ಇದು ಸಿನಿಮಾ ಅಲ್ಲ, ಹಿಂಸಾಚಾರದ ಕೈಪಿಡಿ; ‘ಧುರಂಧರ್ 2’ ವಿರುದ್ಧ ನಟಿ ರಮ್ಯಾ ಗರಂ
x

ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಚಿತ್ರವನ್ನು ‘ಸಹನೆ ಪರೀಕ್ಷೆ’ ಎಂದ ನಟಿ ರಮ್ಯಾ.

ಇದು ಸಿನಿಮಾ ಅಲ್ಲ, ಹಿಂಸಾಚಾರದ ಕೈಪಿಡಿ; ‘ಧುರಂಧರ್ 2’ ವಿರುದ್ಧ ನಟಿ ರಮ್ಯಾ ಗರಂ

ಧುರಂಧರ್ 2 ಚಿತ್ರದ ವಿರುದ್ಧ ನಟಿ ರಮ್ಯಾ ಕಿಡಿ. ಅತಿಯಾದ ಹಿಂಸಾಚಾರ ಹಾಗೂ ರಣವೀರ್ ಸಿಂಗ್ ನಟನೆಯನ್ನು ಟೀಕಿಸಿದ ಸ್ಯಾಂಡಲ್‌ವುಡ್ ಕ್ವೀನ್.


Click the Play button to hear this message in audio format

ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ 'ಧುರಂಧರ್ 2' ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿದ್ದರೂ, ನಟಿ ರಮ್ಯಾ ಅವರು ಚಿತ್ರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರವನ್ನು "ಎಂಡ್ಯೂರೆನ್ಸ್ ಟೆಸ್ಟ್" (ಸಹನೆ ಪರೀಕ್ಷೆ) ಎಂದು ಕರೆದಿರುವ ಅವರು, ಈ ಸಿನಿಮಾದಲ್ಲಿ ಅತಿಯಾದ ಹಿಂಸಾಚಾರವಿದೆ ಎಂದು ಟೀಕಿಸಿದ್ದಾರೆ.

ರಮ್ಯಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಚಿತ್ರದ ಬಗ್ಗೆ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದು,"ನೀವು ನಿಜವಾಗಿಯೂ ಈ ಸಿನಿಮಾ ನೋಡಲೇಬೇಕು ಎಂದಿದ್ದರೆ ಥಿಯೇಟರ್‌ಗೆ ಹೋಗಿ ಹಣ ಮತ್ತು ಸಮಯ ವ್ಯರ್ಥ ಮಾಡಬೇಡಿ. ಇದು ಕೇವಲ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಸೀಮಿತವಾದ ಸಿನಿಮಾ. ಅಲ್ಲಿ ಬೇಕಿದ್ದರೆ ಬೋರ್ ಆದಾಗ ಸ್ಕ್ರಾಲ್ ಮಾಡಬಹುದು ಅಥವಾ ಸ್ಕಿಪ್ ಮಾಡಬಹುದು" ಎಂದು ಟೀಕಿಸಿದ್ದಾರೆ.

ವಿಶೇಷವಾಗಿ ನಟ ರಣವೀರ್ ಸಿಂಗ್ ಅವರ ಪಾತ್ರ ಮತ್ತು ಅವರ ಲುಕ್ ಬಗ್ಗೆ ಮಾತನಾಡಿರುವ ಅವರು, "ಎಲ್ಲರೂ ರಣವೀರ್ ಈ ಚಿತ್ರವನ್ನು ಹೊತ್ತು ಸಾಗುತ್ತಿದ್ದಾರೆ ಎನ್ನುತ್ತಿದ್ದಾರೆ, ಆದರೆ ಅವರು ಏನನ್ನು ಹೊರುತ್ತಿದ್ದಾರೆ? ನನಗೆ ಅಲ್ಲಿ ಕೇವಲ ಅವರ ಕೂದಲು ಮಾತ್ರ ಕಾಣಿಸುತ್ತಿತ್ತು. ಮೊದಲ ಭಾಗದಲ್ಲಿ ಅವರ ಕೂದಲಿಗೆ ಒಂದು ವ್ಯಕ್ತಿತ್ವವಿತ್ತು, ಆದರೆ ಇಲ್ಲಿ ಅದು ಕೇವಲ ದೃಶ್ಯಗಳಿಗೆ ಅಡ್ಡಿಯಾಗುತ್ತಿದೆ. ಬಹುಶಃ ಆ ಕೂದಲಿಗೆ ಪೋಷಕ ನಟ ಪ್ರಶಸ್ತಿ ನೀಡಬಹುದು" ಎಂದು ವ್ಯಂಗ್ಯವಾಡಿದ್ದಾರೆ.

ಅತಿಯಾದ ಹಿಂಸಾಚಾರಕ್ಕೆ ಟೀಕೆ

ಸಿನಿಮಾದಲ್ಲಿನ ಹಿಂಸಾಚಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ರಮ್ಯಾ, "ಇದು ಸಿನಿಮಾ ಅಲ್ಲ, ಬದಲಿಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಬಳಸಿ ಹೇಗೆ ಹಿಂಸೆ ನೀಡಬಹುದು ಎನ್ನುವುದನ್ನು ತೋರಿಸುವ ಹ್ಯಾಂಡ್‌ಬುಕ್‌ನಂತಿದೆ. ಸಿರಿಂಜ್, ಸ್ಪ್ಯಾನರ್, ಚಾಕು, ಚೈನ್, ಬಾಂಬ್ ಹೀಗೆ ಪ್ರತಿಯೊಂದನ್ನೂ ಆಯುಧವಾಗಿ ಬಳಸಿದ್ದಾರೆ. ನಿರ್ದೇಶಕ ಆದಿತ್ಯ ಧರ್ ಅವರು ಪ್ರತಿ ದೃಶ್ಯದಲ್ಲೂ ಹಿಂಸೆಯನ್ನು ಹೆಚ್ಚಿಸುತ್ತಾ ಹೋಗಿದ್ದಾರೆ. ಕಾಲು ಕತ್ತರಿಸಿದರೂ ನಾಯಕ ದೊಡ್ಡ ಭಾಷಣ ಮಾಡುತ್ತಿರುತ್ತಾನೆ. ಇದಕ್ಕೆ ಆಸ್ಕರ್ ಅಲ್ಲ, ನೊಬೆಲ್ ಪ್ರಶಸ್ತಿಯೇ ಕೊಡಬೇಕು" ಎಂದು ಟೀಕಿಸಿದ್ದಾರೆ. ಕೊನೆಯಲ್ಲಿ, ಆದಿತ್ಯ ಧರ್ ಅವರು ಜಿಂಗೋಯಿಸಂ ಮತ್ತು ಪ್ರಚಾರದ ಕಥೆಗಳಿಂದ ಹೊರಬರಲಿ ಎಂದು ಸಲಹೆ ನೀಡಿದ್ದಾರೆ.

ಆದಿತ್ಯ ಧರ್ ನಿರ್ದೇಶನದ 'ಧುರಂಧರ್ 2: ದಿ ರಿವೆಂಜ್' ಗುರುವಾರ ವಿಶ್ವದಾದ್ಯಂತ ತೆರೆಕಂಡಿದ್ದು, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಾಗರವೇ ಹರಿದುಬರುತ್ತಿದೆ. ಮೊದಲ ಭಾಗದ ಭರ್ಜರಿ ಯಶಸ್ಸಿನ ನಂತರ ಬಂದಿರುವ ಈ ಸೀಕ್ವೆಲ್, ಆರಂಭಿಕ ಪ್ರದರ್ಶನಗಳಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಪ್ರೇಕ್ಷಕರು ಚಿತ್ರದ ಮೇಕಿಂಗ್ ಮತ್ತು ರಣವೀರ್ ಸಿಂಗ್ ಅಭಿನಯಕ್ಕೆ ಫಿದಾ ಆಗಿದ್ದಾರೆ.

ಚಿತ್ರ ಬಿಡುಗಡೆಗೂ ಮುನ್ನ ಚಿತ್ರತಂಡವು ಅತ್ಯಂತ ರಹಸ್ಯವಾಗಿಟ್ಟಿದ್ದ 'ಬಡೆ ಸಾಹಬ್' ಪಾತ್ರದ ಬಗ್ಗೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಚಿತ್ರದಲ್ಲಿ ಈ ಪ್ರಭಾವಿ ಮತ್ತು ವಿಲನ್ ಪಾತ್ರವನ್ನು ಯಾರು ನಿರ್ವಹಿಸಿದ್ದಾರೆ ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಇತ್ತೀಚಿನ ಅಪ್‌ಡೇಟ್‌ಗಳ ಪ್ರಕಾರ, ಚಿತ್ರದ ಈ 'ಬಡೆ ಸಾಹಬ್' ಪಾತ್ರವು ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂನಿಂದ ಪ್ರೇರಿತವಾಗಿದ್ದು, ಇದನ್ನು ಪ್ರತಿಭಾವಂತ ನಟ ದಾನಿಶ್ ಇಕ್ಬಾಲ್ ನಿಭಾಯಿಸಿದ್ದಾರೆ.

ಕರಾಚಿಯ ಭೂಗತ ಲೋಕ ಮತ್ತು ಭಯೋತ್ಪಾದನೆಯ ಜಾಲವನ್ನು ಭೇದಿಸುವ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ, ವಯಸ್ಸಾದ ಆಕ್ರಮಣಕಾರಿ ಭೂಗತ ದೊರೆಯಾಗಿ ದಾನಿಶ್ ಇಕ್ಬಾಲ್ ಕಾಣಿಸಿಕೊಂಡಿದ್ದಾರೆ.

Read More
Next Story