
ಡಿಎಂಕೆ ಬೆದರಿಕೆಯಿಂದ ರಜನಿಕಾಂತ್ ರಾಜಕೀಯಕ್ಕೆ ಬರಲಿಲ್ಲ ಎಂಬ ಆಧವ್ ಅರ್ಜುನ ಅವರ ಹೇಳಿಕೆಗೆ ರಜನಿಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ.
ಸಮಯ ಮಾತನಾಡುವುದಿಲ್ಲ, ಆದರೆ ಉತ್ತರ ನೀಡುತ್ತದೆ: ಟಿವಿಕೆ ನಾಯಕನಿಗೆ ರಜನಿಕಾಂತ್ ತಿರುಗೇಟು
ತಮಿಳುನಾಡು ರಾಜಕೀಯದಲ್ಲಿ ಸಂಚಲನ! ಡಿಎಂಕೆ ಬೆದರಿಕೆಯಿಂದ ರಜನಿಕಾಂತ್ ರಾಜಕೀಯಕ್ಕೆ ಬರಲಿಲ್ಲ ಎಂಬ ಆಧವ್ ಅರ್ಜುನ ಅವರ ಹೇಳಿಕೆಗೆ ಸೂಪರ್‌ಸ್ಟಾರ್ ರಜನಿಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ.
ಸೂಪರ್‌ಸ್ಟಾರ್ ರಜನಿಕಾಂತ್ ಅವರು ತಮಿಳಗ ವೆಟ್ರಿ ಕಳಗಂ ಪಕ್ಷದ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ ಅವರ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು 'ಎಕ್ಸ್' ಮೂಲಕ ಪತ್ರವೊಂದನ್ನು ಹಂಚಿಕೊಂಡಿರುವ ರಜನಿಕಾಂತ್, ತಮ್ಮ ಪರವಾಗಿ ಧ್ವನಿ ಎತ್ತಿದ ಮತ್ತು ಅರ್ಜುನ ಅವರ ನಿಂದನಾತ್ಮಕ ಮಾತುಗಳನ್ನು ಖಂಡಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. "ಸಮಯ ಮಾತನಾಡುವುದಿಲ್ಲ, ಆದರೆ ಅದು ಕಾಯುತ್ತದೆ ಮತ್ತು ಸರಿಯಾದ ಉತ್ತರವನ್ನು ನೀಡುತ್ತದೆ" ಎಂಬ ಮಾರ್ಮಿಕ ನುಡಿಗಳೊಂದಿಗೆ ರಜನಿಕಾಂತ್ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಈ ವಿವಾದದ ಹಿನ್ನೆಲೆಯಲ್ಲಿ ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ರಜನಿಕಾಂತ್ ಬೆಂಬಲಕ್ಕೆ ನಿಂತಿದ್ದು, ನಟ ಈ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಏನಿದು ವಿವಾದ?
ಕೆಲ ದಿನಗಳ ಹಿಂದೆ ಟಿವಿಕೆ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ ಅವರು, ರಜನಿಕಾಂತ್ ರಾಜಕೀಯಕ್ಕೆ ಬರದೇ ಇರಲು ಡಿಎಂಕೆ ಕುಟುಂಬದ ಬೆದರಿಕೆಯೇ ಕಾರಣ ಎಂದು ಆರೋಪಿಸಿದ್ದರು. ಆದರೆ, ರಜನಿಕಾಂತ್ ಅವರು 2020ರಲ್ಲೇ ತಮ್ಮ ಅನಾರೋಗ್ಯ ಮತ್ತು ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ರಾಜಕೀಯ ಪ್ರವೇಶದಿಂದ ಹಿಂದೆ ಸರಿಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದರು. ಆಧವ್ ಅರ್ಜುನ ಅವರ ಈ ಹೇಳಿಕೆಯು ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ.
ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಆಧವ್ ಅರ್ಜುನ ಅವರ ಹೇಳಿಕೆಯನ್ನು ʻರಾಜಕೀಯ ಅಸಭ್ಯತೆʼ ಎಂದು ತಿಳಿಸಿದ್ದು, ರಜನಿಕಾಂತ್ ಅವರ ಘನತೆಗೆ ಧಕ್ಕೆ ತರುವಂತಹ ಮಾತುಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ಇನ್ನು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅವರು ಕೂಡ ಅರ್ಜುನ ಅವರ ಮಾತುಗಳನ್ನು ʻಭ್ರಮೆʼ ಹಾಗೂ ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ರಜನಿಕಾಂತ್ ಅವರ ಮಾನಸಿಕ ಶಕ್ತಿಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.
ಈ ವಿವಾದದ ಪರಿಣಾಮವಾಗಿ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮತ್ತು ನಟ ವಿಜಯ್ ಅವರ ಟಿವಿಕೆ ಪಕ್ಷದ ನಡುವೆ ಉಂಟಾಗಬಹುದು ಎನ್ನಲಾಗಿದ್ದ ಮೈತ್ರಿ ಮಾತುಕತೆಗಳಿಗೆ ಹಿನ್ನಡೆಯಾಗಿದೆ. ಎನ್‌ಡಿಎ ಮೈತ್ರಿಕೂಟವು ವಿಜಯ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಮತ್ತು 80 ವಿಧಾನಸಭಾ ಸೀಟುಗಳ ಆಫರ್ ನೀಡಿತ್ತು ಎನ್ನಲಾಗಿದೆ. ಇದೀಗ ತಮಿಳುನಾಡು ಚುನಾವಣಾ ಕಣವು ಏಪ್ರಿಲ್ 23 ರಂದು ಮತದಾನಕ್ಕೆ ಸಜ್ಜಾಗುತ್ತಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ. ಆಡಳಿತಾರೂಢ ಡಿಎಂಕೆ, ಪುಟಿದೇಳಲು ಸಜ್ಜಾಗಿರುವ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟ ಮತ್ತು ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿರುವ ವಿಜಯ್ ಅವರ ಟಿವಿಕೆ ನಡುವೆ ಸ್ಪರ್ಧೆ ಏರ್ಪಡುವುದು ಖಚಿತವಾಗಿದೆ.

