
ಮಲಯಾಳಂ ನಟ ದಿಲೀಪ್ ಅವರ ಖುಲಾಸೆಯನ್ನು ಪ್ರಶ್ನಿಸಿ ಕೇರಳ ಸರ್ಕಾರ ಈಗ ಹೈಕೋರ್ಟ್ ಮೆಟ್ಟಿಲೇರಿದೆ.
ನಟಿ ಲೈಂಗಿಕ ದೌರ್ಜನ್ಯ ಪ್ರಕರಣ: ನಟ ದಿಲೀಪ್ ಖುಲಾಸೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಕೇರಳ ಸರ್ಕಾರ
ಫೆಬ್ರವರಿ 17, 2017 ರಂದು ನಟಿಯನ್ನು ಚಲಿಸುವ ಕಾರಿನಲ್ಲಿ ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಈ ಕೃತ್ಯದ ಹಿಂದೆ ನಟ ದಿಲೀಪ್ ಅವರ ವೈಯಕ್ತಿಕ ಸೇಡು ಮತ್ತು ಪಿತೂರಿ ಇದೆ ಎಂದು ಪೊಲೀಸರು ಆರೋಪಿಸಿದ್ದರು.
ಖ್ಯಾತ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಲಯಾಳಂ ನಟ ದಿಲೀಪ್ ಕುಮಾರ್ ಅವರ ಖುಲಾಸೆಯನ್ನು ಪ್ರಶ್ನಿಸಿ ಕೇರಳ ಸರ್ಕಾರ ಈಗ ಹೈಕೋರ್ಟ್ ಮೆಟ್ಟಿಲೇರಿದೆ.
2017ರಲ್ಲಿ ನಡೆದ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಶುಕ್ರವಾರ ಮೇಲ್ಮನವಿ ಸಲ್ಲಿಸಲಾಗಿದೆ.
ವಿಚಾರಣಾ ನ್ಯಾಯಾಲಯವು ಎಂಟನೇ ಆರೋಪಿಯಾಗಿದ್ದ ನಟ ದಿಲೀಪ್ ಸೇರಿದಂತೆ ಚಾರ್ಲಿ ಥಾಮಸ್, ಸನಿಲ್ ಕುಮಾರ್ ಮತ್ತು ಶರತ್ ಎಂಬುವವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿತ್ತು. ಆದರೆ, ಈ ಆದೇಶವನ್ನು ಪ್ರಶ್ನಿಸಿರುವ ರಾಜ್ಯ ಸರ್ಕಾರವು, ದಿಲೀಪ್ ವಿರುದ್ಧ ಬಲವಾದ ಡಿಜಿಟಲ್ ಮತ್ತು ಪೂರಕ ಪುರಾವೆಗಳಿದ್ದರೂ ನ್ಯಾಯಾಲಯವು ಅವುಗಳನ್ನು ಪರಿಗಣಿಸಿಲ್ಲ ಎಂದು ವಾದಿಸಿದೆ.
ಅಲ್ಲದೆ, ಈ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾಗಿ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ಸುನಿಲ್ ಮತ್ತು ಮಾರ್ಟಿನ್ ಆಂಟೋನಿ ಸೇರಿದಂತೆ ಆರು ಜನರಿಗೆ ವಿಧಿಸಲಾದ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಬೇಕೆಂದು ಸರ್ಕಾರ ಮನವಿ ಮಾಡಿದೆ. ಈ ದೋಷಿಗಳಿಗೆ ಗರಿಷ್ಠ ಮಟ್ಟದ ಅಂದರೆ ಜೀವಾವಧಿ ಶಿಕ್ಷೆಯನ್ನು ನೀಡಬೇಕು ಎಂಬುದು ಸರ್ಕಾರದ ಆಗ್ರಹವಾಗಿದೆ. ರಾಜ್ಯ ಸರ್ಕಾರದ ಪರ ವಕೀಲರ ಪ್ರಕಾರ, ಈ ಮೇಲ್ಮನವಿಯು ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ.
ಏನಿದು ಘಟನೆ?
2017ರ ಫೆಬ್ರವರಿ 17ರಂದು ಮಲಯಾಳಂ ಮತ್ತು ಕನ್ನಡ ಚಿತ್ರರಂಗದ ಖ್ಯಾತ ನಟಿ ಭಾವನಾ ಅವರು ತ್ರಿಶೂರ್‌ನಿಂದ ಕೊಚ್ಚಿಗೆ ಚಿತ್ರೀಕರಣಕ್ಕಾಗಿ ಪ್ರಯಾಣಿಸುತ್ತಿದ್ದಾಗ, ಅವರದ್ದೇ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪು ಅವರನ್ನು ಅಪಹರಿಸಿತ್ತು. ಚಲಿಸುವ ಕಾರಿನಲ್ಲೇ ಸುಮಾರು ಎರಡು ಗಂಟೆಗಳ ಕಾಲ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಈ ಹೇಯ ಕೃತ್ಯವನ್ನು ಆರೋಪಿಗಳು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ನಂತರ ನಟಿಯನ್ನು ನಿರ್ದೇಶಕ ಲಾಲ್ ಅವರ ಮನೆಯ ಬಳಿ ಬಿಟ್ಟು ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರಂಭದಲ್ಲಿ ನಟಿಯ ಕಾರು ಚಾಲಕ ಮಾರ್ಟಿನ್ ಮತ್ತು 'ಪಲ್ಸರ್ ಸುನಿ' ಎಂಬುವವರನ್ನು ಬಂಧಿಸಲಾಗಿತ್ತು. ತನಿಖೆ ಮುಂದುವರಿದಂತೆ, ಮಲಯಾಳಂ ನಟ ದಿಲೀಪ್ ಅವರನ್ನು ಈ ಕೃತ್ಯದ ಮುಖ್ಯ ಸೂತ್ರಧಾರಿ ಎಂದು ಆರೋಪಿಸಿ ಬಂಧಿಸಲಾಯಿತು. ದಿಲೀಪ್ ಅವರ ವೈಯಕ್ತಿಕ ಜೀವನದ ವಿಚಾರಗಳನ್ನು ನಟಿ ಭಾವನಾ ಅವರು ದಿಲೀಪ್ ಅವರ ಮಾಜಿ ಪತ್ನಿ ಮಂಜು ವಾರಿಯರ್ ಅವರಿಗೆ ತಿಳಿಸಿದ್ದರು ಎಂಬ ಕಾರಣಕ್ಕೆ ಸೇಡು ತೀರಿಸಿಕೊಳ್ಳಲು ಈ ಸಂಚು ರೂಪಿಸಲಾಗಿತ್ತು ಎಂಬುದು ಪೊಲೀಸರ ವಾದವಾಗಿತ್ತು. ಈ ಪ್ರಕರಣದಲ್ಲಿ ದಿಲೀಪ್ ಸುಮಾರು 85 ದಿನಗಳ ಕಾಲ ಜೈಲಿನಲ್ಲಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಸುಮಾರು ಎಂಟು ವರ್ಷಗಳ ಸುದೀರ್ಘ ವಿಚಾರಣೆಯ ನಂತರ, ಎರ್ನಾಕುಲಂನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಪ್ರಮುಖ ಆರೋಪಿ ಪಲ್ಸರ್ ಸುನಿ ಸೇರಿದಂತೆ ಒಟ್ಟು ಆರು ಜನರನ್ನು ದೋಷಿಗಳು ಎಂದು ಘೋಷಿಸಿ ಆದೇಶ ನೀಡಿತ್ತು. ಇವರಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ 50,000 ರೂ. ದಂಡ ವಿಧಿಸಲಾಗಿತ್ತು. ಆದರೆ ಪಿತೂರಿಯ ಆರೋಪ ಎದುರಿಸುತ್ತಿದ್ದ ನಟ ದಿಲೀಪ್ (A8) ಮತ್ತು ಇತರ ಮೂವರನ್ನು (ಚಾರ್ಲಿ ಥಾಮಸ್, ಸನಿಲ್ ಕುಮಾರ್, ಶರತ್) ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯ ಖುಲಾಸೆಗೊಳಿಸಿತ್ತು.

