ವಿಚ್ಛೇದನ ಸಿಗುವವರೆಗೂ ನಾನು ಸಿನಿಮಾಗಳಲ್ಲಿ ನಟಿಸಲ್ಲ: ಕಣ್ಣೀರಿಟ್ಟ ಜಯಂ ರವಿ
x

ವಿಚ್ಛೇದನ ಸಿಗುವವರೆಗೂ ಹೊಸ ಸಿನಿಮಾಗಳಲ್ಲಿ ನಟಿಸಲ್ಲ ಎಂದು ನಟ ಜಯಂ ರವಿ ಭಾವುಕರಾಗಿ ಪ್ರಕಟಿಸಿದ್ದಾರೆ.

ವಿಚ್ಛೇದನ ಸಿಗುವವರೆಗೂ ನಾನು ಸಿನಿಮಾಗಳಲ್ಲಿ ನಟಿಸಲ್ಲ: ಕಣ್ಣೀರಿಟ್ಟ ಜಯಂ ರವಿ

ವಿಚ್ಛೇದನ ಸಿಗುವವರೆಗೂ ಹೊಸ ಸಿನಿಮಾಗಳಲ್ಲಿ ನಟಿಸಲ್ಲ ಎಂದು ನಟ ಜಯಂ ರವಿ ಭಾವುಕರಾಗಿ ಪ್ರಕಟಿಸಿದ್ದಾರೆ. ಟ್ರೋಲಿಂಗ್ ಹಾಗೂ ವೈಯಕ್ತಿಕ ನೋವಿನ ಕುರಿತು ಅವರು ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟಿದ್ದಾರೆ.


Click the Play button to hear this message in audio format

ತಮಗೆ ಅಧಿಕೃತವಾಗಿ ವಿಚ್ಛೇದನ ಸಿಗುವವರೆಗೂ ಯಾವುದೇ ಹೊಸ ಸಿನಿಮಾಗಳಲ್ಲಿ ನಟಿಸುವುದಿಲ್ಲ ಮತ್ತು ಅಲ್ಲಿಯವರೆಗೆ ತಮ್ಮ ನಟನೆಯ ಯಾವುದೇ ಚಿತ್ರಗಳೂ ಕೂಡ ಬಿಡುಗಡೆಯಾಗುವುದಿಲ್ಲ ಎಂದು ಕಾಲಿವುಡ್‌ ನಟ ಜಯಂ ರವಿ ಸ್ಪಷ್ಟಪಡಿಸಿದ್ದಾರೆ.

ತಮ್ಮ ವೈಯಕ್ತಿಕ ಜೀವನದ ಏರುಪೇರುಗಳು ಹಾಗೂ ಇತ್ತೀಚಿನ ವಿವಾದಗಳ ಕುರಿತು ತುರ್ತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ನಿರ್ಧಾರವನ್ನು ಪ್ರಕಟಿಸುವಾಗ ತೀವ್ರ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಸುದೀರ್ಘ ಕಾಲದಿಂದ ತಾಳ್ಮೆಯಿಂದಿದ್ದ ತಮಗೆ ಈಗ ಸತ್ಯವನ್ನು ಮಾತನಾಡಬೇಕಾದ ಸಮಯ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ತಮಗೆ ಆಗಿರುವ ಅಪಮಾನಗಳನ್ನು ಇನ್ನು ಮುಂದೆ ಭರಿಸಲು ಸಾಧ್ಯವಿಲ್ಲ ಎಂದಿರುವ ಜಯಂ ರವಿ, ತಮ್ಮನ್ನು ಮಾನಸಿಕವಾಗಿ ಇಬ್ಬಂದಿಗೆ ಸಿಲುಕಿಸಲು ಯತ್ನಿಸುತ್ತಿರುವವರು ಅದನ್ನು ನಿಲ್ಲಿಸುವವರೆಗೂ ತಾವು ಕ್ಯಾಮೆರಾ ಮುಂದೆ ಬರುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ತಾವೇನೂ ತಪ್ಪು ಮಾಡಿಲ್ಲದಿದ್ದರೂ ತಮ್ಮ ವಿರುದ್ಧ ನಡೆಯುತ್ತಿರುವ ಸೋಶಿಯಲ್ ಮೀಡಿಯಾ ಟ್ರೋಲಿಂಗ್ ಬೆನ್ನತ್ತಿ ಕಾಡುತ್ತಿದ್ದು, ಅದು ತಮಗೆ ತೀವ್ರ ನೋವುಂಟು ಮಾಡಿದೆ ಎಂದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಶೇಕಡಾ 95 ರಷ್ಟು ಸಿನಿಮಾಗಳು ಸೂಪರ್ ಹಿಟ್ ಆಗಿದ್ದು, ಅತ್ಯಂತ ಕಠಿಣ ಪರಿಶ್ರಮದಿಂದ ಈ ಮಟ್ಟಕ್ಕೆ ಬೆಳೆದಿರುವುದಾಗಿ ನೆನಪಿಸಿಕೊಂಡಿರುವ ಅವರು, ಮಹಿಳಾ ಹಕ್ಕುಗಳಿಗಾಗಿ ಸದಾ ಧ್ವನಿ ಎತ್ತಿರುವ ತಮ್ಮ ಮೇಲೆಯೇ ಈಗ ಇಲ್ಲಸಲ್ಲದ ಆರೋಪಗಳನ್ನು ಹೊರಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ತಮ್ಮ ಮಕ್ಕಳ ಕುರಿತು ಮಾತನಾಡುತ್ತಾ, ಮಕ್ಕಳ ಭವಿಷ್ಯಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಓದಿಸುತ್ತಿದ್ದರೂ, ತಮ್ಮಲ್ಲಿ ಮಕ್ಕಳ ಬಗ್ಗೆ ಪ್ರೀತಿಯೇ ಇಲ್ಲ ಎನ್ನುವಂತೆ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೇವಲ ಅನಗತ್ಯ ಟ್ರೋಲಿಂಗ್ ಮತ್ತು ಕಿರುಕುಳದ ಕಾರಣದಿಂದಾಗಿ ತಾವು ತಮ್ಮ ಆಪ್ತ ಸ್ನೇಹಿತೆ ಕೆನಿಷಾ ಅವರನ್ನು ಕಳೆದುಕೊಳ್ಳಬೇಕಾಯಿತು ಎಂದು ಜಯಂ ರವಿ ಅಳಲು ತೋಡಿಕೊಂಡಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಎಲ್ಲಾ ಅಡೆತಡೆಗಳು ನಿವಾರಣೆಯಾದ ನಂತರ ಖಂಡಿತವಾಗಿಯೂ ಮತ್ತೆ ಬಣ್ಣದ ಲೋಕಕ್ಕೆ ಮರಳುವುದಾಗಿ ಹೇಳಿರುವ ಅವರು, ಅದಕ್ಕೆ ಎಷ್ಟು ಸಮಯ ಬೇಕಾಗಬಹುದು ಎಂದು ತಿಳಿದಿಲ್ಲವಾದರೂ ಮುಂದಿನ ದಿನಗಳಲ್ಲಿ ಎಲ್ಲವೂ ಒಳ್ಳೆಯದೇ ಆಗಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

Read More
Next Story