ಪೆದ್ದಿ ಚಿತ್ರದಲ್ಲಿ ಜಾನ್ವಿ ಕಪೂರ್ ದೃಶ್ಯಕ್ಕೆ ವಿರೋಧ; ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಬುಚ್ಚಿ ಬಾಬು
x

'ಪೆದ್ದಿ' ಚಿತ್ರದಲ್ಲಿ ಜಾನ್ವಿ ಕಪೂರ್ ದೃಶ್ಯಕ್ಕೆ ವಿರೋಧ

'ಪೆದ್ದಿ' ಚಿತ್ರದಲ್ಲಿ ಜಾನ್ವಿ ಕಪೂರ್ ದೃಶ್ಯಕ್ಕೆ ವಿರೋಧ; ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಬುಚ್ಚಿ ಬಾಬು

ಖ್ಯಾತ ನಟಿ ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಪೆದ್ದಿ' ಸಿನಿಮಾದಲ್ಲಿ ಅವರ ಪಾತ್ರವನ್ನು ಅತಿರೇಕವಾಗಿ ಮತ್ತು ಅಸಭ್ಯವಾಗಿ ಬಿಂಬಿಸಲಾಗಿದೆ ಎಂಬ ತೀವ್ರ ಆಕ್ರೋಶದ ಬೆನ್ನಲ್ಲೇ, ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆ ತಂದಿರುವುದಕ್ಕಾಗಿ ನಿರ್ದೇಶಕ ಬುಚ್ಚಿ ಬಾಬು ಸನಾ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.


Click the Play button to hear this message in audio format

ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ 'ಪೆದ್ದಿ' ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡಿದ್ದು, ಚಿತ್ರದಲ್ಲಿ ಜಾನ್ವಿ ಕಪೂರ್ ಅವರ ಪಾತ್ರವನ್ನು ತೋರಿಸಿರುವ ರೀತಿಗೆ ಪ್ರೇಕ್ಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಚಿತ್ರದಲ್ಲಿ ಮಹಿಳಾ ಪಾತ್ರವನ್ನು ಕೇವಲ ಲೈಂಗಿಕ ವಸ್ತುವಿನಂತೆ ಬಿಂಬಿಸಲಾಗಿದೆ ಮತ್ತು ಚಿತ್ರದ ಕ್ಯಾಮೆರಾ ಕೆಲಸ ಹಾಗೂ ಸಂಭಾಷಣೆಗಳು ಅಸಭ್ಯವಾಗಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕ ಬುಚ್ಚಿ ಬಾಬು ಸನಾ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ವಿಶೇಷವಾಗಿ ಚಿತ್ರದಲ್ಲಿ ಬರುವ ಒಂದು ದೃಶ್ಯದಲ್ಲಿ, ಕರೆಂಟ್ ಹೋದಾಗ ನಾಯಕ ರಾಮ್ ಚರಣ್, ನಾಯಕಿ ಅಚ್ಚಯ್ಯಮ್ಮ (ಜಾನ್ವಿ ಕಪೂರ್) ಪಾತ್ರಕ್ಕೆ ಬಲವಂತವಾಗಿ ಮುತ್ತಿಡುತ್ತಾನೆ. ಈ ದೃಶ್ಯವನ್ನು ಜಾಲತಾಣಗಳಲ್ಲಿ ಅನೇಕರು 'ಲೈಂಗಿಕ ದೌರ್ಜನ್ಯ' ಎಂದು ಕರೆದು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ನಿರ್ದೇಶಕರು, ಪ್ರೇಕ್ಷಕರ ಅಭಿಪ್ರಾಯವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ವಿವಾದಕ್ಕೆ ಕಾರಣವಾಗಿರುವ ದೃಶ್ಯಗಳನ್ನು ಕತ್ತರಿಸಲು ಅಥವಾ ಬದಲಾಯಿಸಲು ಚಿತ್ರತಂಡ ನಿರ್ಧರಿಸಿದೆ ಎಂದು ಪ್ರಕಟಿಸಿದ್ದಾರೆ.

ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪ್ರಕಟಣೆ ಹೊರಡಿಸಿರುವ ಬುಚ್ಚಿ ಬಾಬು ಸನಾ, ಸಿನಿಮಾ ಎಂಬುದು ಜನರನ್ನು ರಂಜಿಸುವ ಮತ್ತು ಪ್ರೇರೇಪಿಸುವ ಮಾಧ್ಯಮವಾಗಬೇಕೇ ಹೊರತು ಯಾರಿಗೂ ಮುಜುಗರ ಉಂಟುಮಾಡುವಂತಾಗಬಾರದು ಎಂದಿದ್ದಾರೆ.

ತೆರೆಯ ಮೇಲಾಗಲಿ ಅಥವಾ ನಿಜ ಜೀವನದಲ್ಲಾಗಲಿ ತಮಗೆ ಮಹಿಳೆಯರ ಮೇಲೆ ಅಪಾರ ಗೌರವವಿದ್ದು, ಯಾವುದೇ ಮಹಿಳಾ ಪಾತ್ರವನ್ನು ಕೀಳಾಗಿ ಬಿಂಬಿಸುವ ಉದ್ದೇಶ ತಮಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರೇಕ್ಷಕರ ಭಾವನೆಗಳಿಗೆ ಗೌರವ ನೀಡಿ, ವಿವಾದಾತ್ಮಕ ಭಾಗಗಳನ್ನು ಎಡಿಟ್ ಮಾಡುತ್ತಿರುವುದಾಗಿ ತಿಳಿಸಿರುವ ಅವರು, ಪ್ರಾಮಾಣಿಕ ಪ್ರತಿಕ್ರಿಯೆ ನೀಡಿದ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ. ಆದರೆ ಈ ಇಡೀ ವಿವಾದದ ಕುರಿತು ನಟಿ ಜಾನ್ವಿ ಕಪೂರ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Read More
Next Story