ದಿ ಕೇರಳ ಸ್ಟೋರಿ 2|ಸಿನಿಮಾ ವೀಕ್ಷಿಸಿದ ನಂತರವಷ್ಟೇ ತೀರ್ಪು  ಎಂದ ಹೈಕೋರ್ಟ್
x

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು, ಚಿತ್ರದ ಕೆಲವು ಸಂಭಾಷಣೆಗಳು ಕೇರಳದ ಬಗ್ಗೆ ತಪ್ಪು ಸಂದೇಶ ನೀಡುವಂತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ದಿ ಕೇರಳ ಸ್ಟೋರಿ 2'|ಸಿನಿಮಾ ವೀಕ್ಷಿಸಿದ ನಂತರವಷ್ಟೇ ತೀರ್ಪು ಎಂದ ಹೈಕೋರ್ಟ್

ಚಿತ್ರದ ಶೀರ್ಷಿಕೆಯಲ್ಲಿ 'ಕೇರಳ' ಎಂಬ ಹೆಸರನ್ನು ಬಳಸಿರುವುದರಿಂದ ಇಲ್ಲಿನ ಜನರ ಆತಂಕವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.


Click the Play button to hear this message in audio format

ವಿವಾದಾತ್ಮಕ ಹಿಂದಿ ಚಲನಚಿತ್ರ 'ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್' ಚಿತ್ರಕ್ಕೆ ನೀಡಲಾದ ಸೆನ್ಸಾರ್ ಪ್ರಮಾಣಪತ್ರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಈ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ತಾನೇ ಖುದ್ದಾಗಿ ಚಿತ್ರವನ್ನು ವೀಕ್ಷಿಸುವುದಾಗಿ ಮಂಗಳವಾರ ತಿಳಿಸಿದೆ. ನಾಳೆ ಚಿತ್ರದ ಪ್ರದರ್ಶನ ಏರ್ಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು, ಚಿತ್ರದ ಕೆಲವು ಸಂಭಾಷಣೆಗಳು ಕೇರಳದ ಬಗ್ಗೆ ತಪ್ಪು ಸಂದೇಶ ನೀಡುವಂತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. "ಕೇರಳವು ಸಂಪೂರ್ಣ ಸಾಮರಸ್ಯದಿಂದ ಬದುಕುತ್ತಿದೆ. ಆದರೆ ಚಿತ್ರದಲ್ಲಿ ಇಡೀ ರಾಜ್ಯದಾದ್ಯಂತ ಅಹಿತಕರ ಘಟನೆಗಳು ನಡೆಯುತ್ತಿವೆ ಎಂಬಂತೆ ಬಿಂಬಿಸಲಾಗಿದೆ. ಇದು ತಪ್ಪು ಸೂಚನೆ ನೀಡುವುದಲ್ಲದೆ, ಭಾವನೆಗಳನ್ನು ಕೆರಳಿಸುವ ಸಾಧ್ಯತೆಯೂ ಇದೆ. ಈ ನಿಟ್ಟಿನಲ್ಲಿ ಸೆನ್ಸಾರ್ ಮಂಡಳಿಯು ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದೆಯೇ?" ಎಂದು ನ್ಯಾಯಾಲಯ ಪ್ರಶ್ನಿಸಿತು.

"ಚಿತ್ರದ ಶೀರ್ಷಿಕೆಯಲ್ಲಿ 'ಕೇರಳ' ಎಂಬ ಹೆಸರನ್ನು ಬಳಸಿರುವುದರಿಂದ ಇಲ್ಲಿನ ಜನರ ಆತಂಕವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ನಾನು ಯಾವುದೇ ಕಲಾತ್ಮಕ ಸೃಷ್ಟಿಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಇದು 'ನೈಜ ಘಟನೆಗಳಿಂದ ಪ್ರೇರಿತ' ಎಂದು ಹೇಳಿಕೊಳ್ಳುತ್ತಿರುವುದರಿಂದ ಮತ್ತು ಶೀರ್ಷಿಕೆಯಲ್ಲಿ ರಾಜ್ಯದ ಹೆಸರು ಇರುವುದರಿಂದ ಕೋಮು ಉದ್ವಿಗ್ನತೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ನಾಳೆ ಸಿನಿಮಾ ನೋಡಿದ ನಂತರವೇ ನಾನು ತೀರ್ಮಾನ ಕೈಗೊಳ್ಳುತ್ತೇನೆ" ಎಂದು ತಿಳಿಸಿದರು.

'ದಿ ಕೇರಳ ಸ್ಟೋರಿ 2' ಟ್ರೇಲರ್‌ ನೋಡಿ

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, "ಚಿತ್ರದ ಶೀರ್ಷಿಕೆಯಲ್ಲಿ ಕೇರಳದ ಹೆಸರಿದ್ದರೂ, ಚಿತ್ರವು ಅಖಿಲ ಭಾರತ ಮಟ್ಟದ ಕಥೆಯನ್ನು ಹೊಂದಿದೆ ಎಂದು ಚಿತ್ರತಂಡವೇ ಈ ಹಿಂದೆ ಹೇಳಿಕೊಂಡಿದೆ. ದೆಹಲಿಯಲ್ಲಿ ನಡೆದ ಸಂತ್ರಸ್ತರ ಸಭೆಯಲ್ಲೂ ಕೇರಳದವರು ಇರಲಿಲ್ಲ. ಹೀಗಿರುವಾಗ ರಾಜ್ಯದ ಹೆಸರನ್ನು ಬಳಸಿ ಕೇರಳವನ್ನು ಕೆಟ್ಟದಾಗಿ ಬಿಂಬಿಸುವುದು ಸರಿಯಲ್ಲ" ಎಂದು ಸುಪ್ರೀಂ ಕೋರ್ಟ್‌ನ ಹಳೆಯ ತೀರ್ಪುಗಳನ್ನು ಉಲ್ಲೇಖಿಸಿದರು.

ಇದೇ ವೇಳೆ, ಚಿತ್ರದ ಟೀಸರ್ ಅನ್ನು ಸೆನ್ಸಾರ್ ಪ್ರಮಾಣಪತ್ರವಿಲ್ಲದೆ ಪ್ರದರ್ಶಿಸಲಾಗಿದೆ ಎಂಬ ದೂರುಗಳ ಬಗ್ಗೆಯೂ ಕೋರ್ಟ್ ಗಮನ ಹರಿಸಿತು. ಚಿತ್ರದ ನಿರ್ಮಾಪಕರು ನ್ಯಾಯಾಲಯದ ಸೂಚನೆಯಂತೆ ಚಿತ್ರದ ಪ್ರದರ್ಶನ ಏರ್ಪಡಿಸುವ ಬಗ್ಗೆ ಮಾಹಿತಿ ನೀಡಲು ಕಾಲಾವಕಾಶ ಕೋರಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮಧ್ಯಾಹ್ನ 2 ಗಂಟೆಗೆ ನಿಗದಿಪಡಿಸಲಾಗಿದೆ.

ಮುಸ್ಲಿಂ ಜಮಾತ್ ಆಕ್ರೋಶ

ಮತ್ತೊಂದೆಡೆ, ಆಲ್ ಇಂಡಿಯಾ ಮುಸ್ಲಿಂ ಜಮಾತ್ ಸಂಘಟನೆಯು ಸಹ ಚಿತ್ರದ ವಿರುದ್ಧ ಹರಿಹಾಯ್ದಿತ್ತು. ಸಂಘಟನೆಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ , ಕೇವಲ ಹಣ ಗಳಿಸುವ ಉದ್ದೇಶದಿಂದ ಇಂತಹ ಸುಳ್ಳು ಕಥೆಗಳನ್ನು ಸಿನೆಮಾ ಮಾಡಲಾಗುತ್ತಿದೆ. ಇದು ಹಿಂದೂ-ಮುಸ್ಲಿಂ ಬಾಂಧವ್ಯವನ್ನು ಹಾಳುಮಾಡುವ ಪಿತೂರಿಯಾಗಿದೆ ಎಂದು ಕಿಡಿಕಾರಿದ್ದರು.

ಸಿನಿಮಾದ ಟೀಸರ್ ಬಿಡುಗಡೆಯಾದಾಗಿನಿಂದಲೂ ಕೇರಳದ ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಚಿತ್ರದ ವಿಷಯವಸ್ತುವನ್ನು ಖಂಡಿಸಿದ್ದಾರೆ. ಇದೊಂದು ದ್ವೇಷ ಹರಡುವ ಸಿನಿಮಾ ಎಂದು ತರೂರ್ ಟೀಕಿಸಿದರೆ, ಕೇರಳದ ಘನತೆಗೆ ಧಕ್ಕೆ ತರುವ ಪ್ರಯತ್ನ ಎಂದು ಸಿಎಂ ವಿಜಯನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮಾಖ್ಯ ನಾರಾಯಣ್ ಸಿಂಗ್ ನಿರ್ದೇಶನದ ಹಾಗೂ ವಿಪುಲ್ ಅಮೃತ್ಲಾಲ್ ಶಾ ನಿರ್ಮಾಣದ ಈ ಚಿತ್ರವು ಫೆಬ್ರವರಿ 27 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಈ ಸೀಕ್ವೆಲ್‌ನಲ್ಲಿ ಅದಿತಿ ಭಾಟಿಯಾ, ಐಶ್ವರ್ಯಾ ಓಜಾ ಮತ್ತು ಉಲ್ಕಾ ಗುಪ್ತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2023 ರಲ್ಲಿ ಬಿಡುಗಡೆಯಾಗಿದ್ದ ಇದರ ಮೊದಲ ಭಾಗ 'ದಿ ಕೇರಳ ಸ್ಟೋರಿ' ಕೂಡ ಭಾರಿ ವಿವಾದ ಸೃಷ್ಟಿಸಿತ್ತಾದರೂ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು.

Read More
Next Story