ಲ ಎಂಬ ಆಘಾತಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸೈಫ್ ಅಲಿ ಖಾನ್, ಚಿತ್ರದ ನಿರ್ಮಾಪಕರು ಈಗಾಗಲೇ ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ಅವರನ್ನು ನಾಯಕಿಯರನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಆದರೆ ಅವರಿಗೆ ಸೂಕ್ತ ನಾಯಕ ನಟ ಸಿಗುತ್ತಿರಲಿಲ್ಲ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಿರ್ವಹಿಸಿದ 'ವೆರೋನಿಕಾ' ಎಂಬ ಪಾತ್ರವು ಎಷ್ಟು ಪ್ರಬಲವಾಗಿತ್ತೆಂದರೆ, ಅದರ ಮುಂದೆ ಹೀರೋ ಪಾತ್ರ ಮಂಕಾಗಬಹುದು ಎಂಬ ಭಯದಿಂದ ಚಿತ್ರರಂಗದ ಪ್ರಮುಖ ನಾಯಕ ನಟರು ಈ ಸಿನಿಮಾವನ್ನು ತಿರಸ್ಕರಿಸುತ್ತಿದ್ದರು ಎಂದು ತಿಳಿಸಿದ್ದಾರೆ. ಈ ಚಿತ್ರದ ನಾಯಕನ ಪಾತ್ರಕ್ಕಾಗಿ ನಿರ್ಮಾಪಕರು ಮೊದಲು ರಣಬೀರ್ ಕಪೂರ್ ಮತ್ತು ಇಮ್ರಾನ್ ಖಾನ್ ಅವರನ್ನು ಸಂಪರ್ಕಿಸಿದ್ದರು, ಆದರೆ ಅವರಿಬ್ಬರೂ ಈ ಆಫರ್ ಅನ್ನು ರಿಜೆಕ್ಟ್ ಮಾಡಿದ್ದರು ಎಂದು ಸೈಫ್ ಬಹಿರಂಗಪಡಿಸಿದ್ದಾರೆ.
ದೊಡ್ಡ ನಟರೆಲ್ಲರೂ ನಟಿಸಲು ಹಿಂಜರಿದಾಗ, ತಾವೇ ಮುಂದೆ ಬಂದು ಆ ಪಾತ್ರವನ್ನು ಒಪ್ಪಿಕೊಂಡಿದ್ದಾಗಿ ಸೈಫ್ ಹೇಳಿದ್ದಾರೆ. ತಾವಿಂದು ಈ ಸಿನಿಮಾವನ್ನು ಒಪ್ಪಿಕೊಂಡಿದ್ದಕ್ಕಾಗಿ ರಣಬೀರ್ ಮತ್ತು ಇಮ್ರಾನ್ ಅವರು ತಮಗೆ ಧನ್ಯವಾದ ಹೇಳಬೇಕು ಎಂದು ಅವರು ತಮಾಷೆಯಾಗಿ ನಕ್ಕಿದ್ದಾರೆ. ನಿರ್ದೇಶಕ ಹೋಮಿ ಅದಜಾನಿಯಾ ಅವರೊಂದಿಗೆ ಕೆಲಸ ಮಾಡಿದ್ದು ತಮಗೆ ತುಂಬಾ ಖುಷಿ ಕೊಟ್ಟಿದೆ ಎಂದು ಸೈಫ್ ನೆನಪಿಸಿಕೊಂಡಿದ್ದಾರೆ.
ಮತ್ತೊಂದು ಸ್ವಾರಸ್ಯಕರ ಸಂಗತಿಯೆಂದರೆ, ರಣಬೀರ್ ಕಪೂರ್ ತಾವು ಈ ಚಿತ್ರವನ್ನು ತಿರಸ್ಕರಿಸಿದ್ದಷ್ಟೇ ಅಲ್ಲದೆ, ದೀಪಿಕಾ ಪಡುಕೋಣೆ ಅವರಿಗೂ ಈ ಸಿನಿಮಾದಲ್ಲಿ ನಟಿಸದಂತೆ ಸಲಹೆ ನೀಡಿದ್ದರಂತೆ. ಆದರೆ ದೀಪಿಕಾ ತಮ್ಮ ಅಂತಃಪ್ರಜ್ಞೆಯನ್ನು ನಂಬಿ ಚಿತ್ರವನ್ನು ಒಪ್ಪಿಕೊಂಡರು. ಸಿನಿಮಾ ಬಿಡುಗಡೆಯಾದ ನಂತರ ದೀಪಿಕಾ ಅವರ ವೆರೋನಿಕಾ ಪಾತ್ರವು ಜಗತ್ತಿನಾದ್ಯಂತ ಸಂಚಲನ ಮೂಡಿಸಿತು ಮತ್ತು ಅವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿತು. ಚಿತ್ರದ ಯಶಸ್ಸಿನ ನಂತರ, ಪ್ರೇಕ್ಷಕರು ದೀಪಿಕಾ ಅವರನ್ನು 'ವೆರೋನಿಕಾ' ಎಂದೇ ಕರೆಯಲು ಪ್ರಾರಂಭಿಸಿದರು. ತಮ್ಮ ಅಂದಿನ ನಿರ್ಧಾರ ತಪ್ಪಾಗಿತ್ತು ಎಂಬುದನ್ನು ರಣಬೀರ್ ಕಪೂರ್ ನಂತರದ ದಿನಗಳಲ್ಲಿ ಒಪ್ಪಿಕೊಂಡಿದ್ದರು ಎಂದು ವರದಿಯಾಗಿದೆ.

