Bandar Movie| ರಾಜ್ ಬಿ ಶೆಟ್ಟಿ ನಟನೆಯ ಹಿಂದಿ ಸಿನಿಮಾ ‘ಬಂದರ್’ ಟ್ರೈಲರ್ ಬಿಡುಗಡೆ
x

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ‘ಬಂದರ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಕನ್ನಡದ ಹೆಮ್ಮೆಯ ನಟ ರಾಜ್ ಬಿ ಶೆಟ್ಟಿ

Bandar Movie| ರಾಜ್ ಬಿ ಶೆಟ್ಟಿ ನಟನೆಯ ಹಿಂದಿ ಸಿನಿಮಾ ‘ಬಂದರ್’ ಟ್ರೈಲರ್ ಬಿಡುಗಡೆ

ಅನುರಾಗ್ ಕಶ್ಯಪ್ ನಿರ್ದೇಶನದ, ಬಾಬಿ ಡಿಯೋಲ್ ಹಾಗೂ ಕನ್ನಡದ ರಾಜ್ ಬಿ ಶೆಟ್ಟಿ ನಟನೆಯ ‘ಬಂದರ್’ ಹಿಂದಿ ಚಿತ್ರದ ರೋಮಾಂಚಕ ಟ್ರೈಲರ್ ಬಿಡುಗಡೆಯಾಗಿದೆ. ಜೂನ್ 5 ರಂದು ಸಿನಿಮಾ ರಿಲೀಸ್.


Click the Play button to hear this message in audio format

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ನಟನೆ ಹಾಗೂ ನಿರ್ದೇಶನದ ಮೂಲಕ ಮುಂಚೂಣಿಯಲ್ಲಿರುವ ರಾಜ್ ಬಿ ಶೆಟ್ಟಿ ಅವರು ಇದೀಗ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಖ್ಯಾತ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶನದ, ನಟ ಬಾಬಿ ಡಿಯೋಲ್ ಮುಖ್ಯ ಭೂಮಿಕೆಯಲ್ಲಿರುವ ಬಹುನಿರೀಕ್ಷಿತ ಹಿಂದಿ ಸಿನಿಮಾ ‘ಬಂದರ್’ ಚಿತ್ರದ ಅಧಿಕೃತ ಟ್ರೈಲರ್ ಇಂದು ಬಿಡುಗಡೆಯಾಗಿದೆ.

ಬಿಡುಗಡೆಯಾಗಿರುವ ಈ ಟ್ರೈಲರ್‌ನಲ್ಲಿ ಬಾಬಿ ಡಿಯೋಲ್ ಅವರು ಸಮೀರ್ ಮೆಹ್ರಾ ಎಂಬ ಕಣ್ಮರೆಯಾಗುತ್ತಿರುವ, ಒಂಟಿತನದಿಂದ ಬಳಲುತ್ತಿರುವ ಹಿರಿಯ ಟಿವಿ ನಟ ಹಾಗೂ ರಾಕ್‌ಸ್ಟಾರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವೈಭವದ ಜೀವನದ ನಡುವೆಯೂ ಡೇಟಿಂಗ್ ಆಪ್‌ಗಳ ಹುಚ್ಚು ಹಚ್ಚಿಕೊಂಡಿರುವ ಈತನ ಜೀವನ, ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಜೈಲು ಪಾಲಾದಾಗ ಸಂಪೂರ್ಣವಾಗಿ ತಲೆಕೆಳಗಾಗುತ್ತದೆ. ಈ ಕರಾಳ ಜಗತ್ತಿನ ಕಥೆಯಲ್ಲಿ ಕನ್ನಡದ ರಾಜ್ ಬಿ ಶೆಟ್ಟಿ ಅವರು ಅತ್ಯಂತ ಪ್ರಮುಖ ಹಾಗೂ ತೀವ್ರತೆಯಿಂದ ಕೂಡಿರುವ ವಿಭಿನ್ನ ಪಾತ್ರವೊಂದನ್ನು ನಿರ್ವಹಿಸಿದ್ದಾರೆ ಎಂಬುದು ಟ್ರೈಲರ್‌ನಿಂದ ಸ್ಪಷ್ಟವಾಗಿದೆ. ಅನುರಾಗ್ ಕಶ್ಯಪ್ ಅವರ ವಿಶಿಷ್ಟ ಶೈಲಿಯ ಕರಾಳ ಹಾಸ್ಯ ಹಾಗೂ ತೀವ್ರ ಸಸ್ಪೆನ್ಸ್ ಹೊಂದಿರುವ ಈ ಚಿತ್ರಕ್ಕೆ ಸುದೀಪ್ ಶರ್ಮಾ ಮತ್ತು ಅಭಿಷೇಕ್ ಬ್ಯಾನರ್ಜಿ ಕಥೆ ಬರೆದಿದ್ದಾರೆ.

ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಹಾಗೂ ಬಾಬಿ ಡಿಯೋಲ್ ಅವರೊಂದಿಗೆ ಪ್ರಮುಖ ಪಾತ್ರಗಳಲ್ಲಿ ಸಾನ್ಯಾ ಮಲ್ಹೋತ್ರಾ, ಸಪ್ನಾ ಪಬ್ಬಿ ಮತ್ತು ಸಬಾ ಆಜಾದ್ ಸೇರಿದಂತೆ ದಕ್ಷಿಣ ಭಾರತದ ಹಲವು ಪ್ರಮುಖ ತಾರೆಯರು ನಟಿಸಿದ್ದಾರೆ.

ಜೀ ಸ್ಟುಡಿಯೋಸ್ ಸಹಯೋಗದೊಂದಿಗೆ ನಿಖಿಲ್ ದ್ವಿವೇದಿ ಅವರ ಸ್ಯಾಫ್ರನ್ ಮ್ಯಾಜಿಕ್‌ವರ್ಕ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಜೂನ್ 5ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲು ಸಿದ್ಧವಾಗಿದೆ. ಮೊದಲ ಹಿಂದಿ ಚಿತ್ರದಲ್ಲೇ ರಾಜ್ ಬಿ ಶೆಟ್ಟಿ ಅವರು ಕರಾವಳಿಯ ನಟನಾ ಗತ್ತನ್ನು ಬಾಲಿವುಡ್ ಅಂಗಳದಲ್ಲಿ ಹೇಗೆ ಪ್ರದರ್ಶಿಸಿದ್ದಾರೆ ಎಂಬುದನ್ನು ನೋಡಲು ಇಡೀ ಕರ್ನಾಟಕದ ಚಿತ್ರಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

Read More
Next Story