ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಅದ್ಧೂರಿ ವಿವಾಹ ಆರತಕ್ಷತೆ: ತಾರೆಯರ ಸಮಾಗಮ
x

ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಅದ್ಧೂರಿ ವಿವಾಹ ಆರತಕ್ಷತೆ: ತಾರೆಯರ ಸಮಾಗಮ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಅದ್ದೂರಿ ವಿವಾಹ ಆರತಕ್ಷತೆಯು ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಹಾಜರಿದ್ದರು.


Click the Play button to hear this message in audio format

ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯು, ಮಾರ್ಚ್ 4 ರಂದು ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಅದ್ಧೂರಿ ವಿವಾಹ ಔತಣಕೂಟವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗ ಹಾಗೂ ಬಾಲಿವುಡ್‌ನ ಗಣ್ಯಾತಿಗಣ್ಯರು ಆಗಮಿಸಿ ನವಜೋಡಿಗೆ ಶುಭ ಹಾರೈಸಿದರು.

ಈ ಅದ್ಧೂರಿ ಸಮಾರಂಭದಲ್ಲಿ ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ, ನಂದಮೂರಿ ಬಾಲಕೃಷ್ಣ, ಅಕ್ಕಿನೇನಿ ನಾಗಾರ್ಜುನ ಮತ್ತು ಅಮಲಾ ದಂಪತಿ, ರಾಮ್ ಚರಣ್ ಮತ್ತು ಉಪಾಸನಾ, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ನಟ ನಾನಿ ಹಾಗೂ ಯುವ ನಟಿ ಶ್ರೀಲೀಲಾ ಪ್ರಮುಖ ಆಕರ್ಷಣೆಯಾಗಿದ್ದರು.

ಬಾಲಿವುಡ್‌ನಿಂದ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಮತ್ತು ನಟಿ ಕೃತಿ ಸನೂನ್ ವಿಶೇಷವಾಗಿ ಆಗಮಿಸಿ ಸಂಭ್ರಮಕ್ಕೆ ಸಾಕ್ಷಿಯಾದರು. ಅಲ್ಲದೆ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ನವದಂಪತಿಗೆ ಆಶೀರ್ವದಿಸಿದರು.

ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ 'ವಿರೋಶ್'

ರಿಸೆಪ್ಷನ್ ವೇಳೆ ರಶ್ಮಿಕಾ ಮಂದಣ್ಣ ಕೆಂಪು ಬಣ್ಣದ ರೇಷ್ಮೆ ಸೀರೆಯುಟ್ಟು, ಭಾರೀ ಚಿನ್ನದ ಆಭರಣಗಳೊಂದಿಗೆ ದೇವತೆಯಂತೆ ಕಂಗೊಳಿಸಿದರೆ, ವಿಜಯ್ ದೇವರಕೊಂಡ ಅವರು ಬಿಳಿ ಬಣ್ಣದ ಕುರ್ತಾ ಮತ್ತು ಧೋತಿ ಧರಿಸಿ ಸಾಂಪ್ರದಾಯಿಕ ಲುಕ್‌ನಲ್ಲಿ ಮಿಂಚಿದರು.

ಸೆಲೆಬ್ರಿಟಿಗಳ ಮತ್ತು ರಾಜಕೀಯ ಗಣ್ಯರ ಆಗಮನದ ಹಿನ್ನೆಲೆಯಲ್ಲಿ ಹೈದರಾಬಾದ್ ಪೊಲೀಸರು ಹೋಟೆಲ್ ಸುತ್ತಮುತ್ತ ಬಿಗಿ ಭದ್ರತೆ ಏರ್ಪಡಿಸಿದ್ದರು. ಕೇವಲ ಆಹ್ವಾನಿತರಿಗೆ ಮಾತ್ರ ಪ್ರವೇಶವಿದ್ದ ಈ ಸಮಾರಂಭದ ಫೋಟೋಗಳು ಮತ್ತು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕೊಡವ ಮತ್ತು ತೆಲುಗು ಸಂಪ್ರದಾಯದಂತೆ ಮದುವೆಯಾಗಿದ್ದ ಈ ಜೋಡಿಗೆ ದೇಶಾದ್ಯಂತ ಅಭಿಮಾನಿಗಳು ಶುಭಾಶಯಗಳ ಸುರಿಮಳೆಗರೆಯುತ್ತಿದ್ದಾರೆ.

Read More
Next Story