ಟಾಕ್ಸಿಕ್, ಧುರಂಧರ್ ಸಿನಿಮಾಗಳ ಬಗ್ಗೆ ಆರ್‌ಜಿವಿ ವಿವಾದಾತ್ಮಕ ಪೋಸ್ಟ್
x

ರಾಮ್ ಗೋಪಾಲ್ ವರ್ಮಾ

ಟಾಕ್ಸಿಕ್, ಧುರಂಧರ್ ಸಿನಿಮಾಗಳ ಬಗ್ಗೆ ಆರ್‌ಜಿವಿ ವಿವಾದಾತ್ಮಕ ಪೋಸ್ಟ್

ನಿರ್ದೇಶಕ ಆದಿತ್ಯ ಧರ್ ಅವರ ಕಾರ್ಯವೈಖರಿಯನ್ನು ಮುಕ್ತವಾಗಿ ಶ್ಲಾಘಿಸಿರುವ ರಾಮ್ ಗೋಪಾಲ್ ವರ್ಮಾ, ಸಿನಿಮಾ ಸಂಸ್ಕೃತಿಯಲ್ಲಿ ಬದಲಾವಣೆ ತರುವ ಅವರ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ.


Click the Play button to hear this message in audio format

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸದಾ ತಮ್ಮ ನೇರ ನುಡಿ ಮತ್ತು ವಿಭಿನ್ನ ಆಲೋಚನೆಗಳಿಂದಲೇ ಸುದ್ದಿಯಲ್ಲಿರುವವರು. ಇದೀಗ 2026ರ ಬಹುನಿರೀಕ್ಷಿತ ಬಾಕ್ಸ್ ಆಫೀಸ್ ಹಣಾಹಣಿಯ ಬಗ್ಗೆ ಆರ್‌ಜಿವಿ ಹಂಚಿಕೊಂಡಿರುವ ವಿಶ್ಲೇಷಣಾತ್ಮಕ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮಾರ್ಚ್ 19 ರಂದು ತೆರೆಗೆ ಬರಲಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಮತ್ತು ರಣವೀರ್ ಸಿಂಗ್ ನಟನೆಯ 'ಧುರಂಧರ್: ದಿ ರಿವೆಂಜ್' ಚಿತ್ರಗಳ ನಡುವಿನ ಪೈಪೋಟಿಯನ್ನು ರಾಮ್ ಗೋಪಾಲ್ ವರ್ಮಾ ಅವರು ಕೇವಲ ಎರಡು ಸಿನಿಮಾಗಳ ನಡುವಿನ ಯುದ್ಧ ಎನ್ನುವುದಕ್ಕಿಂತ, ಸಿನಿಮಾ ಪ್ರಪಂಚದ ಎರಡು ಭಿನ್ನ ಸಂಸ್ಕೃತಿಗಳ ನಡುವಿನ ಸಂಘರ್ಷ ಎಂದು ಬಣ್ಣಿಸಿದ್ದಾರೆ. ಈ ಮುಖಾಮುಖಿಯನ್ನು ಅವರು 'ಧುರೋಕ್ಸಿಕ್ ಪಾರ್ಕ್' ಎಂದು ಕರೆದಿದ್ದು, ಇದು ಉತ್ತರ ಭಾರತ ವರ್ಸಸ್ ದಕ್ಷಿಣ ಭಾರತ ಅಥವಾ ಬಾಲಿವುಡ್ ವರ್ಸಸ್ ಸ್ಯಾಂಡಲ್‌ವುಡ್‌ ನಡುವಿನ ಪೈಪೋಟಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ರಾಮ್‌ಗೋಪಾಲ್‌ ವರ್ಮಾ ಟ್ವೀಟ್‌


ತಮ್ಮ ಸುದೀರ್ಘ ಪೋಸ್ಟ್‌ವೊಂದರಲ್ಲಿ ಈ ಸಂಘರ್ಷವನ್ನು 'ಡೇವಿಡ್ ಮತ್ತು ಗೋಲಿಯಾತ್' ನಡುವಿನ ಕಾಳಗಕ್ಕೆ ಹೋಲಿಸಿದ್ದಾರೆ. ಧುರಂಧರ್ ಚಿತ್ರವು ಪ್ರೇಕ್ಷಕರ ಬುದ್ಧಿವಂತಿಕೆಯನ್ನು ಗೌರವಿಸಿದರೆ, ಟಾಕ್ಸಿಕ್ ಚಿತ್ರವು ಪ್ರೇಕ್ಷಕರನ್ನು ದಡ್ಡರೆಂದು ಭಾವಿಸುತ್ತದೆ ಎಂಬ ಕಟು ವಿಮರ್ಶೆಯನ್ನು ಅವರು ಮುಂದಿಟ್ಟಿದ್ದಾರೆ. ಕೆಜಿಎಫ್ 2 ಸಿನಿಮಾ ಸಾಮಾನ್ಯ ಜನರ ಅಜ್ಞಾನವನ್ನು ಗುರಿಯಾಗಿಸಿಕೊಂಡು ತಯಾರಾದ ಪ್ರಾದೇಶಿಕ ಚಿತ್ರವಾಗಿತ್ತು, ಆದರೆ ಧುರಂಧರ್ ಜನರ ಬುದ್ಧಿಶಕ್ತಿಯನ್ನು ನಂಬಿ ತಯಾರಾದ ಕಾರಣ ಅದು ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಯಿತು ಎಂಬುದು ವರ್ಮಾ ಅವರ ವಾದ.

ನಿರ್ದೇಶಕ ಆದಿತ್ಯ ಧರ್ ಅವರ ಕಾರ್ಯವೈಖರಿಯನ್ನು ಮುಕ್ತವಾಗಿ ಶ್ಲಾಘಿಸಿರುವ ರಾಮ್ ಗೋಪಾಲ್ ವರ್ಮಾ, ಸಿನಿಮಾ ಸಂಸ್ಕೃತಿಯಲ್ಲಿ ಬದಲಾವಣೆ ತರುವ ಅವರ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ. ಭಾರಿ ಬಜೆಟ್ ಹಾಕಿ ಅದ್ದೂರಿ ತನ ಪ್ರದರ್ಶಿಸುವುದು ಒಂದು ಕಡೆಯಾದರೆ, ಹಣವನ್ನು ಸರಿಯಾದ ರೀತಿಯಲ್ಲಿ ವಿನಿಯೋಗಿಸಿ ಭಾವನಾತ್ಮಕ ಮತ್ತು ಆಳವಾದ ಕಥೆ ಹೇಳುವುದು ಇನ್ನೊಂದು ಕಡೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದು ಕೇವಲ ಆದಿತ್ಯ ಧರ್ ಮೇಲಿನ ಪ್ರೀತಿಯಿಂದ ಬರೆಯುತ್ತಿರುವುದಲ್ಲ, ಬದಲಾಗಿ ಭಾರತೀಯ ಸಿನಿಮಾದ ಭವಿಷ್ಯದ ಮೇಲಿನ ಭರವಸೆಯಿಂದ ಈ ಮಾತುಗಳನ್ನು ಹೇಳುತ್ತಿರುವುದಾಗಿ ಎಂದು ಅವರು ತಿಳಿಸಿದ್ದಾರೆ.

ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಯಶ್ ಜೊತೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಶಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಕ್ಸ್ ಆಫೀಸ್ ಲೆಕ್ಕಾಚಾರದಲ್ಲಿ ‘ಟಾಕ್ಸಿಕ್’ ದೊಡ್ಡ ಪೈಪೋಟಿಯನ್ನೇ ಎದುರಿಸಲಿದೆ. ಮಾರ್ಚ್ 19 ರಂದು ತೆರೆಕಾಣಲಿರುವ ಈ ಚಿತ್ರಕ್ಕೆ ಬಾಲಿವುಡ್‌ನ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಪೈಪೋಟಿ ನೀಡಲಿದೆ. ಈಗಾಗಲೇ ಹಲವು ಚಿತ್ರಗಳು ‘ಧುರಂಧರ್’ಗೆ ಹೆದರಿ ತಮ್ಮ ಬಿಡುಗಡೆಯ ದಿನಾಂಕ ಬದಲಾಯಿಸಿಕೊಂಡಿದ್ದರೂ, ಯಶ್ ಮಾತ್ರ ಅದೇ ದಿನಾಂಕಕ್ಕೆ ಅಖಾಡಕ್ಕಿಳಿಯಲು ಸಿದ್ಧರಾಗಿದ್ದಾರೆ.

Read More
Next Story