ಕಾಂತಾರ ಮಿಮಿಕ್ರಿ ವಿವಾದ|  ಚಾಮುಂಡಿ ಬೆಟ್ಟದಲ್ಲಿ ಕ್ಷಮೆ ಕೋರಲು ಸಿದ್ಧ: ನಟ ರಣವೀರ್ ಸಿಂಗ್
x

ಚಾಮುಂಡಿ ಬೆಟ್ಟಕ್ಕೆ ಹೋಗಿ ಕ್ಷಮೆ ಕೋರಲು ಸಿದ್ಧ ಎಂದ ನಟ ರಣವೀರ್ ಸಿಂಗ್.

ಕಾಂತಾರ ಮಿಮಿಕ್ರಿ ವಿವಾದ| ಚಾಮುಂಡಿ ಬೆಟ್ಟದಲ್ಲಿ ಕ್ಷಮೆ ಕೋರಲು ಸಿದ್ಧ: ನಟ ರಣವೀರ್ ಸಿಂಗ್

‘ಕಾಂತಾರ’ ದೈವದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ನಟ ರಣವೀರ್ ಸಿಂಗ್, ಹೈಕೋರ್ಟ್‌ಗೆ ಕ್ಷಮೆಯಾಚನೆ ಅಫಿಡವಿಟ್ ಸಲ್ಲಿಸಿ, ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಕ್ಷಮೆ ಕೋರಲು ಒಪ್ಪಿದ್ದಾರೆ.


Click the Play button to hear this message in audio format

‘ಕಾಂತಾರ’ ಚಿತ್ರದ ದೈವಾರಾಧನೆಯ ದೃಶ್ಯವನ್ನು ಅಣಕಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೈವದ ಮುಂದೆ ಶಿರಬಾಗಿ ಕ್ಷಮೆ ಕೇಳುವುದಾಗಿ ಒಪ್ಪಿಕೊಂಡಿದ್ದಾರೆ.

ಈ ಹಿಂದೆ ಸಲ್ಲಿಸಿದ್ದ ಕ್ಷಮಾಪಣಾ ಅಫಿಡವಿಟ್‌ನಲ್ಲಿ ಕರಾವಳಿಯ ಸಾಂಸ್ಕೃತಿಕ ಸೂಕ್ಷ್ಮತೆಗಳ ಬಗ್ಗೆ ತಮಗೆ ಅರಿವಿರಲಿಲ್ಲ ಎಂದು ರಣವೀರ್ ಸಮರ್ಥಿಸಿಕೊಂಡಿದ್ದರು. ಆದರೆ, ಈ ಕ್ಷಮೆಯಾಚನೆಯಲ್ಲಿ ಪ್ರಾಮಾಣಿಕತೆ ಇಲ್ಲ ಎಂದು ದೂರುದಾರರು ಆಕ್ಷೇಪ ಎತ್ತಿದ ಹಿನ್ನೆಲೆಯಲ್ಲಿ, ನಟ ಈಗ ಹೆಚ್ಚು ಸ್ಪಷ್ಟವಾದ ಮತ್ತು ಪಶ್ಚಾತ್ತಾಪದ ನೂತನ ಅಫಿಡವಿಟ್ ಸಲ್ಲಿಸಲು ಮುಂದಾಗಿದ್ದಾರೆ.

ಕಳೆದ ವರ್ಷ ಗೋವಾದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದೈವಾರಾಧನೆಯನ್ನು ಅಣಕಿಸಿದ ಮತ್ತು ಪಂಜುರ್ಲಿ-ಗುಳಿಗ ದೈವಗಳ ಬಗ್ಗೆ ಅಸಂಬದ್ಧವಾಗಿ ಮಾತನಾಡಿದ ಆರೋಪದ ಮೇಲೆ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್‌ನಲ್ಲಿ ರಣವೀರ್ ಸಲ್ಲಿಸಿದ ಕ್ಷಮಾಪಣಾ ಅಫಿಡವಿಟ್ ಬಗ್ಗೆ ದೂರುದಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಮುಂದೆ ನಡೆದ ವಿಚಾರಣೆಯಲ್ಲಿ ರಣವೀರ್ ಸಿಂಗ್ ಅವರ ವಕೀಲರು ಅಫಿಡವಿಟ್ ಸಲ್ಲಿಸಿದ್ದರು. ಈ ಅಫಿಡವಿಟ್‌ನಲ್ಲಿ ರಣವೀರ್ ಅವರು ತಾವು ಮುಂಬೈನ ಸಿಂಧಿ ಕುಟುಂಬದಲ್ಲಿ ಬೆಳೆದಿದ್ದರಿಂದ ದೈವಾರಾಧನೆಯ ಸೂಕ್ಷ್ಮತೆ ಮತ್ತು ಸಾಂಪ್ರದಾಯಿಕ ನಂಬಿಕೆಗಳ ಬಗ್ಗೆ ಸರಿಯಾದ ಅರಿವಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಆದರೆ ದೂರುದಾರರಾದ ವಕೀಲ ಪ್ರಶಾಂತ್ ಮೆತ್ತಲ್ ಅವರು ಇದನ್ನು ವಿರೋಧಿಸಿದ್ದು, ಇದರಲ್ಲಿ ರಣವೀರ್ ಸಿಂಗ್ ಅವರ ಪ್ರಾಮಾಣಿಕ ಪಶ್ಚಾತ್ತಾಪ ಕಾಣುತ್ತಿಲ್ಲ. ಬದಲಿಗೆ ತಮ್ಮ ತಪ್ಪನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾದಿಸಿದರು.

ರಿಷಬ್ ಶೆಟ್ಟಿ ಅವರು ವೇದಿಕೆಯ ಮೇಲೆ ಹಲವು ಬಾರಿ ಸನ್ನೆ ಮಾಡಿ ತಡೆದರೂ ರಣವೀರ್ ಮಿಮಿಕ್ರಿ ಮುಂದುವರಿಸಿದ್ದು ಉದ್ದೇಶಪೂರ್ವಕ ಎಂದು ದೂರುದಾರರು ಕಿಡಿಕಾರಿದ್ದಾರೆ. ನ್ಯಾಯಾಲಯವು ಸಹ ಸಾರ್ವಜನಿಕ ವ್ಯಕ್ತಿಗಳು ಇಂತಹ ವಿಚಾರಗಳಲ್ಲಿ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದೆ. ಈ ಬೆನ್ನಲ್ಲೇ ರಣವೀರ್ ಅವರ ಕಾನೂನು ತಂಡವು ಹಳೆಯ ಅಫಿಡವಿಟ್ ಬದಲಿಗೆ ದೂರುದಾರರ ಜೊತೆ ಚರ್ಚಿಸಿ ಹೆಚ್ಚು ಸ್ಪಷ್ಟವಾದ ಮತ್ತು ಮನಃಪೂರ್ವಕವಾದ ಕ್ಷಮಾಪಣೆ ಒಳಗೊಂಡ ಹೊಸ ಅಫಿಡವಿಟ್ ಸಲ್ಲಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದೆ.

ಅಲ್ಲದೆ ತಮ್ಮ ತಪ್ಪಿನ ಪ್ರಾಯಶ್ಚಿತ್ತವಾಗಿ ರಣವೀರ್ ಸಿಂಗ್ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ಮುಂದೆ ಶಿರಬಾಗಿ ಕ್ಷಮೆ ಕೇಳುವುದಾಗಿ ಒಪ್ಪಿಕೊಂಡಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಏಪ್ರಿಲ್ 23ಕ್ಕೆ ಮುಂದೂಡಿದ್ದು, ಅಷ್ಟರೊಳಗೆ ನಟ ನೂತನ ಪಶ್ಚಾತ್ತಾಪದ ಪತ್ರ ಸಲ್ಲಿಸಬೇಕಿದೆ. ಒಂದು ವೇಳೆ ಹೊಸ ಅಫಿಡವಿಟ್ ಸಹ ತೃಪ್ತಿಕರವಾಗಿಲ್ಲದಿದ್ದರೆ ಕಾನೂನು ಹೋರಾಟ ಮುಂದುವರಿಸುವುದಾಗಿ ದೂರುದಾರರು ಎಚ್ಚರಿಸಿದ್ದಾರೆ.

ಏನಿದು 'ಕಾಂತಾರ' ಮಿಮಿಕ್ರಿ ವಿವಾದ?

ಕಳೆದ ನವೆಂಬರ್‌ನಲ್ಲಿ ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ನಟ ರಣವೀರ್ ಸಿಂಗ್ ಅವರು 'ಕಾಂತಾರ' ಚಿತ್ರದ ರಿಷಬ್ ಶೆಟ್ಟಿ ಅವರ ಅಭಿನಯವನ್ನು ಹೊಗಳುತ್ತಾ ವೇದಿಕೆಯ ಮೇಲೆ ಮಿಮಿಕ್ರಿ ಮಾಡಿದ್ದರು. ಈ ಸಂದರ್ಭದಲ್ಲಿ ಅವರು ಕರಾವಳಿಯ ಪವಿತ್ರ ದೈವವಾದ ಚಾಮುಂಡಿ ದೈವವನ್ನು (ಪಂಜುರ್ಲಿ) ಉದ್ದೇಶಿಸಿ ʻಹೆಣ್ಣು ದೆವ್ವʼ (Female Ghost) ಎಂದು ಕರೆದಿದ್ದರು. ಅಲ್ಲದೆ, ರಿಷಬ್ ಶೆಟ್ಟಿ ಅವರು ವೇದಿಕೆಯಲ್ಲೇ ಸನ್ನೆ ಮಾಡಿ ತಡೆದರೂ ಸಹ ರಣವೀರ್ ಅಣಕ ಮಾಡುವುದನ್ನು ಮುಂದುವರಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ದೈವಾರಾಧನೆಯನ್ನು ಅಣಕಿಸಿದ ಮತ್ತು ದೈವವನ್ನು 'ದೆವ್ವ' ಎಂದು ಕರೆದ ರಣವೀರ್ ನಡೆಗೆ ಕನ್ನಡಿಗರು ಮತ್ತು ದೈವಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿಶ್ವಾದ್ಯಂತ ಬಿಡುಗಡೆಯಾದ 'ಕಾಂತಾರ: ಚಾಪ್ಟರ್ 1', ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ವರದಿಗಳ ಪ್ರಕಾರ, ಈ ಸಿನಿಮಾ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭರ್ಜರಿ ಯಶಸ್ಸು ಕಂಡು, 2025ನೇ ಸಾಲಿನ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಚಿತ್ರದ ಅದ್ದೂರಿ ಮೇಕಿಂಗ್, ಕದಂಬ ಸಾಮ್ರಾಜ್ಯದ ಕಾಲದ ಸೆಟ್‌ಗಳು ಮತ್ತು ರಿಷಬ್ ಶೆಟ್ಟಿಯವರ ನಟನೆಗೆ ಪ್ರೇಕ್ಷಕರು ಮಾರುಹೋಗಿದ್ದರು.

ಕಾಂತಾರ: ಚಾಪ್ಟರ್ 1' ಸಿನಿಮಾ ಏಕಕಾಲಕ್ಕೆ ಮೂರು ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದ್ದರೆ, ಸಿನಿಮಾಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಂದಿದೆ.

Read More
Next Story