
ಆಕಾಶ್ ಸಿನಿಮಾ ನಾಳೆ ಮರು ಬಿಡುಗಡೆಯಾಗುತ್ತಿದೆ.
ಅಪ್ಪು ಹುಟ್ಟುಹಬ್ಬಕ್ಕೆ ನಾಳೆ ರಾಜ್ಯಾದ್ಯಂತ 'ಆಕಾಶ್' ಸಿನಿಮಾ ಮರು ಬಿಡುಗಡೆ
ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವು ಮಾರ್ಚ್ 17ರಂದು ಇದ್ದು, ಈ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲು ಪಿಆರ್‌ಕೆ ಪ್ರೊಡಕ್ಷನ್ ನಿರ್ಧರಿಸಿದೆ.
ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದ ಅಂಗವಾಗಿ 21 ವರ್ಷಗಳ ಹಿಂದೆ ಬಿಡುಗಡೆಯಾಗಿ ಯಶಸ್ಸು ಕಂಡಿದ್ದ ಆಕಾಶ್ ಸಿನಿಮಾ ನಾಳೆ ಮರು ಬಿಡುಗಡೆಯಾಗುತ್ತಿದೆ.
ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವು ಮಾರ್ಚ್ 17ರಂದು ಇದ್ದು, ಈ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲು ಪಿಆರ್‌ಕೆ ಪ್ರೊಡಕ್ಷನ್ ನಿರ್ಧರಿಸಿದೆ. ಹೀಗಾಗಿ ಅಪ್ಪು ನಟನೆಯ ಆಕಾಶ್ ಸಿನಿಮಾವನ್ನು ರಾಜ್ಯದ 80 ರಿಂದ 100 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ.
ಆಕಾಶ್ ಸಿನಿಮಾವು 2005ರಲ್ಲಿ ಬಿಡುಗಡೆಯಾಗಿ 25 ವಾರಗಳ ಕಾಲ ಚಿತ್ರಮಂದಿರಗಳಲ್ಲಿ ಅದ್ಧೂರಿ ಪ್ರದರ್ಶನ ಕಂಡಿತ್ತು. ಸಿನಿಮಾವನ್ನು ಮಹೇಶ್ ಬಾಬು ನಿರ್ದೇಶನ ಮಾಡಿದ್ದು, ಆರ್.ಪಿ ಪಟ್ನಾಯಕ್ ಸಂಗೀತ, ಪುನೀತ್-ರಮ್ಯಾ ನಟನೆ ಎಲ್ಲಾ ಸೇರಿ ಸಿನಿಮಾ ಗೆದ್ದಿತ್ತು. ಶ್ರೀ ಚಕ್ರೇಶ್ವರಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಅಂದು ಸಿನಿಮಾ ನಿರ್ಮಾಣ ಮಾಡಿದ್ದರು. ಮೊದಲ ಬಾರಿ ತಮ್ಮ ಸಂಸ್ಥೆಯ ಚಿತ್ರವನ್ನು ವಿದೇಶದಲ್ಲಿ ಚಿತ್ರೀಕರಿಸಿದ್ದರು. ಹಾಗಾಗಿ ಬಜೆಟ್ ಕೊಂಚ ಜಾಸ್ತಿ ಆಗಿತ್ತು. ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಬಹುತೇಕ ಚಿತ್ರೀಕರಣ ನಡೆದಿತ್ತು. 2 ಹಾಡುಗಳನ್ನು ವಿದೇಶದಲ್ಲಿ ಶೂಟಿಂಗ್ ಮಾಡಲಾಗಿತ್ತು. ಹೀಗಾಗಿ ಈ ಸಿನಿಮಾದ ಚಿತ್ರೀಕರಣಕ್ಕೆ 90 ಲಕ್ಷ ರೂ.ವರೆಗೆ ಖರ್ಚಾಗಿತ್ತು. ಒಟ್ಟಾರೆ 2 ಕೋಟಿ ರೂ. ವೆಚ್ಚದಲ್ಲಿ 'ಆಕಾಶ್' ಸಿನಿಮಾ ನಿರ್ಮಾಣವಾಗಿತ್ತು.
ಆದರೆ ಈ ಸಿನಿಮಾ ಮೊದಲ 3 ವಾರಕ್ಕೆ 2 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ವರದಿ ಆಗಿತ್ತು. ಅಲ್ಲಿವರೆಗೆ ಡಾ. ರಾಜ್‌ಕುಮಾರ್ ಸಂಸ್ಥೆಯಲ್ಲಿ ನಿರ್ಮಾಣವಾಗಿದ್ದ ಎಲ್ಲಾ ಸಿನಿಮಾಗಳ ಗಳಿಕೆಯನ್ನು 'ಆಕಾಶ್' ಮೀರಿಸಿತ್ತು. ಶತದಿನೋತ್ಸವ ಆಚರಿಸಿದ್ದ ಸಿನಿಮಾ 10 ಕೋಟಿ ರೂ.ವರೆಗೆ ಬ್ಯುಸಿನೆಸ್ ಮಾಡಿತ್ತು.
ಈ ಸಿನಿಮಾ ಕೆ. ಜಿ ರಸ್ತೆಯ ಮೇನಕಾ ಚಿತ್ರಮಂದಿರದಲ್ಲಿ ತೆರೆಕಂಡು ಚಿತ್ರದ 48 ಶೋಗಳು ಹೌಸ್‌ಫುಲ್ ಆಗಿ ದಾಖಲೆ ಬರೆದಿತ್ತು. ಕಳೆದ ಮೂರು ವರ್ಷಗಳಿಂದ ಪುನೀತ್ ಹುಟ್ಟುಹಬ್ಬದ ಅಂಗವಾಗಿ ಅವರ ಸೂಪರ್ ಹಿಟ್ ಸಿನಿಮಾಗಳು ರಿ- ರಿಲೀಸ್ ಆಗುತ್ತಿದ್ದು, 'ಜಾಕಿ' ಹಾಗೂ 'ಅಪ್ಪು' ಸಿಮಿಮಾಗಳು ತೆರೆ ಕಂಡಿತ್ತು.

