
ಸಿನಿಮಾ ನೋಡದೆ ವಿರೋಧಿಸುವುದು ಸರಿಯಲ್ಲ ಎಂದು 'ಧುರಂಧರ್ 2' ಚಿತ್ರವನ್ನು 'ಪ್ರೊಪಗಾಂಡಾ' ಎಂದು ಟೀಕಿಸುತ್ತಿರುವವರಿಗೆ ಹಿರಿಯ ನಟ ಮಿಥುನ್ ಚಕ್ರವರ್ತಿ ಖಡಕ್ ತಿರುಗೇಟು ನೀಡಿದ್ದಾರೆ.
'ಧುರಂಧರ್ 2' ಪ್ರೊಪಗಾಂಡಾ ಎಂದವರಿಗೆ ಮಿಥುನ್ ಚಕ್ರವರ್ತಿ ಖಡಕ್ ತಿರುಗೇಟು
'ಧುರಂಧರ್ 2' ಚಿತ್ರವನ್ನು 'ಪ್ರೊಪಗಾಂಡಾ' ಎಂದು ಟೀಕಿಸುತ್ತಿರುವವರಿಗೆ ಹಿರಿಯ ನಟ ಮಿಥುನ್ ಚಕ್ರವರ್ತಿ ಖಡಕ್ ತಿರುಗೇಟು ನೀಡಿದ್ದಾರೆ.
ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಬೆನ್ನಲ್ಲೇ, ಚಿತ್ರವನ್ನು 'ಪ್ರೊಪಗಾಂಡಾ' ಎಂದು ಟೀಕಿಸುತ್ತಿರುವವರ ವಿರುದ್ಧ ಹಿರಿಯ ನಟ ಮಿಥುನ್ ಚಕ್ರವರ್ತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 'ದಿ ಬೆಂಗಾಲ್ ಫೈಲ್ಸ್' ಚಿತ್ರಕ್ಕೆ ಎದುರಾದ ಅಡೆತಡೆಗಳನ್ನು ಉದಾಹರಣೆಯಾಗಿ ನೀಡಿದ ಅವರು, "ಒಂದು ಚಿತ್ರವನ್ನು ನೋಡುವ ಮೊದಲೇ ವಿರೋಧಿಸುವುದು ಮತ್ತು ಯಶಸ್ವಿಯಾದ ಮೇಲೆ ಅದನ್ನು ಪ್ರೊಪಗಾಂಡಾ ಎಂದು ಕರೆಯುವುದು ಅತ್ಯಂತ ದುರದೃಷ್ಟಕರ" ಎಂದು ಟೀಕಾಕಾರರಿಗೆ ನೇರ ತಿರುಗೇಟು ನೀಡಿದ್ದಾರೆ.
"ನೀವು ಬಂಗಾಳದಲ್ಲಿ 'ದಿ ಬೆಂಗಾಲ್ ಫೈಲ್ಸ್' ಬಿಡುಗಡೆಗೆ ಅವಕಾಶ ನೀಡಲಿಲ್ಲ. ಇದಕ್ಕಿಂತ ದೊಡ್ಡ ಸಮಸ್ಯೆ ಬೇರೆ ಇಲ್ಲ. ಆದರೆ ಈಗ 'ಧುರಂಧರ್ 2' ಅನ್ನು ಪ್ರೊಪಗಾಂಡಾ ಎನ್ನುತ್ತಿದ್ದೀರಿ. ಹಾಗಿದ್ದರೆ ಈ ಚಿತ್ರವನ್ನೂ ಏಕೆ ತಡೆಯಲಿಲ್ಲ? ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾದ ಮೇಲೆ ಅದನ್ನು ಪ್ರೊಪಗಾಂಡಾ ಎನ್ನುವುದು ಸರಿಯಲ್ಲ. 'ದಿ ಬೆಂಗಾಲ್ ಫೈಲ್ಸ್'ನ ಒಂದು ರೀಲ್ ಕೂಡ ನೋಡದೆ ಅದನ್ನು ಮೊದಲೇ ವಿರೋಧಿಸಲಾಯಿತು. ಇದು ಅತ್ಯಂತ ದುರದೃಷ್ಟಕರ ಸಂಗತಿ," ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರದ ಭರ್ಜರಿ ಬ್ಯುಸಿನೆಸ್ ಬಗ್ಗೆ ಮಾತನಾಡಿದ ಅವರು, ಎಲ್ಲ ಧರ್ಮದ ಜನರು ಚಿತ್ರವನ್ನು ನೋಡಿದ್ದಾರೆ ಮತ್ತು ಮೆಚ್ಚಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ದಿ ಬೆಂಗಾಲ್ ಫೈಲ್ಸ್ ವಿವಾದ ಏನು?
ವಿವೇಕ್ ಅಗ್ನಿಹೋತ್ರಿ ಅವರ 'ಫೈಲ್ಸ್' ಸರಣಿಯ ಮೂರನೇ ಚಿತ್ರವಾದ 'ದಿ ಬೆಂಗಾಲ್ ಫೈಲ್ಸ್' ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಬೇಕಿತ್ತು. 1946ರ ಕಲ್ಕತ್ತಾ ದಂಗೆಯ ಹಿನ್ನೆಲೆಯಲ್ಲಿ ಹಿಂದೂಗಳ ಹತ್ಯಾಕಾಂಡವನ್ನು ಈ ಸಿನಿಮಾ ಚಿತ್ರಿಸಿದೆ ಎಂದು ಹೇಳಲಾಗಿತ್ತು. ಆದರೆ ಪಶ್ಚಿಮ ಬಂಗಾಳದ ಚಿತ್ರಮಂದಿರಗಳಲ್ಲಿ ಈ ಚಿತ್ರಕ್ಕೆ ಅಧಿಕೃತವಾಗಿ ನಿಷೇಧ ಹೇರದಿದ್ದರೂ, ಪ್ರದರ್ಶನ ನೀಡಲು ಅವಕಾಶ ಸಿಗದೆ ವಿವಾದ ಸೃಷ್ಟಿಸಿತ್ತು
'ಧುರಂಧರ್ 2' ಸಿನಿಮಾದ ರಾಜಕೀಯದ ಬಗ್ಗೆ ಕಳೆದ ಡಿಸೆಂಬರ್‌ನಲ್ಲಿ ನಟ ಹೃತಿಕ್ ರೋಷನ್ ಪ್ರಶ್ನೆ ಮಾಡಿದ್ದರು. ಆದರೆ ಸಿನಿಮಾ ಬಿಡುಗಡೆಯಾದ ನಂತರ ದಕ್ಷಿಣದ ಸ್ಟಾರ್ ನಟರಾದ ಅಲ್ಲು ಅರ್ಜುನ್, ರಾಮ್ ಚರಣ್, ವಿಜಯ್ ದೇವರಕೊಂಡ ಹಾಗೂ ಬಾಲಿವುಡ್ ನಟರಾದ ವಿಕ್ಕಿ ಕೌಶಲ್ ಮತ್ತು ಕಾರ್ತಿಕ್ ಆರ್ಯನ್ ಚಿತ್ರದ ಮೇಕಿಂಗ್ ಮತ್ತು ನಟನೆಯನ್ನು ಶ್ಲಾಘಿಸಿದ್ದಾರೆ.
ದಿಲ್ಲಿಯಲ್ಲಿ ನಡೆದ ಐಎಫ್‌ಎಫ್‌ಡಿ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಇಮ್ತಿಯಾಜ್ ಅಲಿ, "ನಾನು ಇನ್ನೂ 'ಧುರಂಧರ್ 2' ನೋಡಿಲ್ಲ, ಆದರೆ ಅದರಲ್ಲಿ ಅದ್ಭುತವಾದ ವಿಷಯಗಳಿವೆ ಎಂದು ಕೇಳಿದ್ದೇನೆ. ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಕರೆತಂದಿದ್ದಕ್ಕಾಗಿ ಚಿತ್ರತಂಡಕ್ಕೆ ಅಭಿನಂದನೆಗಳು," ಎಂದಿದ್ದಾರೆ. 'ಧುರಂಧರ್ 2' ಚಿತ್ರವು ಕೇವಲ 11 ದಿನಗಳಲ್ಲಿ ತನ್ನ ಮೊದಲ ಭಾಗದ ಒಟ್ಟು ಗಳಿಕೆಯನ್ನು ಮೀರಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

