
ಚಲನಚಿತ್ರ ರಂಗದ ಅತ್ಯುನ್ನತ ಗೌರವವಾದ 98ನೇ ಅಕಾಡೆಮಿ ಪ್ರಶಸ್ತಿ ಸಮಾರಂಭವು ಮಾರ್ಚ್ 16 ರಂದು ನಡೆಯಲಿದೆ.
Oscars 2026| ಆಸ್ಕರ್ ಪ್ರಶಸ್ತಿ ಪ್ರದಾನಕ್ಕೆ ಕೌಂಟ್‌ಡೌನ್ ಶುರು- ನೇರಪ್ರಸಾರ ಎಲ್ಲಿ ವೀಕ್ಷಿಸಬಹುದು?
ಚಲನಚಿತ್ರ ರಂಗದ ಅತ್ಯುನ್ನತ ಗೌರವವಾದ 98ನೇ ಅಕಾಡೆಮಿ ಪ್ರಶಸ್ತಿ ಸಮಾರಂಭವು ಮಾರ್ಚ್ 16ರಂದು ಅದ್ಧೂರಿಯಾಗಿ ಜರುಗಲಿದೆ.
ಸಿನಿಮಾ ರಂಗದ ಅತ್ಯಂತ ಪ್ರತಿಷ್ಠಿತ ಗೌರವವಾದ 'ಆಸ್ಕರ್' ಹಬ್ಬಕ್ಕೆ ಈಗ ಕ್ಷಣಗಣನೆ ಆರಂಭವಾಗಿದೆ. 98ನೇ ವಾರ್ಷಿಕ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 16ರಂದು ಲಾಸ್ ಏಂಜಲೀಸ್‌ನ ಹಾಲಿವುಡ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ.
ವಿಶೇಷವೆಂದರೆ ಈ ಬಾರಿ ಸಮಾರಂಭವು ಎಂದಿನ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಪ್ರಾರಂಭವಾಗಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಸೋಮವಾರ ಮುಂಜಾನೆ 4:30ಕ್ಕೆ ನೇರ ಪ್ರಸಾರ ಆರಂಭವಾಗಲಿದೆ. ಪ್ರಸಿದ್ಧ ಲೇಟ್ ನೈಟ್ ಶೋ ನಿರೂಪಕ ಕೋನಾನ್ ಒಬ್ರೇನ್ ಅವರು ಸತತ ಎರಡನೇ ಬಾರಿಗೆ ಈ ಕಾರ್ಯಕ್ರಮದ ನಿರೂಪಣೆಯನ್ನು ವಹಿಸಿಕೊಂಡಿದ್ದು, ತಮ್ಮ ವಿಶಿಷ್ಟ ಹಾಸ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.
ಈ ಬಾರಿಯ ನಾಮನಿರ್ದೇಶನ ಪಟ್ಟಿಯಲ್ಲಿ ಹಾಲಿವುಡ್‌ನ ದಿಗ್ಗಜ ನಟ-ನಟಿಯರು ಮತ್ತು ತಂತ್ರಜ್ಞರ ದಂಡೇ ಇದೆ. ಎಲ್ ಫ್ಯಾನಿಂಗ್, ತಿಮೋತಿ ಚಾಲಮೆಟ್, ಲಿಯೊನಾರ್ಡೊ ಡಿಕ್ಯಾಪ್ರಿಯೊ, ಎಮ್ಮಾ ಸ್ಟೋನ್ ಮತ್ತು ಸ್ಟೆಲನ್ ಸ್ಕಾರ್ಸ್‌ಗಾರ್ಡ್ ಅಂತಹ ಘಟಾನುಘಟಿಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇನ್ನು ನಿರ್ದೇಶನ ವಿಭಾಗದಲ್ಲಿ ಕ್ಲೋಯ್ ಝಾವೊ, ಪೌಲ್ ಥಾಮಸ್ ಆಂಡರ್ಸನ್ ಮತ್ತು ರಿಯಾನ್ ಕೂಗ್ಲರ್ ಅವರಂತಹ ಪ್ರಭಾವಿ ನಿರ್ದೇಶಕರು ಕಾಣಿಸಿಕೊಂಡಿದ್ದಾರೆ. 'ಬುಗೋನಿಯಾ', 'ಎಫ್1', 'ಫ್ರಾಂಕೆನ್‌ಸ್ಟೈನ್' ಮತ್ತು 'ಸಿನ್ನರ್ಸ್' ನಂತಹ ಚಲನಚಿತ್ರಗಳು ಪ್ರಮುಖ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡು ಕುತೂಹಲ ಮೂಡಿಸಿವೆ.
ವೇದಿಕೆಯ ಮೇಲೆ ಪ್ರಶಸ್ತಿ ಪ್ರದಾನ ಮಾಡಲು ಕಳೆದ ವರ್ಷದ ವಿಜೇತರಾದ ಏಡ್ರಿಯನ್ ಬ್ರಾಡಿ, ಮೈಕಿ ಮ್ಯಾಡಿಸನ್ ಮತ್ತು ಜೋ ಸಲ್ಡಾನಾ ಅವರೊಂದಿಗೆ ಪ್ರಿಯಾಂಕಾ ಚೋಪ್ರಾ, ರಾಬರ್ಟ್ ಡೌನಿ ಜೂನಿಯರ್ ಮತ್ತು ಕ್ರಿಸ್ ಇವಾನ್ಸ್ ಸೇರಿದಂತೆ ಹಲವು ತಾರೆಯರು ಆಗಮಿಸಲಿದ್ದಾರೆ.
ಅಲ್ಲದೆ, 'ಬೆಸ್ಟ್ ಒರಿಜಿನಲ್ ಸಾಂಗ್' ವಿಭಾಗದಲ್ಲಿ ನಾಮನಿರ್ದೇಶನಗೊಂಡಿರುವ ಗೀತೆಗಳ ನೇರ ಗಾಯನ ಪ್ರದರ್ಶನವು ಪ್ರೇಕ್ಷಕರಿಗೆ ಸಂಗೀತದ ರಸದೌತಣ ನೀಡಲಿದೆ. ಭಾರತದಲ್ಲಿ ಈ ಸಮಾರಂಭವನ್ನು ಜಿಯೋಹಾಟ್‌ಸ್ಟಾರ್, ಸ್ಟಾರ್ ಮೂವೀಸ್ ಮತ್ತು ಕಲರ್ಸ್ ಇನ್ಫಿನಿಟಿ ವಾಹಿನಿಗಳಲ್ಲಿ ವೀಕ್ಷಿಸಬಹುದಾಗಿದೆ. ಮುಂಜಾನೆ 4:30ಕ್ಕೆ ಆರಂಭವಾಗುವ ರೆಡ್ ಕಾರ್ಪೆಟ್ ಕಾರ್ಯಕ್ರಮದೊಂದಿಗೆ ಈ ಸಿನಿಮಾ ಹಬ್ಬಕ್ಕೆ ಅದ್ಧೂರಿ ಚಾಲನೆ ಸಿಗಲಿದೆ.

