
ಬಹು ನಿರೀಕ್ಷಿತ ಮತ್ತು ವಿವಾದಿತ 'ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್' ಚಿತ್ರದ ಬಿಡುಗಡೆಗೆ ಕೇರಳ ಹೈಕೋರ್ಟ್ ಗುರುವಾರ ಮಧ್ಯಂತರ ತಡೆ ನೀಡಿದೆ.
'ದಿ ಕೇರಳ ಸ್ಟೋರಿ 2' ಚಿತ್ರಕ್ಕೆ ಕಾನೂನು ಸಂಕಷ್ಟ: ಬಿಡುಗಡೆಗೆ ಕೇರಳ ಹೈಕೋರ್ಟ್ 15 ದಿನಗಳ ತಡೆ
ವಿಪುಲ್ ಅಮೃತ್‌ಲಾಲ್ ಶಾ ನಿರ್ಮಾಣದ ಹಾಗೂ ಕಾಮಾಕ್ಯ ನಾರಾಯಣ್ ಸಿಂಗ್ ನಿರ್ದೇಶನದ ಈ ಚಿತ್ರದ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.
ವಿವಾದಿತ 'ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್' ಚಿತ್ರದ ಬಿಡುಗಡೆಗೆ ಕೇರಳ ಹೈಕೋರ್ಟ್ ಗುರುವಾರ ಮಧ್ಯಂತರ ತಡೆ ನೀಡಿದೆ. ಫೆಬ್ರವರಿ 27ರ ಶುಕ್ರವಾರದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿದ್ದ ಈ ಚಿತ್ರದ ಪ್ರದರ್ಶನವನ್ನು ನ್ಯಾಯಾಲಯದ ಆದೇಶದಂತೆ ಸದ್ಯಕ್ಕೆ 15 ದಿನಗಳ ಕಾಲ ಮುಂದೂಡಲಾಗಿದೆ.
ಚಿತ್ರಕ್ಕೆ ನೀಡಲಾದ ಸೆನ್ಸಾರ್ ಪ್ರಮಾಣಪತ್ರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರ ಪೀಠವು, ಚಿತ್ರದ ಪ್ರಮಾಣೀಕರಣವನ್ನು ಮರುಪರಿಶೀಲಿಸುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (CBFC) ನಿರ್ದೇಶನ ನೀಡಿದೆ. ಸೆನ್ಸಾರ್ ಮಂಡಳಿಯು ಪ್ರಮಾಣಪತ್ರ ನೀಡುವ ಮೊದಲು ಸೂಕ್ತವಾಗಿ ಆಲೋಚಿಸಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವಿಚಾರಣೆ ಸಂದರ್ಭದಲ್ಲಿ ಕೇರಳದ ಚಿತ್ರಣದ ಬಗ್ಗೆ ಕಳವಳ ವ್ಯಕ್ತಪಡಿಸಿದ ಹೈಕೋರ್ಟ್, "ಕೇರಳವು ಸಾಮಾಜಿಕ ಸಾಮರಸ್ಯದಿಂದ ಬದುಕುತ್ತಿರುವ ರಾಜ್ಯವಾಗಿದೆ. ಆದರೆ ಇಡೀ ಕೇರಳದಲ್ಲಿ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ ಎಂಬಂತೆ ನೀವು ಬಿಂಬಿಸಿದ್ದೀರಿ. ಇದು ತಪ್ಪು ಸಂದೇಶ ರವಾನಿಸುವುದಲ್ಲದೆ, ಜನರ ಭಾವನೆಗಳನ್ನು ಕೆರಳಿಸುವ ಸಾಧ್ಯತೆಯೂ ಇದೆ" ಎಂದು ಮೌಖಿಕವಾಗಿ ಹೇಳಿದೆ.
ವಿಪುಲ್ ಅಮೃತ್‌ಲಾಲ್ ಶಾ ನಿರ್ಮಾಣದ ಹಾಗೂ ಕಾಮಾಕ್ಯ ನಾರಾಯಣ್ ಸಿಂಗ್ ನಿರ್ದೇಶನದ ಈ ಚಿತ್ರದ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಚಿತ್ರತಂಡ ನಿರ್ಧರಿಸಿದೆ ಎಂದು ವರದಿಯಾಗಿದೆ. ಅಲ್ಲಿಯವರೆಗೆ ಚಿತ್ರದ ಪ್ರದರ್ಶನ ಮತ್ತು ಹಕ್ಕುಗಳ ಮಾರಾಟಕ್ಕೆ ತಡೆ ಇರಲಿದೆ.
ಮುಸ್ಲಿಂ ಜಮಾತ್ ಆಕ್ರೋಶ:
ಮತ್ತೊಂದೆಡೆ, 'ಆಲ್ ಇಂಡಿಯಾ ಮುಸ್ಲಿಂ ಜಮಾತ್' ಸಂಘಟನೆಯು ಚಿತ್ರದ ವಿರುದ್ಧ ಹರಿಹಾಯ್ದಿದೆ. ಸಂಘಟನೆಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು, "ಕೇವಲ ಹಣ ಗಳಿಸುವ ಉದ್ದೇಶದಿಂದ ಇಂತಹ ಸುಳ್ಳು ಕಥೆಗಳನ್ನು ಸಿನಿಮಾ ಮಾಡಲಾಗುತ್ತಿದೆ. ಇದು ಹಿಂದೂ-ಮುಸ್ಲಿಂ ಬಾಂಧವ್ಯವನ್ನು ಹಾಳುಮಾಡುವ ಪಿತೂರಿಯಾಗಿದೆ" ಎಂದು ಕಿಡಿಕಾರಿದ್ದಾರೆ.
ಸಿನಿಮಾದ ಟೀಸರ್ ಬಿಡುಗಡೆಯಾದಾಗಿನಿಂದಲೂ ಕೇರಳದ ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಚಿತ್ರದ ವಿಷಯವಸ್ತುವನ್ನು ಖಂಡಿಸಿದ್ದಾರೆ. ಇದೊಂದು ದ್ವೇಷ ಹರಡುವ ಸಿನಿಮಾ ಎಂದು ತರೂರ್ ಟೀಕಿಸಿದರೆ, ಕೇರಳದ ಘನತೆಗೆ ಧಕ್ಕೆ ತರುವ ಪ್ರಯತ್ನ ಎಂದು ಸಿಎಂ ವಿಜಯನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

