
'ಈಗ' ಚಿತ್ರದ ಕ್ಲೈಮ್ಯಾಕ್ಸ್‌ಗೆ ಫ್ರೆಂಚ್ ಪ್ರೇಕ್ಷಕರು ಫಿದಾ
ಕಿಚ್ಚ ಸುದೀಪ್ ನಟನೆಯ 'ಈಗ' ಸಿನಿಮಾಗೆ ಫ್ರೆಂಚ್ ಪ್ರೇಕ್ಷಕರು ಫಿದಾ
ಯುರೋಪ್ ಪ್ರವಾಸದಲ್ಲಿರುವ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ 'ಈಗ' ಚಿತ್ರದ ಪ್ಯಾರಿಸ್ ಪ್ರದರ್ಶನಕ್ಕೆ ಫ್ರೆಂಚ್ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಪ್ರಸ್ತುತ ಯುರೋಪ್ ಪ್ರವಾಸದಲ್ಲಿರುವ ರಾಜಮೌಳಿ ಅವರ 'ಆರ್‌ಆರ್‌ಆರ್', 'ಬಾಹುಬಲಿ' ಮತ್ತು 'ಈಗ' ಚಿತ್ರಗಳನ್ನು ಅಲ್ಲಿನ ಪ್ರೇಕ್ಷಕರಿಗಾಗಿ ವಿಶೇಷವಾಗಿ ಪ್ರದರ್ಶಿಸಲಾಗುತ್ತಿದೆ. ಈ ಪೈಕಿ ಪ್ಯಾರಿಸ್‌ನಲ್ಲಿ ನಡೆದ 'ಈಗ' ಚಿತ್ರದ ಪ್ರದರ್ಶನಕ್ಕೆ ಫ್ರೆಂಚ್ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನಟ ಕಿಚ್ಚ ಸುದೀಪ್ ಎದುರು ಪುಟ್ಟ ನೊಣವು ಧೈರ್ಯವಾಗಿ ನಿಂತು "ಐ ವಿಲ್ ಬಿ ಬ್ಯಾಕ್" ಎಂದು ಬರೆಯುವ ಐಕಾನಿಕ್ ದೃಶ್ಯಕ್ಕೆ ಥಿಯೇಟರ್‌ನಲ್ಲಿದ್ದ ವಿದೇಶಿ ಪ್ರೇಕ್ಷಕರು ಎದ್ದು ನಿಂತು ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ. ಚಿತ್ರದುದ್ದಕ್ಕೂ ಖಳನಾಯಕನಾಗಿ ಕಿಚ್ಚ ಸುದೀಪ್ ಅವರ ನಟನೆ ಮತ್ತು ನೊಣದ ಹೋರಾಟಕ್ಕೆ ಫ್ರೆಂಚ್ ಸಿನಿಮಾ ಪ್ರೇಕ್ಷಕರು ಸಂಪೂರ್ಣವಾಗಿ ಫಿದಾ ಆಗಿದ್ದಾರೆ. ರಾಜಮೌಳಿ ತಂಡ ಹಂಚಿಕೊಂಡಿರುವ ಈ ಪ್ರದರ್ಶನದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಇದೇ ಪ್ರವಾಸದ ವೇಳೆ ರಾಜಮೌಳಿ ಅವರಿಗೆ ವಿಶ್ವದ ಅತ್ಯಂತ ಪ್ರತಿಷ್ಠಿತ ಚಲನಚಿತ್ರ ಸಂಸ್ಥೆಯಾದ 'ಸಿನೆಮಾಥೆಕ್ ಫ್ರಾಂಚೈಸ್'ನಿಂದ ಅಪರೂಪದ ಗೌರವ ಕೂಡ ಲಭಿಸಿದೆ. ಸದ್ಯ ರಾಜಮೌಳಿ ಅವರು ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ, 2027ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿರುವ 'ವಾರಣಾಸಿ' ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

