ಲಾಕ್ ಅಪ್ 2 ಶೋನಲ್ಲಿ ವರುಣ್ ಯಾದವ್‌ಗೆ ಬಲವಂತದ ಕಿಸ್: ರಾಮ್ ಕಪೂರ್ ವಿರುದ್ಧ ಆಕ್ರೋಶ
x

ಲಾಕ್ ಅಪ್ 2 ಶೋನಲ್ಲಿ 25 ವರ್ಷದ ವರುಣ್ ಯಾದವ್‌ಗೆ ಬಲವಂತವಾಗಿ ಕಿಸ್ ಮಾಡಿದ 52ರ ಹರೆಯದ ನಟ ರಾಮ್ ಕಪೂರ್ ವರ್ತನೆಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. 

ಲಾಕ್ ಅಪ್ 2 ಶೋನಲ್ಲಿ ವರುಣ್ ಯಾದವ್‌ಗೆ ಬಲವಂತದ ಕಿಸ್: ರಾಮ್ ಕಪೂರ್ ವಿರುದ್ಧ ಆಕ್ರೋಶ

ಲಾಕ್ ಅಪ್ 2 ಶೋನಲ್ಲಿ 25 ವರ್ಷದ ವರುಣ್ ಯಾದವ್‌ಗೆ ಬಲವಂತವಾಗಿ ಕಿಸ್ ಮಾಡಿದ 52ರ ಹರೆಯದ ನಟ ರಾಮ್ ಕಪೂರ್ ವರ್ತನೆಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದು, ಇದೊಂದು ದೌರ್ಜನ್ಯ ಎಂದಿದ್ದಾರೆ.


Click the Play button to hear this message in audio format

ನೆಟ್‌ಫ್ಲಿಕ್ಸ್‌ನಲ್ಲಿ ಇತ್ತೀಚೆಗಷ್ಟೇ ಆರಂಭವಾಗಿರುವ 'ಲಾಕ್ ಅಪ್ ಸೀಸನ್ 2' ರಿಯಾಲಿಟಿ ಶೋನಲ್ಲಿ ದಿನದಿಂದ ದಿನಕ್ಕೆ ಹೈಡ್ರಾಮಾ ಮತ್ತು ವಿವಾದಗಳು ಸೃಷ್ಟಿಯಾಗುತ್ತಿವೆ. ಶೋನ ಇತ್ತೀಚಿನ ಸಂಚಿಕೆಯಲ್ಲಿ 52 ವರ್ಷದ ಖ್ಯಾತ ನಟ ರಾಮ್ ಕಪೂರ್ ಅವರು ತಮ್ಮ ಸಹ-ಸ್ಪರ್ಧಿ, 25 ವರ್ಷದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ವರುಣ್ ಯಾದವ್ (ಲೈಲಾ) ಅವರಿಗೆ ಹಠಾತ್ತನೆ ಬಲವಂತವಾಗಿ ಮುತ್ತಿಕ್ಕಿರುವುದು ಸದ್ಯ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಅನಿರೀಕ್ಷಿತ ಘಟನೆಯು ಶೋ ವೀಕ್ಷಕರಲ್ಲಿ ತೀವ್ರ ದಿಗ್ಭ್ರಮೆಯನ್ನು ಉಂಟುಮಾಡಿದೆ. ತಮಗಿಂತ ಅರ್ಧ ವಯಸ್ಸಿನ ಯುವಕನಿಗೆ ರಾಮ್ ಕಪೂರ್ ಈ ರೀತಿ ಕಿಸ್ ಮಾಡಿರುವುದನ್ನು ಕಂಡು ಅಲ್ಲೇ ಇದ್ದ ಉಳಿದ ಸ್ಪರ್ಧಿಗಳಾದ ಆಕಾಂಕ್ಷಾ ಚಮೋಲಾ ಮತ್ತು ಸುನಿತಾ ಅಹುಜಾ ಕೂಡ ಒಂದು ಕ್ಷಣ ಶಾಕ್ ಆಗಿದ್ದಾರೆ.

ತೋಟದ ಪ್ರದೇಶದಲ್ಲಿ ಕುಳಿತು ಸ್ಪರ್ಧಿಗಳು ತಮ್ಮ ವೈಯಕ್ತಿಕ ಜೀವನ ಮತ್ತು ಸಂಬಂಧಗಳ ಬಗ್ಗೆ ಚರ್ಚಿಸುತ್ತಿದ್ದಾಗ ಈ ಘಟನೆ ನಡೆದಿದೆ. ರಾಮ್ ಕಪೂರ್ ತಾವು 30ನೇ ವಯಸ್ಸಿನಲ್ಲಿ ಮದುವೆಯಾಗಿ ಮಕ್ಕಳನ್ನು ಪಡೆದಿದ್ದರ ಬಗ್ಗೆ ಮಾತನಾಡುತ್ತಿದ್ದರು. ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ ವರುಣ್ ಯಾದವ್, ನೀವು 30ರಲ್ಲಿ ಮದುವೆಯಾಗಿ 40ರ ಹರೆಯದಲ್ಲಿ ಸಂಗಾತಿಗೆ ಮೋಸ ಮಾಡಿದ್ದೀರಿ ಎಂದು ಕಾಲೆಳೆದಿದ್ದಾರೆ. ಇದನ್ನು ಕೇಳಿ ಅಲ್ಲಿದ್ದವರೆಲ್ಲರೂ ಜೋರಾಗಿ ನಕ್ಕಿದ್ದಾರೆ. ಆದರೆ ಅದೇ ಮುಂದಿನ ಕ್ಷಣದಲ್ಲಿ ರಾಮ್ ಕಪೂರ್ ಅವರು ವರುಣ್ ಅವರ ಮುಖವನ್ನು ಹಿಡಿದು ಬಲವಂತವಾಗಿ ಅವರ ತುಟಿಗೆ ಮುತ್ತಿಟ್ಟಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರಾಮ್ ಕಪೂರ್ ವರ್ತನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಎಕ್ಸ್ (ಟ್ವಿಟರ್) ತಾಣದಲ್ಲಿ ಅನೇಕರು ಇದೊಂದು ಅಸಭ್ಯ ವರ್ತನೆ ಮತ್ತು ಲೈಂಗಿಕ ದೌರ್ಜನ್ಯ ಎಂದು ಕಿಡಿಕಾರಿದ್ದಾರೆ. ವರುಣ್ ತುಂಬಾ ಮುಗ್ಧನಾಗಿದ್ದು ಆ ಸಮಯದಲ್ಲಿ ಏನೂ ಪ್ರತಿಭಟಿಸದೆ ಸುಮ್ಮನಿದ್ದ ಮಾತ್ರಕ್ಕೆ ಅದನ್ನು ಒಪ್ಪಿಗೆ ಎಂದು ಭಾವಿಸಲು ಸಾಧ್ಯವಿಲ್ಲ, ಯಾರದೇ ಅನುಮತಿಯಿಲ್ಲದೆ ಈ ರೀತಿ ಬಲವಂತವಾಗಿ ಕಿಸ್ ಮಾಡುವುದು ತಪ್ಪು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಟಿಆರ್‌ಪಿ ಮತ್ತು ಡ್ರಾಮಾ ಹೆಸರಿನಲ್ಲಿ ಇಂತಹ ಅಸಹ್ಯಕರ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದೇ ಸಂಚಿಕೆಯಲ್ಲಿ ರಾಮ್ ಕಪೂರ್ ಅವರು ಮದುವೆ ಹಾಗೂ ದಾಂಪತ್ಯ ದ್ರೋಹದ ಬಗ್ಗೆ ಮಾತನಾಡುತ್ತಾ, ಪ್ರೀತಿಯಲ್ಲಿ ಯಾವುದೂ ಕೂಡ ಸಂಬಂಧ ಮುರಿಯುವ ವಿಷಯವಾಗಬಾರದು ಎಂದು ವಾದಿಸಿದ್ದರು. ಮದುವೆಯ ಸುದೀರ್ಘ ಪಯಣದಲ್ಲಿ ಏರಿಳಿತಗಳು ಸಹಜ, ಯಾವುದೋ ಒಂದು ದುರ್ಬಲ ಕ್ಷಣದಲ್ಲಿ ತಪ್ಪು ನಡೆದರೆ ಕಾಲ ಎಲ್ಲವನ್ನೂ ಗುಣಪಡಿಸುತ್ತದೆ ಮತ್ತು ಸಂಗಾತಿಯನ್ನು ಅತಿಯಾಗಿ ಪ್ರೀತಿಸುವಾಗ ದ್ರೋಹದ ಕಾರಣಕ್ಕೆ ಸಂಬಂಧವನ್ನು ಕೊನೆಗೊಳಿಸಬಾರದು ಎಂದು ಅವರು ಹೇಳಿದ್ದರು. ಆದರೆ ಸಹ-ಸ್ಪರ್ಧಿ ಆಕಾಂಕ್ಷಾ ಚಮೋಲಾ ಈ ಮಾತನ್ನು ತೀವ್ರವಾಗಿ ವಿರೋಧಿಸಿದ್ದರು. ಮೋಸ ಮಾಡುವುದು ಎಂದಿಗೂ ತಿಳಿಯದೆ ಮಾಡುವ ತಪ್ಪಲ್ಲ, ಅದು ಪ್ರಜ್ಞಾಪೂರ್ವಕವಾಗಿ ಮಾಡುವ ಆಯ್ಕೆ ಎಂದು ತಿರುಗೇಟು ನೀಡಿದ್ದರು.

ಫರಾ ಖಾನ್ ಮತ್ತು ರಿತೇಶ್ ದೇಶ್‌ಮುಖ್ ನಿರೂಪಣೆ ಮಾಡುತ್ತಿರುವ ಈ ಬಾರಿಯ 'ಲಾಕ್ ಅಪ್: ಸಚ್ ಯಾ ಸಜಾ' ಶೋನಲ್ಲಿ ಒಟ್ಟು 15 ಜನ ಸೆಲೆಬ್ರಿಟಿಗಳು ಭಾಗವಹಿಸಿದ್ದು, ಪ್ರತಿ ಶನಿವಾರದಿಂದ ಬುಧವಾರದವರೆಗೆ ರಾತ್ರಿ 8 ಗಂಟೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಹೊಸ ಸಂಚಿಕೆಗಳು ಪ್ರಸಾರವಾಗುತ್ತಿವೆ. ಸದ್ಯ ಮೊದಲ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತಿದ್ದು ಶ್ರೇಯಾ ಕಲ್ರಾ, ಸೂಫಿ ಮೋತಿವಾಲಾ, ರಿಯಾಜ್ ಅಲಿ ಮತ್ತು ಮಾಧುರಿ ಗ್ರೋವರ್ ಅವರಂತಹ ಸ್ಪರ್ಧಿಗಳು ಡೇಂಜರ್ ಜೋನ್‌ನಲ್ಲಿದ್ದಾರೆ.

Read More
Next Story