
Jailer-2 | ಶಾರುಖ್ ಖಾನ್ ಬದಲು ರಜನಿಕಾಂತ್ ಜೊತೆ ಪವರ್ ಸ್ಟಾರ್ ಎಂಟ್ರಿ?
ಈ ಮೊದಲು 'ಜೈಲರ್ 2'ನಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರು ಪೊಲೀಸ್ ಅಧಿಕಾರಿಯೊಬ್ಬರ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು.
ಕಾಲಿವುಡ್ ಅಂಗಳದಲ್ಲಿ ಈಗ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್ 2' ಚಿತ್ರ ಸದ್ದು ಮಾಡುತ್ತಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಮೆಗಾ ಪ್ರಾಜೆಕ್ಟ್‌ನಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ನಟರು ಒಂದಾಗುತ್ತಿದ್ದಾರೆ. ಈ ನಡುವೆ ಚಿತ್ರಕ್ಕೆ ಸಂಬಂಧಿಸಿದಂತೆ ಅತ್ಯಂತ ದೊಡ್ಡ ಅಪ್‌ಡೇಟ್ ಹೊರಬಿದ್ದಿದ್ದು, ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಈ ಮೊದಲು 'ಜೈಲರ್ 2'ನಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರು ಪೊಲೀಸ್ ಅಧಿಕಾರಿಯೊಬ್ಬರ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಮೂಲಗಳ ಪ್ರಕಾರ ಶಾರುಖ್ ಅವರು ತಮ್ಮ ಮುಂಬರುವ ಚಿತ್ರ 'ಕಿಂಗ್' ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವುದರಿಂದ ಮತ್ತು ಸಮಯದ ಅಭಾವದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
ಪವರ್ ಸ್ಟಾರ್ ಪವನ್ ಕಲ್ಯಾಣ್ ಎಂಟ್ರಿ
ಶಾರುಖ್ ಖಾನ್ ಅಭಿನಯಿಸಬೇಕಿದ್ದ ಪ್ರಮುಖ ಪೊಲೀಸ್ ಪಾತ್ರಕ್ಕೆ ಈಗ ಆಂಧ್ರ ಪ್ರದೇಶದ ಡಿಸಿಎಂ ಆಗಿರುವ ಪವನ್ ಕಲ್ಯಾಣ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಒಂದು ವೇಳೆ ಇದು ನಿಜವಾದಲ್ಲಿ, ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರನ್ನು ಒಂದೇ ಪರದೆಯ ಮೇಲೆ ಅಭಿಮಾನಿಗಳು ನೋಡಲಿದ್ದಾರೆ.
ಎರಡನೇ ಭಾಗದಲ್ಲೂ ಶಿವರಾಜ್‌ಕುಮಾರ್ ಹವಾ
ಸನ್ ಪಿಕ್ಚರ್ಸ್ ನಿರ್ಮಿಸುತ್ತಿರುವ ಈ ಚಿತ್ರವು ಮೊದಲ ಭಾಗದಂತೆಯೇ ಮಲ್ಟಿಸ್ಟಾರರ್ ಸಿನಿಮಾ ಎನಿಸಿಕೊಂಡಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೊದಲ ಭಾಗದಂತೆಯೇ ಎರಡನೇ ಭಾಗದಲ್ಲೂ ಮಾಸ್ ಎಂಟ್ರಿ ಕೊಡಲಿದ್ದು, ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ಪ್ರಮುಖ ಪಾತ್ರದಲ್ಲಿ ಮುಂದುವರಿಯಲಿದ್ದಾರೆ. ಚಿತ್ರಕ್ಕೆ ಹೊಸ ಸೇರ್ಪಡೆಯಾಗಿ ವಿದ್ಯಾ ಬಾಲನ್ ಬಣ್ಣ ಹಚ್ಚಲಿದ್ದಾರೆ. ಮಿಥುನ್ ಚಕ್ರವರ್ತಿ ಮತ್ತು ವಿಜಯ್ ಸೇತುಪತಿ ಅಭಿನಯಿಸುತ್ತಿರುವುದು ಚಿತ್ರದ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಲಿದೆ.
ಯುವ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರು ಈ ಚಿತ್ರಕ್ಕೂ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದು, ಈಗಾಗಲೇ ಚಿತ್ರದ ಬಹುಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಈ ವರ್ಷದ ಅಂತ್ಯದ ವೇಳೆಗೆ 'ಜೈಲರ್ 2' ಜಗತ್ತಿನಾದ್ಯಂತ ಅದ್ಧೂರಿಯಾಗಿ ತೆರೆಗೆ ಬರುವ ಸಾಧ್ಯತೆಯಿದೆ.

