
ಈ ಪ್ರೋಮೊದಲ್ಲಿ ರಜನಿಕಾಂತ್ ಮತ್ತು ಕಮಲ್ ಹಾಸನ್ 'ರೆಟ್ರೋ-ಕೂಲ್' ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
47 ವರ್ಷಗಳ ಬಳಿಕ ಕಮಲ್-ರಜಿನಿ ಮಹಾಮಿಲನ: 'ಕೆಎಚ್-ಆರ್ಕೆ' ಕುತೂಹಲಕಾರಿ ಪ್ರೋಮೋ ರಿಲೀಸ್
ಭಾರತೀಯ ಚಿತ್ರರಂಗದ ಇಬ್ಬರು ಧ್ರುವತಾರೆಗಳಾದ ಸೂಪರ್‌ಸ್ಟಾರ್ ರಜನಿಕಾಂತ್ ಮತ್ತು ಉಳಗನಾಯಗನ್ ಕಮಲ್ ಹಾಸನ್ ಬರೋಬ್ಬರಿ 45 ವರ್ಷಗಳ ನಂತರ ಒಂದೇ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ತಮಿಳು ಚಿತ್ರರಂಗದ ಇಬ್ಬರು ದಂತಕಥೆಗಳಾದ 'ಸೂಪರ್ ಸ್ಟಾರ್' ರಜನಿಕಾಂತ್ ಮತ್ತು 'ಉಳಗನಾಯಕನ್' ಕಮಲ್ ಹಾಸನ್ ಅವರು ಬರೋಬ್ಬರಿ 47 ವರ್ಷಗಳ ಸುದೀರ್ಘ ಅಂತರದ ನಂತರ ಒಂದೇ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ತಾತ್ಕಾಲಿಕವಾಗಿ ‘ಕೆಎಚ್ ಎಕ್ಸ್ ಆರ್ಕೆ’ (KH X RK) ಎಂದು ಹೆಸರಿಸಲಾದ ಈ ಬಹುನಿರೀಕ್ಷಿತ ಚಿತ್ರವನ್ನು 'ಜೈಲರ್' ಖ್ಯಾತಿಯ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸುತ್ತಿದ್ದು, ಚಿತ್ರದ ಮೊದಲ ಪ್ರೋಮೋ ಭಾರಿ ಸಂಚಲನ ಮೂಡಿಸಿದೆ.
ಸುಮಾರು 3 ನಿಮಿಷಗಳಿಗೂ ಹೆಚ್ಚು ಅವಧಿಯ ಈ ಪ್ರೋಮೋದಲ್ಲಿ ನಿರ್ದೇಶಕ ನೆಲ್ಸನ್ ಅವರ ಸಿಗ್ನೇಚರ್ ಡಾರ್ಕ್ ಕಾಮಿಡಿ ಶೈಲಿ ಎದ್ದು ಕಾಣುತ್ತದೆ. ಇಬ್ಬರು ದಿಗ್ಗಜ ನಟರಲ್ಲಿ ಯಾರ ಬಳಿ ಮೊದಲು ಕಥೆ ಹೇಳಲು ಹೋಗಬೇಕು ಎಂಬ ಗೊಂದಲದಲ್ಲಿ ನಿರ್ದೇಶಕ ನೆಲ್ಸನ್ ಇರುವುದನ್ನು ಹಾಸ್ಯಾಸ್ಪದವಾಗಿ ಚಿತ್ರಿಸಲಾಗಿದೆ. ಪ್ರೋಮೋದಲ್ಲಿ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಕೂಡ ಕಾಣಿಸಿಕೊಂಡಿದ್ದು, ಚಿತ್ರದ ರಾಗಗಳ ಆಯ್ಕೆ ಬಗ್ಗೆ ನಡೆಯುವ ಚರ್ಚೆ ನಗು ತರಿಸುತ್ತದೆ. ರಜನಿಕಾಂತ್ ಮತ್ತು ಕಮಲ್ ಹಾಸನ್ ಇಬ್ಬರೂ ರೆಟ್ರೋ-ಸ್ಟೈಲ್ ಗ್ಯಾಂಗ್‌ಸ್ಟರ್ ಅವತಾರದಲ್ಲಿ ಮಿಂಚಿದ್ದು, ವಿಡಿಯೋದ ಕೊನೆಯಲ್ಲಿ "ಇದರಲ್ಲಿ ಹೀರೋ ಯಾರು?" ಎಂದು ನಿರ್ದೇಶಕರಿಗೆ ಪ್ರಶ್ನಿಸುವ ಮೂಲಕ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ರೆಡ್ ಜೈಂಟ್ ಮೂವೀಸ್ ನಿರ್ಮಾಣ
ಈ ಐತಿಹಾಸಿಕ ಚಿತ್ರವನ್ನು 'ರೆಡ್ ಜೈಂಟ್ ಮೂವೀಸ್' ಬ್ಯಾನರ್ ಅಡಿಯಲ್ಲಿ ಉದಯನಿಧಿ ಸ್ಟಾಲಿನ್ ಅವರ ಪುತ್ರ ಇನ್ಬನ್ ಉದಯನಿಧಿ ನಿರ್ಮಿಸುತ್ತಿದ್ದಾರೆ. 1979ರಲ್ಲಿ ತೆರೆಕಂಡ 'ನಿನೈತ್ತಾಲೇ ಇನಿಕ್ಕುಂ' ಚಿತ್ರದ ನಂತರ ಇವರಿಬ್ಬರು ಪೂರ್ಣ ಪ್ರಮಾಣದಲ್ಲಿ ಒಟ್ಟಿಗೆ ನಟಿಸುತ್ತಿರುವ ಚಿತ್ರ ಇದಾಗಿದೆ (1985ರಲ್ಲಿ 'ಗೇರಾಫ್ಟಾರ್' ಚಿತ್ರದಲ್ಲಿ ಕಮಲ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಚಿತ್ರೀಕರಣ ಯಾವಾಗ?
ರಜನಿಕಾಂತ್ ಅವರು ಪ್ರಸ್ತುತ 'ಜೈಲರ್ 2' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ, ಮತ್ತು ಕಮಲ್ ಹಾಸನ್ ಅವರು 'ಕಲ್ಕಿ 2898 AD', 'ಥಗ್ ಲೈಫ್' ಮುಂತಾದ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಬ್ಬರ ಡೇಟ್ಸ್ ಹೊಂದಾಣಿಕೆಯಾಗಬೇಕಿರುವುದರಿಂದ, ‘ಕೆಎಚ್-ಆರ್ಕೆ’ ಚಿತ್ರದ ಚಿತ್ರೀಕರಣ ಆರಂಭವಾಗಲು ಸ್ವಲ್ಪ ಸಮಯ ಹಿಡಿಯಲಿದೆ. ಒಟ್ಟಿನಲ್ಲಿ, ಈ ಇಬ್ಬರು ದಿಗ್ಗಜರ ಕಾಮಿಡಿ-ಆಕ್ಷನ್ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

