ದಿ ಕೇರಳ ಸ್ಟೋರಿ 2| ಹೈಕೋರ್ಟ್ ತಡೆಯ ನಡುವೆಯೂ ಟಿಕೆಟ್ ಬುಕಿಂಗ್ ; ಪ್ರೇಕ್ಷಕರಲ್ಲಿ ಗೊಂದಲ!
x

'ದಿ ಕೇರಳ ಸ್ಟೋರಿ 2' ಚಿತ್ರದ ಬಿಡುಗಡೆಗೆ ಕೇರಳ ಹೈಕೋರ್ಟ್ 15 ದಿನಗಳ ತಡೆಯಾಜ್ಞೆ ನೀಡಿದೆ. 

'ದಿ ಕೇರಳ ಸ್ಟೋರಿ 2'| ಹೈಕೋರ್ಟ್ ತಡೆಯ ನಡುವೆಯೂ ಟಿಕೆಟ್ ಬುಕಿಂಗ್ ; ಪ್ರೇಕ್ಷಕರಲ್ಲಿ ಗೊಂದಲ!

'ದಿ ಕೇರಳ ಸ್ಟೋರಿ 2' ಚಿತ್ರದ ಬಿಡುಗಡೆಗೆ ಕೇರಳ ಹೈಕೋರ್ಟ್ 15 ದಿನಗಳ ತಡೆಯಾಜ್ಞೆ ನಡುವೆಯೂ, ಮುಂಬೈ ಮತ್ತು ದೆಹಲಿಯ ಚಿತ್ರಮಂದಿರಗಳಲ್ಲಿ ಟಿಕೆಟ್ ಬುಕ್ಕಿಂಗ್ ಲಭ್ಯವಿದೆ.


Click the Play button to hear this message in audio format

ತೀವ್ರ ವಿವಾದಕ್ಕೆ ಕಾರಣವಾಗಿದ್ದ ಬಹುನಿರೀಕ್ಷಿತ ಹಿಂದಿ ಚಲನಚಿತ್ರ 'ದಿ ಕೇರಳ ಸ್ಟೋರಿ 2' ಬಿಡುಗಡೆಗೆ ಕೇರಳ ಹೈಕೋರ್ಟ್ ಗುರುವಾರ ಕೊನೆಯ ಕ್ಷಣದಲ್ಲಿ 15 ದಿನಗಳ ಕಾಲ ತಡೆಯಾಜ್ಞೆ ನೀಡಿದೆ. ನ್ಯಾಯಾಲಯದ ಈ ಮಹತ್ವದ ಆದೇಶದ ಹೊರತಾಗಿಯೂ, ಮುಂಬೈ ಮತ್ತು ದೆಹಲಿಯ ಕೆಲವು ಚಿತ್ರಮಂದಿರಗಳಲ್ಲಿ ಟಿಕೆಟ್ ಬುಕಿಂಗ್ ಲಭ್ಯವಿರುವುದು ಭಾರಿ ಗೊಂದಲಕ್ಕೆ ಕಾರಣವಾಗಿದೆ.

ಹೈಕೋರ್ಟ್ ಆದೇಶದ ನಡುವೆಯೂ ಬುಕ್‌ಮೈಶೋ (BookMyShow) ನಂತಹ ಆನ್‌ಲೈನ್ ಟಿಕೆಟ್ ಬುಕಿಂಗ್ ತಾಣಗಳಲ್ಲಿ ಮುಂಬೈ ಮತ್ತು ದೆಹಲಿಯ ಕೆಲವು ಚಿತ್ರಮಂದಿರಗಳಲ್ಲಿ ಶುಕ್ರವಾರ ಬೆಳಿಗ್ಗೆಯೂ ಟಿಕೆಟ್ ಮಾರಾಟವಾಗುತ್ತಿದೆ. ಮುಂಬೈನ ಸುಮಾರು 21 ಮತ್ತು ದೆಹಲಿಯ 14 ಚಿತ್ರಮಂದಿರಗಳಲ್ಲಿ ಪ್ರದರ್ಶನಗಳು ಲಭ್ಯವಿರುವುದು ಕಂಡುಬಂದಿದೆ. ಇದರಿಂದಾಗಿ ಸಿನಿಮಾ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ "ಚಿತ್ರ ಬಿಡುಗಡೆಯಾಗಿದೆಯೇ ಅಥವಾ ಇಲ್ಲವೇ?" ಎಂದು ಪ್ರಶ್ನಿಸುತ್ತಿದ್ದಾರೆ. ಕೆಲವು ಸಣ್ಣ ಚಿತ್ರಮಂದಿರಗಳು ಕಾನೂನು ಕಾರಣಗಳಿಂದ ಪ್ರದರ್ಶನವನ್ನು ಸ್ಥಗಿತಗೊಳಿಸಿದ್ದರೆ, ಎಂ2ಕೆ ಸಿನಿಮಾಸ್‌ನಂತಹ (M2K Cinemas) ಕೆಲವು ಸಂಸ್ಥೆಗಳು ಚಿತ್ರ ಬಿಡುಗಡೆಯಾಗಿದೆ ಎಂದು ಪೋಸ್ಟ್ ಮಾಡಿರುವುದು ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ.

'ದಿ ಕೇರಳ ಸ್ಟೋರಿ 2' ಟ್ರೇಲರ್‌ ಇಲ್ಲಿದೆ..

ನ್ಯಾಯಾಲಯದ ಆಕ್ಷೇಪವೇನು?

ಮತಾಂತರದಂತಹ ಸೂಕ್ಷ್ಮ ವಿಷಯಗಳನ್ನು ಆಧರಿಸಿದ ಈ ಚಿತ್ರವು ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಸಾಧ್ಯತೆಯಿದೆ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ (CBFC) ನೀಡಿದ ಅನುಮತಿಯ ಬಗ್ಗೆಯೂ ನ್ಯಾಯಾಲಯ ಪ್ರಶ್ನೆ ಎತ್ತಿದೆ. ಚಿತ್ರದ ವಿಷಯವಸ್ತುವು ಒಂದು ನಿರ್ದಿಷ್ಟ ಸಮುದಾಯವನ್ನು ಅವಹೇಳನಕಾರಿಯಾಗಿ ಬಿಂಬಿಸುವ ಸಾಧ್ಯತೆಯಿದೆ ಎಂದು ಹೇಳಿರುವ ನ್ಯಾಯಾಲಯ, ಉನ್ನತ ಮಟ್ಟದ ಪರಿಶೀಲನೆ ನಡೆಯುವವರೆಗೆ ಚಿತ್ರ ಪ್ರದರ್ಶನ ಮಾಡುವುದು ಸೂಕ್ತವಲ್ಲ ಎಂದು ತಿಳಿಸಿದೆ. ಈ ಆದೇಶದ ಬೆನ್ನಲ್ಲೇ ಚಿತ್ರದ ನಿರ್ಮಾಪಕರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಕಾನೂನು ಹೋರಾಟ ಮುಂದುವರಿದಿದೆ.

ಚಿತ್ರತಂಡ ಮತ್ತು ತಾರಾಗಣ

ಕಾಮಾಕ್ಯ ನಾರಾಯಣ ಸಿಂಗ್ ನಿರ್ದೇಶನದ ಮತ್ತು ವಿಪುಲ್ ಅಮೃತ್ ಲಾಲ್ ಶಾ ನಿರ್ಮಾಣದ ಈ ಚಿತ್ರದಲ್ಲಿ ಉಲ್ಕಾ ಗುಪ್ತಾ, ಅದಿತಿ ಭಾಟಿಯಾ ಮತ್ತು ಐಶ್ವರ್ಯಾ ಓಜಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೊದಲ ಭಾಗದ ಯಶಸ್ಸಿನ ನಂತರ ಈ ಎರಡನೇ ಭಾಗವು ದೇಶಾದ್ಯಂತ ಭಾರಿ ಕುತೂಹಲ ಮೂಡಿಸಿತ್ತು.

ಮುಸ್ಲಿಂ ಜಮಾತ್ ಮತ್ತು ರಾಜಕೀಯ ವಲಯದ ಆಕ್ರೋಶ

ಮತ್ತೊಂದೆಡೆ, ಆಲ್ ಇಂಡಿಯಾ ಮುಸ್ಲಿಂ ಜಮಾತ್ ಸಂಘಟನೆಯು ಚಿತ್ರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸಂಘಟನೆಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಮಾತನಾಡಿ, "ಕೇವಲ ಹಣ ಗಳಿಸುವ ಉದ್ದೇಶದಿಂದ ಇಂತಹ ಸುಳ್ಳು ಕಥೆಗಳನ್ನು ಸಿನೆಮಾ ಮಾಡಲಾಗುತ್ತಿದೆ. ಇದು ಹಿಂದೂ-ಮುಸ್ಲಿಂ ಬಾಂಧವ್ಯವನ್ನು ಹಾಳುಮಾಡುವ ಪಿತೂರಿಯಾಗಿದೆ" ಎಂದು ಕಿಡಿಕಾರಿದ್ದಾರೆ.

ರಾಜಕೀಯವಾಗಿಯೂ ಚಿತ್ರಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇದು ಕೇರಳದ ಘನತೆಗೆ ಧಕ್ಕೆ ತರುವ ಪ್ರಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದ್ದರೆ, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಇದೊಂದು "ದ್ವೇಷ ಹರಡುವ ಸಿನಿಮಾ" ಎಂದು ಟೀಕಿಸಿದ್ದಾರೆ. ಸದ್ಯಕ್ಕೆ ಹೈಕೋರ್ಟ್‌ನ ಮುಂದಿನ ತೀರ್ಪಿನ ಮೇಲೆ ಚಿತ್ರದ ಭವಿಷ್ಯ ಅಡಗಿದೆ.

Read More
Next Story