
ರಾಜ್ ಬಿ ಶೆಟ್ಟಿ ನಟನೆಯ 'ರಕ್ಕಸಪುರದೋಳ್' ಈಗ ತೆಲುಗಿನಲ್ಲಿ 'ರಾಕ್ಷಸಪುರಂ' ಆಗಿ ಬಿಡುಗಡೆಯಾಗಲಿದೆ.
Rakkasapuradol| ತೆಲುಗು ಪ್ರೇಕ್ಷಕರ ಮುಂದೆ ಬರಲಿದೆ ಕನ್ನಡದ ಹಿಟ್ ಚಿತ್ರ ‘ರಕ್ಕಸಪುರದೋಳ್’
ರಾಜ್ ಬಿ ಶೆಟ್ಟಿ ನಟನೆಯ 'ರಕ್ಕಸಪುರದೋಳ್' ಈಗ ತೆಲುಗಿನಲ್ಲಿ 'ರಾಕ್ಷಸಪುರಂ' ಆಗಿ ಬಿಡುಗಡೆಯಾಗಲಿದೆ. ಕೆ.ಎಸ್. ರಾಮರಾವ್ ಪ್ರಸ್ತುತಪಡಿಸುತ್ತಿರುವ ಈ ಕ್ರೈಮ್ ಥ್ರಿಲ್ಲರ್ ಎಪ್ರಿಲ್ ತಿಂಗಳ ಅಂತ್ಯಕ್ಕೆ ತೆರೆಗೆ ಬರಲಿದೆ.
ರಾಜ್ ಬಿ ಶೆಟ್ಟಿ ನಟನೆಯ ‘ರಕ್ಕಸಪುರದೋಳ್’ ಸಿನಿಮಾವನ್ನು ನಿರ್ಮಾಪಕ ಕೆ.ಎಸ್. ರಾಮರಾವ್ ಅವರು ತೆಲುಗು ಪ್ರೇಕ್ಷಕರಿಗಾಗಿ ‘ರಾಕ್ಷಸಪುರಂ’ ಎಂಬ ಹೆಸರಿನಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. ಕೆ.ಎನ್. ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಕೆ. ರವಿವರ್ಮ ನಿರ್ಮಿಸಿರುವ ಈ ಚಿತ್ರಕ್ಕೆ ರವಿ ಸಾರಂಗ ನಿರ್ದೇಶನವಿದ್ದು, ರಾಜ್ ಬಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಕ್ರಿಯೇಟಿವ್ ಕಮರ್ಷಿಯಲ್ಸ್ ಬ್ಯಾನರ್ ಮೂಲಕ ಈ ತಿಂಗಳ ಅಂತ್ಯಕ್ಕೆ ತೆಲುಗಿನಲ್ಲಿ ಈ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.
ಹೈದರಾಬಾದ್‌ನ ಎಫ್‌ಎನ್‌ಸಿಸಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರದ ವಿಶೇಷತೆಗಳನ್ನು ಹಂಚಿಕೊಂಡ ಕೆ.ಎಸ್. ರಾಮರಾವ್ ಅವರು, ತಮ್ಮ ವೃತ್ತಿಜೀವನವು ಕಮಲ್ ಹಾಸನ್ ಅವರ ‘ಎರ್ರಾಗುಲಾಬೀಲು’ ಎಂಬ ಡಬ್ಬಿಂಗ್ ಚಿತ್ರದ ಯಶಸ್ಸಿನೊಂದಿಗೆ ಆರಂಭವಾಗಿತ್ತು ಎಂದು ನೆನಪಿಸಿಕೊಂಡರು. ಇದೀಗ ಅದೇ ಉತ್ಸಾಹದೊಂದಿಗೆ ‘ರಕ್ಕಸಪುರದೋಳ್’ ಚಿತ್ರವನ್ನು ತೆಲುಗಿಗೆ ತರುತ್ತಿರುವುದಾಗಿ ತಿಳಿಸಿದರು. ಇದೊಂದು ವಿಭಿನ್ನ ಹಾಗೂ ರೋಚಕ ಕ್ರೈಮ್ ಥ್ರಿಲ್ಲರ್ ಆಗಿದ್ದು, ಹಳ್ಳಿಯ ಹಿನ್ನೆಲೆಯಲ್ಲಿ ಸಾಗುವ ಕಥೆ ತಮಗೆ ಬಹಳ ಇಷ್ಟವಾಯಿತು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
'ರಕ್ಕಸಪುರದೊಳ್' ಚಿತ್ರದ ಟ್ರೈಲರ್ ಇಲ್ಲಿದೆ...
ಸಿನಿಮಾದ ಶೀರ್ಷಿಕೆಯ ಬಗ್ಗೆ ಮಾತನಾಡುತ್ತಾ, 1986ರಲ್ಲಿ ತಾವು ಚಿರಂಜೀವಿ ಅವರೊಂದಿಗೆ ಮಾಡಿದ ‘ರಾಕ್ಷಸುಡು’ ಚಿತ್ರದ ಸಂದರ್ಭವನ್ನು ಅವರು ಸ್ಮರಿಸಿದರು. ಅಂದು ಶೀರ್ಷಿಕೆ ನಕಾರಾತ್ಮಕವಾಗಿ ಕಂಡರೂ, ಕಥೆಯಲ್ಲಿ ನಾಯಕನು ದುಷ್ಟರಿಗೆ ರಾಕ್ಷಸನಾಗಿ ಕಾಡುವುದರಿಂದ ಆ ಹೆಸರನ್ನು ಇಡಲಾಗಿತ್ತು. ಅದೇ ಮಾದರಿಯಲ್ಲಿ ‘ರಾಕ್ಷಸಪುರಂ’ ಚಿತ್ರದಲ್ಲೂ ನಾಯಕನು ಸಮಾಜದ ಕ್ರೂರಿಗಳನ್ನು ಶಿಕ್ಷಿಸುವ ವಿಭಿನ್ನ ಕಥಾಹಂದರವಿದೆ. ಇಂದಿನ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಈ ಸಿನಿಮಾ ಮೂಡಿಬಂದಿದ್ದು, ಎಲ್ಲರೂ ಚಿತ್ರವನ್ನು ಬೆಂಬಲಿಸಬೇಕೆಂದು ಅವರು ಮನವಿ ಮಾಡಿದರು.
ರಕ್ಕಸಪುರದೋಳ್ ಸಿನಿಮಾ ಆಕ್ಷನ್ ಮತ್ತು ಕ್ರೈಮ್ ಥ್ರಿಲ್ಲರ್ ಮಾದರಿಯ ಸಿನಿಮಾವಾಗಿದ್ದು, ಹಳ್ಳಿಯ ಹಿನ್ನೆಲೆಯಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದೆ. ಈ ಚಿತ್ರದ ಕಥೆಯು ಗ್ರಾಮವೊಂದರಲ್ಲಿ ನಡೆಯುವ ಸರಣಿ ಕೊಲೆ ಮತ್ತು ಅದನ್ನು ನಾಯಕ ನಟ ಹೇಗೆ ಬೇಧಿಸುತ್ತಾನೆ ಎಂಬುವುದು ಚಿತ್ರದ ಕಥಾಹಂದರ.
ಈ ಚಿತ್ರಕ್ಕೆ ಖ್ಯಾತ ಸಾಹಸ ನಿರ್ದೇಶಕ ರವಿವರ್ಮ ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಅವರ ಹಿನ್ನೆಲೆ ಸಂಗೀತ ಮತ್ತು ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಟ್ರೈಲರ್‌ನ ತಾಂತ್ರಿಕ ಶ್ರೀಮಂತಿಕೆಯನ್ನು ಎತ್ತಿಹಿಡಿದಿದೆ. ನಟಿಯರಾದ ಸ್ವಾತಿಷ್ಟ ಕೃಷ್ಣ ಹಾಗೂ ಅರ್ಚನಾ ಕೊಟ್ಟಿಗೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಚಿತ್ರವು ಫೆಬ್ರವರಿ 6ರಂದು ರಾಜ್ಯಾದ್ಯಂತ ಬಿಡುಗಡೆಗೊಂಡಿತ್ತು.

