
ಮಾ ಇಂಟಿ ಬಂಗಾರಂ ಟ್ವಿಟರ್ ರಿವ್ಯೂ: ಸಮಂತಾ ಆ್ಯಕ್ಷನ್‌ಗೆ ಫ್ಯಾನ್ಸ್ ಫಿದಾ
ಸಮಂತಾ ನಟನೆಯ 'ಮಾ ಇಂಟಿ ಬಂಗಾರಂ' ಇಂದು ಬಿಡುಗಡೆಯಾಗಿದೆ. ನಟಿಯ ಮಾಸ್ ಆ್ಯಕ್ಷನ್‌ಗೆ ಪ್ರಶಂಸೆ ಸಿಕ್ಕರೂ, ಚಿತ್ರದ ಹಳೆಯ ಕಥೆಯ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸ್ಟಾರ್ ನಟಿ ಸಮಂತಾ ರುತ್ ಪ್ರಭು ಬಹುದಿನಗಳ ನಂತರ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಮಾ ಇಂಟಿ ಬಂಗಾರಂ' ಸಿನಿಮಾ ಇಂದು ವಿಶ್ವದಾದ್ಯಂತ ತೆರೆಕಂಡಿದೆ. ಖ್ಯಾತ ನಿರ್ದೇಶಕಿ ನಂದಿನಿ ರೆಡ್ಡಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಕೌಟುಂಬಿಕ ಆ್ಯಕ್ಷನ್ ಎಂಟರ್‌ಟೈನರ್ ಚಿತ್ರದ ಮೇಲೆ ಆರಂಭದಿಂದಲೂ ಭಾರಿ ನಿರೀಕ್ಷೆಗಳಿದ್ದವು. ಈಗಾಗಲೇ ವಿದೇಶಗಳಲ್ಲಿ ಪ್ರೀಮಿಯರ್ ಶೋಗಳು ಮುಗಿದಿದ್ದು, ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಮೊದಲ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಹಿಂದೆ ಸಮಂತಾ ಅಭಿನಯದ 'ಓ ಬೇಬಿ' ನಂತಹ ಬ್ಲಾಕ್‌ಬಸ್ಟರ್ ಚಿತ್ರ ನೀಡಿದ್ದ ನಂದಿನಿ ರೆಡ್ಡಿ, ಈ ಬಾರಿಯೂ ಸಮಂತಾ ಅವರನ್ನು ವಿಭಿನ್ನವಾಗಿ ತೆರೆಮೇಲೆ ತಂದಿದ್ದಾರೆ. ಟ್ವಿಟರ್‌ನಲ್ಲಿ ವ್ಯಕ್ತವಾಗುತ್ತಿರುವ ಆರಂಭಿಕ ವಿಮರ್ಶೆಗಳ ಪ್ರಕಾರ, ಚಿತ್ರದಲ್ಲಿ ಸಮಂತಾ ಅವರ ಮಾಸ್ ಆ್ಯಕ್ಷನ್ ಅವತಾರ ಮತ್ತು ನಟನೆಗೆ ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಸಮಂತಾ ಅವರಿಗೆ 'ಲೇಡಿ ಸೂಪರ್ ಸ್ಟಾರ್' ಪಟ್ಟ ಸೂಕ್ತ ಎಂದು ಕೊಂಡಾಡುತ್ತಿದ್ದು, ಚಿತ್ರದ ಹಿನ್ನೆಲೆ ಸಂಗೀತ ಮತ್ತು ಸಾಹಸ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿವೆ ಎಂದು ಟ್ವೀಟ್ ಮಾಡುತ್ತಿದ್ದಾರೆ. ಹಾಗೆಯೇ ಚಿತ್ರದಲ್ಲಿ ಶ್ರೀಮುಖಿ ಅವರ ನಟನೆ ಮತ್ತು ಗ್ಲಾಮರ್ ಕೂಡ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಆದರೆ ಮತ್ತೊಂದೆಡೆ ಚಿತ್ರದ ಕಥೆಯ ಬಗ್ಗೆ ಕೆಲವು ಮಿಶ್ರ ಅಭಿಪ್ರಾಯಗಳೂ ಕೇಳಿಬರುತ್ತಿವೆ. ಸಿನಿಮಾದ ಕಥೆ ತುಂಬಾ ಹಳೆಯದಾಗಿದ್ದು, ಚಿತ್ರಕಥೆ ಸಾಮಾನ್ಯವಾಗಿದೆ ಎಂದು ಕೆಲವು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಮೊದಲಾರ್ಧಕ್ಕಿಂತ ದ್ವಿತೀಯಾರ್ಧ ಕೊಂಚ ವೇಗವಾಗಿದ್ದರೂ, ಎಡಿಟಿಂಗ್ ಗೊಂದಲಮಯವಾಗಿದೆ ಹಾಗೂ ಖಳನಾಯಕನ ಪಾತ್ರ ಅಷ್ಟೊಂದು ಬಲವಾಗಿಲ್ಲ ಎಂಬ ಟೀಕೆಗಳೂ ವ್ಯಕ್ತವಾಗಿವೆ. ಒಟ್ಟಾರೆಯಾಗಿ ಹೇಳುವುದಾದರೆ, ಕುಟುಂಬ ಸಮೇತರಾಗಿ ಒಮ್ಮೆ ನೋಡಬಹುದಾದ ಯೋಗ್ಯ ಸಿನಿಮಾ ಇದಾಗಿದ್ದು, ಸಮಂತಾ ಅಭಿಮಾನಿಗಳಿಗೆ ಮಾತ್ರ ಚಿತ್ರದ ಆ್ಯಕ್ಷನ್ ದೃಶ್ಯಗಳು ಭರ್ಜರಿ ಮನರಂಜನೆ ನೀಡಲಿವೆ ಎಂದು ಪ್ರೇಕ್ಷಕರು ಜಾಲತಾಣಗಳಲ್ಲಿ ಬರೆಯುತ್ತಿದ್ದಾರೆ.
ತಿರುಪತಿಗೆ ಭೇಟಿ ನೀಡಿದ ಸಮಂತಾ ದಂಪತಿ
ಸಮಂತಾ ಅವರೊಂದಿಗೆ ಅವರ ಪತಿ ಹಾಗೂ ಖ್ಯಾತ ನಿರ್ದೇಶಕ ರಾಜ್ ನಿಡಿಮೋರು ಮತ್ತು ಚಿತ್ರದ ನಿರ್ದೇಶಕಿ ಬಿ.ವಿ. ನಂದಿನಿ ರೆಡ್ಡಿ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಚಿತ್ರದ ಭರ್ಜರಿ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದೆ. ಕಳೆದ ಹಲವು ತಿಂಗಳುಗಳಿಂದ ಈ ಚಿತ್ರಕ್ಕಾಗಿ ಒಟ್ಟಾಗಿ ಶ್ರಮಿಸಿರುವ ಇಡೀ ತಂಡ, ಚಿತ್ರ ಬಿಡುಗಡೆಗೂ ಮುನ್ನ ದೇವರ ಆಶೀರ್ವಾದ ಪಡೆಯಲು ಈ ಪವಿತ್ರ ಕ್ಷೇತ್ರಕ್ಕೆ ಆಗಮಿಸಿತ್ತು.
'ಮಾ ಇಂಟಿ ಬಂಗಾರಂ' ಚಿತ್ರವು ಸಮಂತಾ ಅವರ ವೃತ್ತಿಜೀವನದಲ್ಲಿ ಅತ್ಯಂತ ಪ್ರಮುಖ ಮೈಲಿಗಲ್ಲಾಗಿದೆ. ಏಕೆಂದರೆ ಅವರು ಈ ಚಿತ್ರದಲ್ಲಿ ಕೇವಲ ಮುಖ್ಯ ಭೂಮಿಕೆಯಲ್ಲಿ ನಟಿಸುವುದಷ್ಟೇ ಅಲ್ಲದೆ, ಸ್ವತಃ ಚಿತ್ರದ ನಿರ್ಮಾಪಕಿಯಾಗಿಯೂ ಜವಾಬ್ದಾರಿ ಹೊತ್ತಿದ್ದಾರೆ.

