
K3G 2 ಸಿನಿಮಾ ವದಂತಿಗಳಿಗೆ ಕರಣ್ ಜೋಹರ್ ಬ್ರೇಕ್
ಕಭಿ ಖುಷಿ ಕಭಿ ಗಮ್ ಸೀಕ್ವೆಲ್ ವದಂತಿಗಳಿಗೆ ತೆರೆ ಎಳೆದ ಕರಣ್ ಜೋಹರ್
K3G 2 ಸಿನಿಮಾ ವದಂತಿಗಳಿಗೆ ಕರಣ್ ಜೋಹರ್ ಬ್ರೇಕ್! 'ಕಭಿ ಖುಷಿ ಕಭಿ ಗಮ್' ಸೀಕ್ವೆಲ್ ಮತ್ತು 'ತಖ್ತ್' ಚಿತ್ರದ ಬಗ್ಗೆ ಕರಣ್ ಹೇಳಿದ್ದೇನು? ಪೂರ್ಣ ಮಾಹಿತಿ ಇಲ್ಲಿದೆ.
ಬಾಲಿವುಡ್‌ನ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ತಮ್ಮ ಐಕಾನಿಕ್ ಚಿತ್ರ ‘ಕಭಿ ಖುಷಿ ಕಭಿ ಗಮ್’ (K3G) ಚಿತ್ರದ ಸೀಕ್ವೆಲ್ ಕುರಿತು ಹರಿದಾಡುತ್ತಿದ್ದ ಎಲ್ಲಾ ವದಂತಿಗಳಿಗೆ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಈ ಸೂಪರ್ ಹಿಟ್ ಚಿತ್ರದ ಎರಡನೇ ಭಾಗ ಬರಲಿದೆ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದವು. ಆದರೆ ಈಗ ಕರಣ್ ಜೋಹರ್ ಅವರು ಈ ಬಗ್ಗೆ ಅಧಿಕೃತವಾಗಿ ಮಾತನಾಡಿದ್ದು, ಅಂತಹ ಯಾವುದೇ ಯೋಜನೆ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, ‘ಕಭಿ ಖುಷಿ ಕಭಿ ಗಮ್ 2’ ಮಾಡುವ ಉದ್ದೇಶ ತಮಗಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ, ಅವರ ಬಹುನಿರೀಕ್ಷಿತ ಪಿರಿಯಡ್ ಡ್ರಾಮಾ ಚಿತ್ರ ‘ತಖ್ತ್’ ಕೆಲಸಗಳು ಕೂಡ ಸದ್ಯಕ್ಕೆ ಆರಂಭವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. 2001ರಲ್ಲಿ ಬಿಡುಗಡೆಯಾದ K3G ಚಿತ್ರದಲ್ಲಿ ಶಾರುಖ್ ಖಾನ್, ಕಾಜೋಲ್, ಅಮಿತಾಬ್ ಬಚ್ಚನ್ ಮತ್ತು ಹೃತಿಕ್ ರೋಷನ್ ಅಂತಹ ದಿಗ್ಗಜ ನಟರು ನಟಿಸಿದ್ದರು. ಈ ಚಿತ್ರವು ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ಫ್ಯಾಮಿಲಿ ಸಿನಿಮಾಗಳಲ್ಲಿ ಒಂದಾಗಿ ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ಈ ಚಿತ್ರದ ಅತಿದೊಡ್ಡ ಶಕ್ತಿಯೇ ಅದರ ಮೇಲಿರುವ ‘ನಾಸ್ಟಾಲ್ಜಿಯಾ’. ಜನರು ಈ ಚಿತ್ರದ ಭಾವನೆಗಳೊಂದಿಗೆ ಬೆಳೆದಿದ್ದಾರೆ, ಅದರೊಂದಿಗೆ ನಕ್ಕಿದ್ದಾರೆ ಮತ್ತು ಅತ್ತಿದ್ದಾರೆ. ಇಂತಹ ಚಿತ್ರಕ್ಕೆ ಸೀಕ್ವೆಲ್ ಮಾಡುವುದು ದೊಡ್ಡ ರಿಸ್ಕ್ .ಒಂದು ವೇಳೆ ಎರಡನೇ ಭಾಗ ಮಾಡಿ ಅದರಲ್ಲಿ ಏನಾದರೂ ವ್ಯತ್ಯಾಸವಾದರೆ ಅದು ದೊಡ್ಡ ವಿಪತ್ತಿಗೆ ದಾರಿಯಾಗಬಹುದು, ಆದ್ದರಿಂದ ಹಳೆಯ ಚಿತ್ರದ ನೆನಪುಗಳನ್ನು ಹಾಗೆಯೇ ಉಳಿಸುವುದು ಉತ್ತಮ ಎಂದು ಕರಣ್ ಅವರು ತಿಳಿಸಿದ್ದಾರೆ.
ಇನ್ನು ‘ತಖ್ತ್’ ಚಿತ್ರದ ಬಗ್ಗೆ ಮಾತನಾಡುತ್ತಾ, ಇದು ತಮ್ಮ ವೃತ್ತಿಜೀವನದ ಪ್ರಬಲ ಸ್ಕ್ರಿಪ್ಟ್‌ಗಳಲ್ಲಿ ಒಂದಾಗಿದ್ದು, ಭವಿಷ್ಯದಲ್ಲಿ ಇದನ್ನು ಖಂಡಿತವಾಗಿಯೂ ನಿರ್ಮಿಸುವುದಾಗಿ ಅವರು ಭರವಸೆ ನೀಡಿದ್ದಾರೆ.ಬಹುತಾರಾಗಣದ ಚಿತ್ರವಾದರೂ, ಈ ಯೋಜನೆ ಇನ್ನೂ ಸ್ಥಗಿತಗೊಂಡಿದೆ. `ತಖ್ತ್' ಚಿತ್ರವನ್ನು 2021 ರಲ್ಲಿ ಘೋಷಿಸಲಾಗಿತ್ತು ಮತ್ತು ರಣವೀರ್ ಸಿಂಗ್, ಆಲಿಯಾ ಭಟ್, ಅನಿಲ್ ಕಪೂರ್, ಕರೀನಾ ಕಪೂರ್, ವಿಕ್ಕಿ ಕೌಶಲ್, ಜಾನ್ವಿ ಕಪೂರ್ ಮತ್ತು ಭೂಮಿ ಪೆಡ್ನೇಕರ್ ಅವರಂತಹ ತಾರೆಯರು ನಟಿಸಿದ್ದರು. ಆದರೆ COVID-19 ಕಾರಣದಿಂದಾಗಿ, ಈ ಚಿತ್ರವು ಪ್ರಸ್ತುತ ಸ್ಥಗಿತಗೊಂಡಿತ್ತು.

