Ramayana|ನಿತೇಶ್ ತಿವಾರಿ ರಾಮಾಯಣದಲ್ಲಿ ರಣಬೀರ್ ಕಪೂರ್​​ಗೆ ಡಬಲ್ ಧಮಾಕಾ
x

ನಟ ರಣಬೀರ್ ಕಪೂರ್ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ'ದಲ್ಲಿ ಶ್ರೀರಾಮ ಮತ್ತು ಪರಶುರಾಮನಾಗಿ ದ್ವಿಪಾತ್ರದಲ್ಲಿ ನಟಿಸುತ್ತಿರುವುದನ್ನು ಖಚಿತಪಡಿಸಿದ್ದಾರೆ.

Ramayana|ನಿತೇಶ್ ತಿವಾರಿ 'ರಾಮಾಯಣ'ದಲ್ಲಿ ರಣಬೀರ್ ಕಪೂರ್​​ಗೆ ಡಬಲ್ ಧಮಾಕಾ

ನಟ ರಣಬೀರ್ ಕಪೂರ್ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ'ದಲ್ಲಿ ಶ್ರೀರಾಮ ಮತ್ತು ಪರಶುರಾಮನಾಗಿ ದ್ವಿಪಾತ್ರದಲ್ಲಿ ನಟಿಸುತ್ತಿರುವುದನ್ನು ಖಚಿತಪಡಿಸಿದ್ದಾರೆ. ಚಿತ್ರದ ಬಿಡುಗಡೆ ಹಾಗೂ ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ಓದಿ.


Click the Play button to hear this message in audio format

ಬಾಲಿವುಡ್ ನಟ ರಣಬೀರ್ ಕಪೂರ್ ಬಹುನಿರೀಕ್ಷಿತ 'ರಾಮಾಯಣ' ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಬಹುದೊಡ್ಡ ಸುದ್ದಿ ಈಗ ಅಧಿಕೃತವಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಚಿತ್ರದ ಮೊದಲ ತುಣುಕು ಭಾರಿ ಕುತೂಹಲ ಕೆರಳಿಸಿದ್ದು, ರಣಬೀರ್ ಅವರು ಶ್ರೀರಾಮನ ಜೊತೆಗೆ ಭಗವಾನ್ ವಿಷ್ಣುವಿನ ಮತ್ತೊಂದು ಅವತಾರವಾದ 'ಪರಶುರಾಮ'ನಾಗಿಯೂ ಅಬ್ಬರಿಸುವುದು ಖಚಿತವಾಗಿದೆ.

ಏಪ್ರಿಲ್ 2 ರಂದು ಹನುಮ ಜಯಂತಿಯ ಪ್ರಯುಕ್ತ ಬಿಡುಗಡೆಯಾದ ಎರಡು ನಿಮಿಷಗಳ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು. ಇದರಲ್ಲಿ ಶ್ರೀರಾಮನ ವಿವಿಧ ಹಂತಗಳನ್ನು ಅದ್ಭುತವಾಗಿ ಕಟ್ಟಿಕೊಡಲಾಗಿತ್ತು. ಆದರೆ, ಅಭಿಮಾನಿಗಳ ಕಣ್ಣು ಕುಕ್ಕಿದ್ದು ಮಾತ್ರ ರಾಮನು ಪರಶುರಾಮನ ಬೃಹತ್ ಕೊಡಲಿಯನ್ನು ಹಿಡಿದ ಒಂದು ನಿರ್ದಿಷ್ಟ ದೃಶ್ಯ. ಈ ದೃಶ್ಯದ ಹಿಂದಿನ ಗುಟ್ಟನ್ನು ಇದೀಗ ರಣಬೀರ್ ತಾವೇ ರಟ್ಟು ಮಾಡಿದ್ದಾರೆ. ಅಂತರರಾಷ್ಟ್ರೀಯ ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ಚಿತ್ರದಲ್ಲಿ ತಾವು ಪರಶುರಾಮನಾಗಿಯೂ ನಟಿಸುತ್ತಿರುವುದನ್ನು ಖಚಿತಪಡಿಸಿದ್ದಾರೆ. ಶಂಶೇರ ಚಿತ್ರದ ಬಳಿಕ ರಣಬೀರ್ ನಟಿಸುತ್ತಿರುವ ಎರಡನೇ ದ್ವಿಪಾತ್ರದ ಸಿನಿಮಾ ಇದಾಗಿದೆ.

ಎರಡು ಮಹಾನ್ ಅವತಾರಗಳ ಬಗ್ಗೆ ರಣಬೀರ್ ಮಾತು

ಭಗವಾನ್ ವಿಷ್ಣುವಿನ ವಿಭಿನ್ನ ಅವತಾರಗಳನ್ನು ತೆರೆಯ ಮೇಲೆ ಅಭಿನಯಿಸುವುದು ದೊಡ್ಡ ಸೌಭಾಗ್ಯ ಹಾಗೂ ಶ್ರೀರಾಮ ಮತ್ತು ಪರಶುರಾಮ ಇಬ್ಬರನ್ನೂ ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ತಮ್ಮ ಪಾಲಿನ ಅದ್ಭುತ ಅನುಭವ ಎಂದು ರಣಬೀರ್ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಭಿನ್ನ ಪಾತ್ರಗಳಿಗಾಗಿ ಅವರು ಕೇವಲ ದೇಹಭಾಷೆ ಬದಲಿಸಿಕೊಳ್ಳುವುದರ ಜೊತೆಗೆ, ಪಾತ್ರಗಳ ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಹಿನ್ನೆಲೆಯನ್ನು ಆಳವಾಗಿ ಅರಿತು ನಟಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಶ್ರೀರಾಮನ ಪಾತ್ರದ ಜೊತೆಗಿನ ಭಾವನಾತ್ಮಕ ನಂಟು

ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪಾತ್ರ ತಮಗೆ ಭಾವನಾತ್ಮಕವಾಗಿ ಬಹಳ ಹತ್ತಿರವಾಗಿದೆ ಎಂದು ರಣಬೀರ್ ವಿವರಿಸಿದ್ದಾರೆ. ಅವರ ಪ್ರಕಾರ, ರಾಮ ಎಂಬುದು ಕೇವಲ ಹೆಸರಲ್ಲ, ಅದು ಕರುಣೆ, ಧೈರ್ಯ ಮತ್ತು ನೀತಿಯ ಸಂಕೇತ. ಆದರ್ಶ ಮಾನವನ ಗುಣಗಳನ್ನು ಮೈಗೂಡಿಸಿಕೊಂಡಿರುವ ಈ ಮಹಾನ್ ಪಾತ್ರ ತಲೆಮಾರುಗಳಿಗೆ ಪ್ರೇರಣೆ ಎಂದು ಅವರು ಬಣ್ಣಿಸಿದ್ದಾರೆ.

ದಿಗ್ಗಜರ ತಾರಾಗಣ ಹಾಗೂ ದೀಪಾವಳಿಗೆ ಜೋಡಿ ಉಡುಗೊರೆ

ನಿತೇಶ್ ತಿವಾರಿ ನಿರ್ದೇಶನದ ಈ ಬೃಹತ್ ಪ್ರಾಜೆಕ್ಟ್‌ನಲ್ಲಿ ಭಾರತೀಯ ಚಿತ್ರರಂಗದ ಘಟಾನುಘಟಿಗಳು ಒಂದಾಗಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಸೀತಾ ಮಾತೆಯಾಗಿ ಕಂಗೊಳಿಸಲಿದ್ದರೆ, ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಅಬ್ಬರಿಸಲಿದ್ದಾರೆ. ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಹಾಗೂ ಹಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಹಾನ್ಸ್ ಜಿಮ್ಮರ್ ಅವರ ಸಂಗೀತ ಜುಗಲ್‌ಬಂದಿ ಈ ಚಿತ್ರಕ್ಕೆ ಇರುವುದು ಮತ್ತೊಂದು ದೊಡ್ಡ ವಿಶೇಷ. ಈ ಬೃಹತ್ ಪ್ರಾಜೆಕ್ಟ್ ಎರಡು ಭಾಗಗಳಲ್ಲಿ ಜಗತ್ತಿನಾದ್ಯಂತ ತೆರೆಗೆ ಬರಲಿದ್ದು, ಮೊದಲ ಭಾಗವು 2026ರ ದೀಪಾವಳಿಗೆ ಹಾಗೂ ಎರಡನೇ ಭಾಗವು 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ.

Read More
Next Story