
ರ‍್ಯಾಪರ್ ಬಾದ್‌ಶಾ ಹಾಗೂ ನಟಿ ಇಶಾ ರಿಖಿ ವಿವಾಹದ ಫೋಟೋಗಳು ವೈರಲ್
ಪಂಜಾಬಿ ನಟಿ ಇಶಾ ರಿಖಿ ಜೊತೆ ಗುಟ್ಟಾಗಿ ಎರಡನೇ ಮದುವೆಯಾದ ರ‍್ಯಾಪರ್ ಬಾದ್‌ಶಾ
ರ‍್ಯಾಪರ್ ಬಾದ್‌ಶಾ ಮತ್ತು ಪಂಜಾಬಿ ನಟಿ ಇಶಾ ರಿಖಿ ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ ಆರು ವರ್ಷ ನಂತರ ಬಾದ್‌ಶಾ ಎರಡನೇ ಮದುವೆಯಾಗಿದ್ದಾರೆ.
ಖ್ಯಾತ ರ‍್ಯಾಪರ್ ಬಾದ್‌ಶಾ ಮತ್ತು ಪಂಜಾಬಿ ನಟಿ ಇಶಾ ರಿಖಿ ವಿವಾಹವಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಹಲವು ದಿನಗಳಿಂದ ಹರಿದಾಡುತ್ತಿದ್ದ ಈ ಊಹಾಪೋಹಗಳಿಗೆ ಈಗ ಪುಷ್ಟಿ ಸಿಕ್ಕಿದ್ದು, ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ಖಚಿತವಾಗಿದೆ.
ಇಶಾ ರಿಖಿ ಅವರ ತಾಯಿ ಪೂನಂ ರಿಖಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಮದುವೆಯ ಕೆಲವು ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ಬಾದ್‌ಶಾ ಮತ್ತು ಇಶಾ ಸಾಂಪ್ರದಾಯಿಕ ಮದುವೆಯ ಉಡುಪಿನಲ್ಲಿ ಮಿಂಚುತ್ತಿದ್ದು, ಪರಸ್ಪರ ಹಾರ ಬದಲಾಯಿಸಿಕೊಳ್ಳುವ ದೃಶ್ಯಗಳು ಕಂಡುಬಂದಿವೆ. ಕುಟುಂಬದ ಆಪ್ತರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಈ ಖಾಸಗಿ ಸಮಾರಂಭ ನಡೆದಿದೆ ಎನ್ನಲಾಗಿದೆ. ಪೂನಂ ರಿಖಿ ಅವರು "ದೇವರು ನಿಮ್ಮನ್ನು ಆಶೀರ್ವದಿಸಲಿ" ಎಂದು ಬರೆದುಕೊಂಡು ಈ ಜೋಡಿಗೆ ಶುಭ ಹಾರೈಸಿದ್ದಾರೆ.
ಆಪ್ತರಿಂದ ಶುಭಾಶಯಗಳ ಮಹಾಪೂರ
ಇಶಾ ಅವರನ್ನು ತನ್ನ ಸಹೋದರಿ ಎಂದು ಕರೆದಿರುವ ಪೂಜಾ ಸಿಂಗ್ ಗುಜ್ರಾಲ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. "ನನ್ನ ಸುಂದರ ಸಹೋದರಿ ಇಶಾ, ಅತ್ಯಂತ ಸುಂದರ ವಧುವಾಗಿದ್ದಾರೆ. ಹ್ಯಾಂಡ್ಸಮ್ ಬಾದ್‌ಶಾ ಭಾಜಿಯೊಂದಿಗೆ ಅವರ ಈ ಹೊಸ ಜೀವನ ಸುಖಮಯವಾಗಿರಲಿ" ಎಂದು ಬರೆದುಕೊಂಡಿದ್ದಾರೆ.
ಯಾರಿದು ಇಶಾ ರಿಖಿ?
ಚಂಡೀಗಢ ಮೂಲದ ಇಶಾ ರಿಖಿ ಪಂಜಾಬಿ ಚಿತ್ರರಂಗದ ಜನಪ್ರಿಯ ನಟಿ. 2013ರಲ್ಲಿ 'ಜಟ್ ಬಾಯ್ಸ್ ಪುತ್ತ ಜಟ್ಟನ್ ದೆ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ಇವರು, ಬ್ಲಾಕ್‌ಬಸ್ಟರ್ ಚಿತ್ರ 'ಜಟ್ ಜೂಲಿಯಟ್'ನಲ್ಲೂ ನಟಿಸಿದ್ದಾರೆ. 'ಹ್ಯಾಪಿ ಗೋ ಲಕ್ಕಿ' ಮತ್ತು 'ಅರ್ದಾಸ್' ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಇಶಾ, ವರುಣ್ ಧವನ್ ಅಭಿನಯದ 'ನವಾಬ್‌ಜಾದೆ' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು.
ಬಾದ್‌ಶಾ ಅವರ ಎರಡನೇ ಮದುವೆ
ಗಾಯಕ ಬಾದ್‌ಶಾ ಅವರಿಗೆ ಇದು ಎರಡನೇ ಮದುವೆಯಾಗಿದೆ. ಈ ಹಿಂದೆ ಅವರು ಜಾಸ್ಮಿನ್ ಮಸಿಹ್ ಅವರನ್ನು ವಿವಾಹವಾಗಿದ್ದರು. ಆದರೆ 2020 ರಲ್ಲಿ ಈ ದಂಪತಿ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದರು. ಇವರಿಬ್ಬರಿಗೆ ಜೆಸ್ಸಿಮಿ ಗ್ರೇಸ್ ಮಸಿಹ್ ಸಿಂಗ್ ಎಂಬ ಮಗಳಿದ್ದಾಳೆ. ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬಾದ್‌ಶಾ, ತಮ್ಮ ಮಗುವಿನ ಹಿತದೃಷ್ಟಿಯಿಂದ ಮತ್ತು ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದಾಗಿ ಮೊದಲ ಪತ್ನಿಯಿಂದ ದೂರವಾಗಬೇಕಾಯಿತು ಎಂದು ತಿಳಿಸಿದ್ದರು. ಸದ್ಯ ಮಗಳು ಲಂಡನ್‌ನಲ್ಲಿ ವಾಸಿಸುತ್ತಿದ್ದು, ಆಗಾಗ್ಗೆ ಭೇಟಿಯಾಗುವುದಾಗಿ ಅವರು ಹೇಳಿಕೊಂಡಿದ್ದರು. ಮೊದಲ ಪತ್ನಿಯಿಂದ ಬೇರ್ಪಟ್ಟ ಸುಮಾರು ಆರು ವರ್ಷಗಳ ನಂತರ ಬಾದ್‌ಶಾ ಈಗ ಇಶಾ ರಿಖಿ ಅವರೊಂದಿಗೆ ಹೊಸ ಜೀವನ ಆರಂಭಿಸಿದ್ದಾರೆ.

