ಸೂರ್ಯ ಜೊತೆ ಬಿಗ್ ಪ್ಯಾನ್ ಇಂಡಿಯಾ ಮೂವಿ ಅನೌನ್ಸ್ ಮಾಡಿದ ಹೊಂಬಾಳೆ ಫಿಲ್ಮ್ಸ್
x

ಕಾಲಿವುಡ್ ಸಿಂಗಂ ಸೂರ್ಯ ಜೊತೆ ಕೈಜೋಡಿಸಿದ ದೈತ್ಯ ಸಂಸ್ಥೆ ಹೊಂಬಾಳೆ ಫಿಲ್ಮ್ಸ್

ಸೂರ್ಯ ಜೊತೆ ಬಿಗ್ ಪ್ಯಾನ್ ಇಂಡಿಯಾ ಮೂವಿ ಅನೌನ್ಸ್ ಮಾಡಿದ ಹೊಂಬಾಳೆ ಫಿಲ್ಮ್ಸ್

ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ನಟ ಸೂರ್ಯ ಹಾಗೂ ನಿರ್ದೇಶಕ ಟಿ.ಜೆ. ಜ್ಞಾನವೇಲ್ ಕಾಂಬಿನೇಷನ್‌ನಲ್ಲಿ ಅತ್ಯಂತ ಅದ್ಧೂರಿ ಮಟ್ಟದ ಹೊಸ ಪ್ಯಾನ್ ಇಂಡಿಯಾ ಸಾಮಾಜಿಕ ಕಮರ್ಷಿಯಲ್ ಚಿತ್ರವನ್ನು ಘೋಷಿಸಿದೆ.


Click the Play button to hear this message in audio format

ಭಾರತೀಯ ಚಿತ್ರರಂಗದಲ್ಲಿ ಸದಾ ಸದ್ದು ಮಾಡುವ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಈಗ ಕಾಲಿವುಡ್ ಸ್ಟಾರ್ ನಟ ಸೂರ್ಯ ಅವರೊಂದಿಗೆ ಕೈಜೋಡಿಸುವ ಮೂಲಕ ಚಿತ್ರಪ್ರೇಮಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಈ ಹಿಂದೆ ಭಾರತದಾದ್ಯಂತ ಭಾರಿ ಸಂಚಲನ ಮೂಡಿಸಿದ್ದ, ವಿಮರ್ಶಕರಿಂದ ಅಪಾರ ಪ್ರಶಂಸೆ ಗಳಿಸಿದ್ದ 'ಜೈ ಭೀಮ್' ಕಾನೂನು ಹೋರಾಟದ ಸಾಮಾಜಿಕ ಚಿತ್ರದ ನಂತರ, ನಟ ಸೂರ್ಯ ಮತ್ತು ನಿರ್ದೇಶಕ ಟಿ.ಜೆ. ಜ್ಞಾನವೇಲ್ ಮತ್ತೊಮ್ಮೆ ಒಂದಾಗುತ್ತಿದ್ದಾರೆ.

ಈ ಹೈ-ವೋಲ್ಟೇಜ್ ಕಾಂಬಿನೇಷನ್‌ಗೆ ಕೆಜಿಎಫ್, ಕಾಂತಾರ ಮತ್ತು ಸಲಾರ್ ಅಂತಹ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿರುವುದು ಸಿನಿಮಾ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಇತ್ತೀಚೆಗಷ್ಟೇ 'ಕರುಪ್ಪು' ಸಿನಿಮಾದ ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಸೂರ್ಯ ಅವರಿಗೆ ಈ ಹೊಸ ಪ್ರಾಜೆಕ್ಟ್ ಮತ್ತೊಂದು ಮೈಲಿಗಲ್ಲಾಗುವ ಮುನ್ಸೂಚನೆ ನೀಡಿದೆ.

ಈ ಮಹತ್ವದ ಜಂಟಿ ಚಿತ್ರದ ಕುರಿತು ಮಾತನಾಡಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥಾಪಕ ವಿಜಯ್ ಕಿರಗಂದೂರು ಅವರು, ಸಿನಿಮಾ ಮೇಲಿನ ಅಪಾರ ಕಾಳಜಿ ಮತ್ತು ಒಂದೇ ರೀತಿಯ ದೂರದೃಷ್ಟಿ ಹೊಂದಿರುವ ಪ್ರತಿಭಾವಂತರು ಒಂದಾದಾಗ ಪ್ರಭಾವಶಾಲಿ ಚಿತ್ರಗಳು ಮೂಡಿಬರಲು ಸಾಧ್ಯ ಎಂದು ತಾವು ಬಲವಾಗಿ ನಂಬಿರುವುದಾಗಿ ತಿಳಿಸಿದ್ದಾರೆ. ನಟ ಸೂರ್ಯ ಮತ್ತು ನಿರ್ದೇಶಕ ಟಿ.ಜೆ. ಜ್ಞಾನವೇಲ್ ಅವರೊಂದಿಗೆ ಕೆಲಸ ಮಾಡುತ್ತಿರುವುದು ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪುವ ಅತ್ಯಂತ ಪ್ರಾಮಾಣಿಕ ಹಾಗೂ ಅರ್ಥಪೂರ್ಣ ಕಥೆಯನ್ನು ಹೇಳುವ ನಿಟ್ಟಿನಲ್ಲಿ ಇಟ್ಟಿರುವ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಚಿತ್ರತಂಡವು ನಟ ಸೂರ್ಯ ಅವರ ಮೂರು ದಶಕಗಳ ಅದ್ಭುತ ಸಿನಿಮಾ ಜರ್ನಿಯನ್ನು ಕೊಂಡಾಡಿದ್ದು, ಸೂರ್ಯ ಅವರು ಪ್ರತಿ ಫ್ರೇಮ್, ಪ್ರತಿ ಸಿನಿಮಾ ಹಾಗೂ ಪ್ರತಿ ಫೈಟ್ ಮೂಲಕ ತಮ್ಮದೇ ಸಾಮ್ರಾಜ್ಯ ಕಟ್ಟಿದ್ದಾರೆ ಎಂದು ಶ್ಲಾಘಿಸಿದೆ. ಸಮಾಜದ ನೈಜ ಬದುಕಿನ ಭಾರವನ್ನು ಹೊತ್ತ ಪಾತ್ರಗಳಿಗೆ ಅವರು ಜೀವ ತುಂಬಿದ್ದಾರೆ. ಅವರ ಈ ಧೈರ್ಯ, ಬದ್ಧತೆ ಮತ್ತು ಕಲಾ ನೈಪುಣ್ಯತೆಯೇ ಇಂದಿನ ತಲೆಮಾರಿನ ಅತ್ಯಂತ ನಿರ್ಭೀತ ನಟನನ್ನಾಗಿ ಮಾಡಿದೆ. ಈಗ ಅವರು ತಮ್ಮ ವೃತ್ತಿಜೀವನದ ಅತಿ ದೊಡ್ಡ ವೇದಿಕೆಗೆ ಹೆಜ್ಜೆ ಇಡುತ್ತಿದ್ದಾರೆ ಎಂದು ಹೊಂಬಾಳೆ ಫಿಲ್ಮ್ಸ್ ಮುಕ್ತಕಂಠದಿಂದ ಶ್ಲಾಘಿಸಿದೆ.

ಚಿತ್ರದ ಕಥಾಹಂದರವನ್ನು ಸದ್ಯಕ್ಕೆ ರಹಸ್ಯವಾಗಿಡಲಾಗಿದ್ದರೂ, ಇದು ಸಮಾಜದ ನೈಜ ಘಟನೆಗಳ ಹಿನ್ನೆಲೆಯುಳ್ಳ ಅತ್ಯಂತ ತೀವ್ರವಾದ ಕಮರ್ಷಿಯಲ್ ಡ್ರಾಮಾ ಆಗಿರಲಿದ್ದು, ಪ್ರೇಕ್ಷಕರಿಗೆ ಕಮರ್ಷಿಯಲ್ ಅಂಶಗಳ ಜೊತೆಗೆ ಗಟ್ಟಿಯಾದ ಸಂದೇಶ ನೀಡುವ ಸಿನಿಮಾ ಆಗಿರಲಿದೆ ಎಂದು ತಿಳಿದುಬಂದಿದೆ. ಈ ಬಹುಭಾಷಾ ಪ್ಯಾನ್ ಇಂಡಿಯಾ ಚಿತ್ರಕ್ಕೆ ಇತ್ತೀಚಿನ ಸೆನ್ಸೇಷನಲ್ ಮ್ಯೂಸಿಕ್ ಡೈರೆಕ್ಟರ್ ಸಾಯಿ ಅಭಯಂಕರ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ಎಸ್.ಆರ್. ಕತ್ತಿರ್ ಅವರ ಛಾಯಾಗ್ರಹಣ ಇರಲಿದೆ. ಕಯಾದು ಲೋಹರ್ ಅವರು ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಸೂರ್ಯ ಅವರು ತಮ್ಮ ಕೈಯಲ್ಲಿರುವ ಚಿತ್ರೀಕರಣದ ಇತರ ಪ್ರಮುಖ ಪ್ರಾಜೆಕ್ಟ್‌ಗಳನ್ನು ಮುಗಿಸಿದ ಬೆನ್ನಲ್ಲೇ ಈ ಹೊಸ ಸಿನಿಮಾದ ಶೂಟಿಂಗ್ ಅಧಿಕೃತವಾಗಿ ಆರಂಭವಾಗಲಿದೆ. ಉಳಿದ ತಾರಾಗಣ ಹಾಗೂ ತಾಂತ್ರಿಕ ವರ್ಗದ ಸಂಪೂರ್ಣ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುವುದಾಗಿ ಚಿತ್ರತಂಡ ತಿಳಿಸಿದೆ.

Read More
Next Story