ಜೂನಿಯರ್ ಎನ್‌ಟಿಆರ್ ಆಗಮನ ವೇಳೆ ಕಿಮ್ಸ್ ಆಸ್ಪತ್ರೆಯ ಎಸ್ಕಲೇಟರ್ ಧ್ವಂಸ; ಅಭಿಮಾನಿಗಳ ಹುಚ್ಚಾಟಕ್ಕೆ ಆಕ್ರೋಶ
x

ಟಾಲಿವುಡ್ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ ಅವರ ಬೆಂಗಳೂರು ಭೇಟಿ ಭಾನುವಾರ ಭಾರೀ ಹೈಡ್ರಾಮಕ್ಕೆ ಸಾಕ್ಷಿಯಾಯಿತು.

ಜೂನಿಯರ್ ಎನ್‌ಟಿಆರ್ ಆಗಮನ ವೇಳೆ ಕಿಮ್ಸ್ ಆಸ್ಪತ್ರೆಯ ಎಸ್ಕಲೇಟರ್ ಧ್ವಂಸ; ಅಭಿಮಾನಿಗಳ ಹುಚ್ಚಾಟಕ್ಕೆ ಆಕ್ರೋಶ

ಬೆಂಗಳೂರಿನ ಮಹದೇವಪುರದಲ್ಲಿ ಭಾನುವಾರ ನಡೆದ ಕಿಮ್ಸ್ ಆಸ್ಪತ್ರೆಯ ನೂತನ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ನಟ ಜೂನಿಯರ್ ಎನ್‌ಟಿಆರ್ ಭಾಗವಹಿಸಿದ್ದರು.


Click the Play button to hear this message in audio format

ಟಾಲಿವುಡ್‌ನ ಖ್ಯಾತ ನಟ ಜೂನಿಯರ್ ಎನ್‌ಟಿಆರ್ ಅವರ ಬೆಂಗಳೂರು ಭೇಟಿ ವೇಳೆ ಭಾರೀ ಹೈಡ್ರಾಮಾ ನಡೆದಿದೆ. ಬೆಂಗಳೂರಿನ ಮಹದೇವಪುರದ ಕಿಮ್ಸ್ ಆಸ್ಪತ್ರೆಯ ನೂತನ ಘಟಕದ ಉದ್ಘಾಟನಾ ಸಮಾರಂಭಕ್ಕೆ ಬಂದ ನಟನನ್ನು ನೋಡಲು ಬಂದ ಅಭಿಮಾನಿಗಳು ಅಸ್ಪತ್ರೆ ಒಳನುಗ್ಗಿ ದಾಂಧಲೆ ನಡೆಸಿರುವ ಘಟನೆ ನಡೆದಿದೆ. ಇದರಿಂದಾಗಿ ಆಸ್ಪತ್ರೆ ಆವರಣ ರಣರಂಗದಂತೆ ಮಾರ್ಪಪಟ್ಟಿತ್ತು.

ಆಸ್ಪತ್ರೆಯ ಲಾಬಿಯೊಳಗೆ ನುಗ್ಗಿದ ಜನಸಾಗರ ಅಲ್ಲಿನ ರಿಸೆಪ್ಷನ್ ಕೌಂಟರ್ ಹಾಗೂ ಎಸ್ಕಲೇಟರ್‌ಗಳನ್ನು ಧ್ವಂಸಗೊಳಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ರೋಗಿಗಳು ಚಿಕಿತ್ಸೆ ಪಡೆಯುವ, ನೆಮ್ಮದಿಯನ್ನು ಬಯಸುವ ಸೂಕ್ಷ್ಮ ಪ್ರದೇಶದಲ್ಲಿ ಅಭಿಮಾನ ಎಂಬ ಹೆಸರಿನಲ್ಲಿ ಇಂತಹ ಪುಂಡಾಟಿಕೆ ನಡೆಸಲು ಹೇಗೆ ಸಾಧ್ಯ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಆಸ್ಪತ್ರೆಯಂತಹ ಜಾಗದಲ್ಲಿ ಸೆಲೆಬ್ರಿಟಿಗಳನ್ನು ಕರೆಸಿ ಇಷ್ಟೊಂದು ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸುವ ಅಗತ್ಯವಿತ್ತೇ ಎಂಬ ಬಗ್ಗೆ ಆಯೋಜಕರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಮಹದೇವಪುರದಲ್ಲಿರುವ ಕಿಮ್ಸ್ ಆಸ್ಪತ್ರೆಯ ನೂತನ ಘಟಕದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ನಟನನ್ನು ನೋಡಲು ಸಾವಿರಾರು ಅಭಿಮಾನಿಗಳು ಏಕಾಏಕಿ ನುಗ್ಗಿದ್ದರಿಂದ ಪರಿಸ್ಥಿತಿ ಕೈಮೀರಿ ಹೋಗಿದ್ದು, ನೂಕುನುಗ್ಗಲಿನಲ್ಲಿ ಆಸ್ಪತ್ರೆಯ ಎಸ್ಕಲೇಟರ್ ಜಖಂಗೊಂಡಿದೆ.

ಭಾನುವಾರ ನಡೆದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜೂನಿಯರ್ ಎನ್‌ಟಿಆರ್ ಆಗಮಿಸುತ್ತಿದ್ದಂತೆಯೇ ಅಭಿಮಾನಿಗಳ ಸಾಗರವೇ ಹರಿದುಬಂದಿತ್ತು. ಆಸ್ಪತ್ರೆಯ ಒಳಗೆ ಮತ್ತು ಹೊರಗೆ ನೆರೆದಿದ್ದ ನೂರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದರು.

ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಅಭಿಮಾನಿಗಳು ಆಸ್ಪತ್ರೆಯ ಒಳಗೆ ನುಗ್ಗಿದ್ದರಿಂದ ಆಸ್ಪತ್ರೆಯ ಆವರಣವೇ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತ್ತು. ಅತಿಯಾದ ಜನದಟ್ಟಣೆಯಿಂದಾಗಿ ಆಸ್ಪತ್ರೆಯಲ್ಲಿದ್ದ ಎಸ್ಕಲೇಟರ್ ಮೇಲೆ ಹೆಚ್ಚಿನ ಒತ್ತಡ ಬಿದ್ದು ಅದು ಕೆಟ್ಟು ನಿಂತಿದ್ದಲ್ಲದೆ, ಮೇಲ್ನೋಟಕ್ಕೆ ಹಾನಿಗೊಳಗಾಗಿದೆ ಎಂದು ತಿಳಿದುಬಂದಿದೆ.

ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟ ಪೊಲೀಸರು, ಅಂತಿಮವಾಗಿ ಗುಂಪನ್ನು ಚದುರಿಸಲು ಸೌಮ್ಯ ಲಾಠಿ ಪ್ರಹಾರ ನಡೆಸಬೇಕಾಯಿತು. ರೋಗಿಗಳು ಮತ್ತು ಆಸ್ಪತ್ರೆಗೆ ಬಂದಿದ್ದ ಸಾರ್ವಜನಿಕರಿಗೆ ಈ ಗದ್ದಲದಿಂದಾಗಿ ತೀವ್ರ ತೊಂದರೆಯುಂಟಾಯಿತು. ಆದರೂ ನಟ ಎನ್‌ಟಿಆರ್ ಮಾತ್ರ ಶಾಂತಚಿತ್ತರಾಗಿ ಅಭಿಮಾನಿಗಳತ್ತ ಕೈಬೀಸಿ ವಂದಿಸಿ, ನಂತರ ಬಿಗಿ ಭದ್ರತೆಯ ನಡುವೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು.

ಈ ವೇಳೆ ಅವರು ಕನ್ನಡದಲ್ಲೇ ಮಾತನಾಡಿದ್ದು ಅಭಿಮಾನಿಗಳ ಮನಗೆದ್ದಿತು. ಸದ್ಯ ಈ ನೂಕುನುಗ್ಗಲಿನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆ ಮತ್ತು ಭದ್ರತಾ ವ್ಯವಸ್ಥೆಯ ಬಗ್ಗೆ ಚರ್ಚೆಗಳು ಶುರುವಾಗಿವೆ.

ಟಾಲಿವುಡ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಆಸ್ಪತ್ರೆಯೊಂದಿಗೆ ಅವರಿಗೆ ಮತ್ತು ಅವರ ಕುಟುಂಬಕ್ಕೆ ದಶಕಗಳ ಕಾಲದ ಭಾವನಾತ್ಮಕ ಸಂಬಂಧವಿದೆ. 1983ರಲ್ಲಿ ಅವರ ತಾತ, ದಿಗ್ಗಜ ನಟ ಎನ್.ಟಿ. ರಾಮರಾವ್ ಅವರು ಈ ಆಸ್ಪತ್ರೆಗೆ ಅಡಿಗಲ್ಲು ಹಾಕಿದ್ದರು. ವಿಶೇಷವೆಂದರೆ, 2009ರಲ್ಲಿ ಜೂನಿಯರ್ ಎನ್‌ಟಿಆರ್ ಅವರು ಭೀಕರ ರಸ್ತೆ ಅಪಘಾತಕ್ಕೀಡಾದಾಗ ಇದೇ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಈ ಎಲ್ಲ ಕಾರಣಗಳಿಂದಾಗಿ ಅವರು ಅತ್ಯಂತ ಪ್ರೀತಿಯಿಂದ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಕಾರ್ಯಕ್ರಮದ ವೇಳೆ ಜೂನಿಯರ್ ಎನ್‌ಟಿಆರ್ ಮಾತನಾಡಲು ಮುಂದಾದಾಗ, ನೆರೆದಿದ್ದ ಅಭಿಮಾನಿಗಳ ಸಾಗರ ಅವರ ಹೆಸರನ್ನು ಜೋರಾಗಿ ಕೂಗುತ್ತಾ ಸಂಭ್ರಮಿಸಲು ಶುರುಮಾಡಿತು. ಇದರಿಂದ ಅವರ ಭಾಷಣಕ್ಕೆ ಪದೇ ಪದೇ ಅಡ್ಡಿಯುಂಟಾಯಿತು. ಕೊನೆಗೆ ಅಭಿಮಾನಿಗಳು ಸುಮ್ಮನಾಗದಿದ್ದಾಗ, ತಾರಕ್ ಅವರು ʻಸುಮ್ಮನಿರಿʼ ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದರು. ಅವರ ಈ ಗಂಭೀರ ಧ್ವನಿಗೆ ಮಣಿದ ಅಭಿಮಾನಿಗಳು ತಕ್ಷಣವೇ ಶಾಂತರಾಗಿ ಅವರ ಮಾತನ್ನು ಕೇಳಿಸಿಕೊಂಡರು. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಅಂದು ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಗಿದ್ದರಿಂದ, ಜೂನಿಯರ್ ಎನ್‌ಟಿಆರ್ ಮಹಿಳೆಯರ ಗೌರವದ ಬಗ್ಗೆ ಅತ್ಯಂತ ಅರ್ಥಪೂರ್ಣವಾಗಿ ಮಾತನಾಡಿದರು. ಮಹಿಳೆಯರನ್ನು ಹೇಗೆ ಗೌರವಿಸಬೇಕು ಎಂದು ಪದೇ ಪದೇ ಹೇಳಿಕೊಡುವ ಅಗತ್ಯವಿಲ್ಲ, ಅದು ಪ್ರತಿಯೊಬ್ಬ ಪುರುಷನಲ್ಲೂ ಸಂಸ್ಕಾರವಾಗಿ ಹುಟ್ಟಬೇಕು ಎಂದರು. ಅಲ್ಲದೆ ತಮ್ಮ ಮಕ್ಕಳಿಗೂ ಇದೇ ಸಂಸ್ಕೃತಿಯನ್ನು ಕಲಿಸುವುದಾಗಿ ತಿಳಿಸಿದ ಅವರು, ಮಹಿಳೆಯರ ಸುರಕ್ಷತೆ ಮತ್ತು ಗೌರವದ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಕಾರ್ಯಕ್ರಮದ ಕೊನೆಯಲ್ಲಿ ಅಭಿಮಾನಿಗಳು ಸುರಕ್ಷಿತವಾಗಿ ಮನೆಗೆ ತಲುಪಬೇಕು ಎಂದು ಮನವಿ ಮಾಡಿದರು.

Read More
Next Story