
ವಿವೇಕ್ ರಂಜನ್ ಅಗ್ನಿಹೋತ್ರಿ ಮತ್ತು ಖ್ಯಾತ ನಿರ್ಮಾಪಕ ಭೂಷಣ್ ಕುಮಾರ್ ತಮ್ಮ ನೂತನ ಚಿತ್ರ ‘ಆಪರೇಷನ್ ಸಿಂದೂರ್’ ಅನ್ನು ಗುರುವಾರ ಅಧಿಕೃತವಾಗಿ ಘೋಷಿಸಿದ್ದಾರೆ.
Operation Sindoor| ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ಆಪರೇಷನ್ ಸಿಂದೂರ್’ ಅಧಿಕೃತ ಘೋಷಣೆ
2025ರ ಏಪ್ರಿಲ್ 22 ರಂದು ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ವ್ಯಾಲಿಯಲ್ಲಿ ಲಷ್ಕರ್-ಎ-ತೈಬಾ ಬೆಂಬಲಿತ ಉಗ್ರರು ಪ್ರವಾಸಿಗರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು.
ಭಾರತೀಯ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಟಿ-ಸೀರೀಸ್ ಮತ್ತು ವಿವೇಕ್ ರಂಜನ್ ಅಗ್ನಿಹೋತ್ರಿ ಅವರ ‘ಐ ಆಮ್ ಬುದ್ಧ’ ಪ್ರೊಡಕ್ಷನ್ಸ್ ಜಂಟಿಯಾಗಿ ತಮ್ಮ ನೂತನ ಚಿತ್ರ ‘ಆಪರೇಷನ್ ಸಿಂದೂರ್’ ಅನ್ನು ಘೋಷಿಸಿವೆ.
2025ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಗೆ ಭಾರತೀಯ ಸೇನೆಯು ನೀಡಿದ ಪ್ರತ್ಯುತ್ತರದ ಕಥೆಯೇ ಈ ಸಿನಿಮಾದ ಜೀವಾಳ. ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್. 'ಟೈನಿ' ಧಿಲ್ಲೋನ್ ಅವರು ಬರೆದ ‘ಆಪರೇಷನ್ ಸಿಂದೂರ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಇಂಡಿಯಾಸ್ ಡೀಪ್ ಸ್ಟ್ರೈಕ್ಸ್ ಇನ್‌ಸೈಡ್ ಪಾಕಿಸ್ತಾನ್’ ಎಂಬ ಕೃತಿಯನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗುತ್ತಿದೆ.
ಪಹಲ್ಗಾಮ್ ಹತ್ಯಾಕಾಂಡದಲ್ಲಿ 26 ಮಂದಿ ನಾಗರಿಕರು ಬಲಿಯಾದ ನಂತರ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಳ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ಭಾರತೀಯ ಸೇನೆಯ ಶೌರ್ಯದ ಕಥೆ ಈ ಚಿತ್ರದ ಮೂಲಕ ತೆರೆಯ ಮೇಲೆ ಅನಾವರಣಗೊಳ್ಳಲಿದೆ. ‘ದಿ ಕಾಶ್ಮೀರ್ ಫೈಲ್ಸ್’ ಮತ್ತು ‘ದಿ ತಾಷ್ಕೆಂಟ್ ಫೈಲ್ಸ್’ ನಂತಹ ಸಂಚಲನ ಸೃಷ್ಟಿಸಿದ ಚಿತ್ರಗಳ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಕೇವಲ ಸಿನಿಮಾ ಅಲ್ಲ, ಬದಲಾಗಿ ಭಾರತದ ಕಾರ್ಯತಂತ್ರದ ಬಲ ಮತ್ತು ಆಧುನಿಕ ಯುದ್ಧತಂತ್ರದ ಶಕ್ತಿಯನ್ನು ಸಾರುವ ಸತ್ಯ ಘಟನೆಗಳ ಅನಾವರಣ ಎಂದು ಚಿತ್ರತಂಡ ಬಣ್ಣಿಸಿದೆ.
ಸಿನಿಮಾ ಘೋಷಣೆ ಕುರಿತು ಮಾತನಾಡಿದ ನಿರ್ಮಾಪಕ ಭೂಷಣ್ ಕುಮಾರ್, “ಕೆಲವು ಕಥೆಗಳು ತಾವಾಗಿಯೇ ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಆಪರೇಷನ್ ಸಿಂದೂರ್ ಅಂತಹದ್ದೇ ಒಂದು ಘಟನೆ. ಇತಿಹಾಸದ ಇಂತಹ ಮಹತ್ವದ ತಿರುವುಗಳನ್ನು ಪ್ರಾಮಾಣಿಕವಾಗಿ ದಾಖಲಿಸುವುದು ನಮ್ಮ ಜವಾಬ್ದಾರಿ,” ಎಂದಿದ್ದಾರೆ.
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮಾತನಾಡಿ, ಭಾರತೀಯ ಸಶಸ್ತ್ರ ಪಡೆಗಳ ವಿವಿಧ ವಿಭಾಗಗಳ ಸಹಯೋಗದೊಂದಿಗೆ ವ್ಯಾಪಕ ಸಂಶೋಧನೆ ನಡೆಸಿ ಈ ಚಿತ್ರಕಥೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಪಹಲ್ಗಾಮ್ ದಾಳಿಗೆ ಭಾರತ ಹೇಗೆ ಸೇಡು ತೀರಿಸಿಕೊಂಡಿತು ಮತ್ತು ಜಗತ್ತಿಗೆ ತನ್ನ ಸೈನಿಕ ಸಾಮರ್ಥ್ಯವನ್ನು ಹೇಗೆ ತೋರಿಸಿಕೊಟ್ಟಿತು ಎಂಬುದನ್ನು ಅತ್ಯಂತ ರೋಚಕವಾಗಿ ಈ ಚಿತ್ರದಲ್ಲಿ ತೋರಿಸಲಾಗುವುದು. ಸದ್ಯದಲ್ಲೇ ಚಿತ್ರದ ತಾರಾಗಣ ಮತ್ತು ತಾಂತ್ರಿಕ ತಂಡದ ಕುರಿತು ಹೆಚ್ಚಿನ ಮಾಹಿತಿ ಹೊರಬೀಳಲಿದೆ.

