
ಕರಣ್ ಜೋಹರ್
ಧುರಂಧರ್ ಚಿತ್ರದ ಮೇಕಿಂಗ್ ನೋಡಿ ಬೆರಗಾದೆ ಎಂದ ಕರಣ್ ಜೋಹರ್
ಧುರಂಧರ್ ಸಿನಿಮಾ 1999ರ ಕಂದಹಾರ್ ವಿಮಾನ ಅಪಹರಣ, 2001ರ ಸಂಸತ್ತಿನ ಮೇಲಿನ ದಾಳಿ ಮತ್ತು 26/11 ಮುಂಬೈ ದಾಳಿಯಂತಹ ಕಹಿ ಘಟನೆಗಳನ್ನು ಆಧರಿಸಿದೆ.
ಖ್ಯಾತ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅವರು ಇತ್ತೀಚೆಗೆ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ 'ಧುರಂಧರ್' ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಚಿತ್ರದ ರಾಜಕೀಯ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದರೂ, ತಮಗಂತೂ ಚಿತ್ರದ ಮೇಕಿಂಗ್ ಮತ್ತು ಕಥೆ ಹೇಳುವ ಶೈಲಿ ಅತೀವವಾಗಿ ಇಷ್ಟವಾಯಿತು ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಯೂತ್ ಆರ್ಗನೈಸೇಶನ್ 'IIMUN' ಆಯೋಜಿಸಿದ್ದ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕರಣ್ ಜೋಹರ್, ಆದಿತ್ಯ ಧರ್ ನಿರ್ದೇಶನದ 'ಧುರಂಧರ್' ಚಿತ್ರವನ್ನು ನಾನು ಯಾವುದೇ ಸಂಕೋಚವಿಲ್ಲದೆ ಸಂಪೂರ್ಣವಾಗಿ ಇಷ್ಟಪಟ್ಟಿದ್ದೇನೆ. ಚಿತ್ರದ ಮೂರು ಗಂಟೆ 34 ನಿಮಿಷಗಳ ಸುದೀರ್ಘ ಅವಧಿಯನ್ನು ಕುತೂಹಲದಿಂದ ವೀಕ್ಷಿಸಿದ್ದೇನೆ. ನಿರ್ದೇಶಕ ಆದಿತ್ಯ ಧರ್ ಚಿತ್ರವನ್ನು ವಿವಿಧ ಅಧ್ಯಾಯಗಳಾಗಿ ವಿಂಗಡಿಸಿರುವ ರೀತಿಯನ್ನು ಅವರು ಹೊಗಳಿದ್ದಾರೆ.
ಚಿತ್ರವು 'ಪಾಕಿಸ್ತಾನ ವಿರೋಧಿ' ಮತ್ತು ಪ್ರಚಾರಾಂದೋಲನದಂತೆ ಇದೆ ಎಂಬ ಟೀಕೆಗಳ ಬಗ್ಗೆ ಉತ್ತರಿಸಿದ ಕರಣ್, ಸಿನಿಮಾ ಅಂದಮೇಲೆ ಅಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಸಹಜ. ನಟ ಹೃತಿಕ್ ರೋಷನ್ ಅವರು ಚಿತ್ರದ ಮೇಕಿಂಗ್ ಇಷ್ಟಪಟ್ಟರೂ ಅದರ ರಾಜಕೀಯ ನಿಲುವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಕರಣ್, ಹೃತಿಕ್ ಅವರ ವೈಯಕ್ತಿಕ ಅಭಿಪ್ರಾಯಕ್ಕೆ ನಾನು ಗೌರವ ನೀಡುತ್ತೇನೆ. ಆದರೆ ನನಗೆ ಚಿತ್ರದ ಯಾವುದೇ ಸೈದ್ಧಾಂತಿಕ ವಿಚಾರಗಳು ಕಿರಿಕಿರಿ ಉಂಟುಮಾಡಿಲ್ಲ. ನಾನು ಒಬ್ಬ ಸಿನಿಮಾ ವಿದ್ಯಾರ್ಥಿಯಾಗಿ ಚಿತ್ರದ ತಾಂತ್ರಿಕತೆ ಮತ್ತು ಕರಕುಶಲತೆಯನ್ನು ಗಮನಿಸಿ ಇಷ್ಟಪಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕಳೆದ ತಿಂಗಳು ನಡೆದ ಮತ್ತೊಂದು ಸಮಾರಂಭದಲ್ಲಿ ಮಾತನಾಡಿದ್ದ ಕರಣ್ ಜೋಹರ್, 'ಧುರಂಧರ್' ಸಿನಿಮಾ ನೋಡಿದ ಮೇಲೆ ಒಬ್ಬ ಚಿತ್ರನಿರ್ದೇಶಕನಾಗಿ ನನ್ನ ಸ್ವಂತ ಸಾಮರ್ಥ್ಯದ ಬಗ್ಗೆ ನಾನೇ ಪ್ರಶ್ನಿಸಿಕೊಳ್ಳುವಂತಾಯಿತು ಎಂದು ಹೇಳಿದ್ದರು. ಚಿತ್ರದ ಹಿನ್ನೆಲೆ ಸಂಗೀತ ಮತ್ತು ಕ್ಯಾಮೆರಾ ಕೆಲಸ ಅದ್ಭುತವಾಗಿದ್ದು, ಆದಿತ್ಯ ಧರ್ ಒಬ್ಬ ವಿಶಿಷ್ಟ ಧ್ವನಿಯಾಗಿ ಹೊರಹೊಮ್ಮಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಆದಿತ್ಯ ಧರ್ ಮತ್ತು ಲೋಕೇಶ್ ಧರ್ ನಿರ್ಮಾಣದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್, ಆರ್. ಮಾಧವನ್ ಮತ್ತು ರಾಕೇಶ್ ಬೇಡಿ ಅವರಂತಹ ತಾರಾಗಣವಿದೆ. ಈಗಾಗಲೇ ವಿಶ್ವಾದ್ಯಂತ 1300 ಕೋಟಿ ರೂಪಾಯಿಗಳಿಗೂ ಅಧಿಕ ಹಣ ಗಳಿಸಿರುವ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಐತಿಹಾಸಿಕ ಯಶಸ್ಸು ಸಾಧಿಸಿದೆ.

