
ರಿಯಾ ಚಕ್ರವರ್ತಿ ಮೀಡಿಯಾ ಟ್ರಯಲ್‌ಗೆ ಹೋಲಿಸಿದ ಚಿತ್ರನಿರ್ಮಾಪಕ ಸಂಜಯ್ ಗುಪ್ತಾ ವಿರುದ್ಧ ನೆಟ್ಟಿಗರು ಭಾರಿ ಆಕ್ರೋಶ ಹೊರಹಾಕಿದ್ದಾರೆ.
ಸಿಯಾಗೆ ಸುಶಾಂತ್ ಗೆಳತಿ ರಿಯಾ ಹೋಲಿಕೆ: ಸಂಜಯ್ ಗುಪ್ತಾ ವಿರುದ್ಧ ಆಕ್ರೋಶ
ಲೋಹಗಢ ಕೋಟೆ ಕೇತನ್ ಅಗರ್ವಾಲ್ ಕೊಲೆ ಆರೋಪಿ ಸಿಯಾ ಗೋಯಲ್ ಪ್ರಕರಣವನ್ನು ರಿಯಾ ಚಕ್ರವರ್ತಿ ಮೀಡಿಯಾ ಟ್ರಯಲ್‌ಗೆ ಹೋಲಿಸಿದ ಚಿತ್ರನಿರ್ಮಾಪಕ ಸಂಜಯ್ ಗುಪ್ತಾ ವಿರುದ್ಧ ನೆಟ್ಟಿಗರು ಭಾರಿ ಆಕ್ರೋಶ ಹೊರಹಾಕಿದ್ದಾರೆ.
ಲೋಹಗಢ ಕೋಟೆಯಲ್ಲಿ ನಡೆದ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆ ಮುಂದುವರಿದಿರುವ ಬೆನ್ನಲ್ಲೇ, ಈ ವಿಷಯವಾಗಿ ಬಾಲಿವುಡ್ ಚಿತ್ರನಿರ್ಮಾಪಕ ಸಂಜಯ್ ಗುಪ್ತಾ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್ ಪರಿಸ್ಥಿತಿಯನ್ನು ನಟಿ ರಿಯಾ ಚಕ್ರವರ್ತಿ ಎದುರಿಸಿದ್ದ ಮಾಧ್ಯಮ ವಿಚಾರಣೆಗೆ ಹೋಲಿಸಿರುವ ನಿರ್ದೇಶಕನ ವಿರುದ್ಧ ನೆಟ್ಟಿಗರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದ ಸಂಜಯ್ ಗುಪ್ತಾ, ತಾವು ಯಾರ ಪರವಾಗಿಯೂ ತೀರ್ಪು ನೀಡುತ್ತಿಲ್ಲ ಅಥವಾ ಯಾವುದೇ ಪಕ್ಷ ವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸುತ್ತಲೇ, ರಿಯಾ ಚಕ್ರವರ್ತಿ ಅವರಿಗೆ ಮಾಡಿದ್ದನ್ನೇ ಈಗ ಸಿಯಾ ಗೋಯಲ್ ವಿಷಯದಲ್ಲೂ ಮಾಡುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದ್ದರು. ಟೆಲಿವಿಷನ್ ಮಾಧ್ಯಮಗಳು ಸಾಕ್ಷ್ಯಾಧಾರಗಳಿಗಿಂತ ಮುಂಚಿತವಾಗಿಯೇ ತೀರ್ಪು ನೀಡಿ ಸರ್ಕಸ್ ನಡೆಸುತ್ತಿವೆ ಮತ್ತು ನಾವು ಇತಿಹಾಸದಿಂದ ಏನನ್ನೂ ಕಲಿಯುತ್ತಿಲ್ಲ ಎಂದು ಅವರು ಬೇಸರ ಹೊರಹಾಕಿದ್ದರು.
ಭಿನ್ನ ಪ್ರಕರಣಗಳ ಹೋಲಿಕೆಗೆ ಬೇಸರ
ಈ ಎರಡು ವಿಭಿನ್ನ ಪ್ರಕರಣಗಳನ್ನು ಪರಸ್ಪರ ಹೋಲಿಕೆ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ನಿಶ್ಚಿತಾರ್ಥ ಆಗಿದ್ದ ಭಾವಿ ಪತಿಯನ್ನು ಕಂದಕಕ್ಕೆ ತಳ್ಳಿ ಕೊಲೆ ಮಾಡಿದ ಆರೋಪ ಹೊತ್ತಿರುವ ವ್ಯಕ್ತಿಯನ್ನು ರಿಯಾ ಚಕ್ರವರ್ತಿಗೆ ಹೋಲಿಸುವುದು ಎಷ್ಟು ಸರಿ ಎಂದು ಬಳಕೆದಾರರು ಪ್ರಶ್ನಿಸಿದ್ದಾರೆ. ಸಿಯಾ ಖುದ್ದು ಅಪರಾಧ ನಡೆದ ಸ್ಥಳದಲ್ಲೇ ಇದ್ದಳು ಎಂಬ ಸಂಗತಿಯನ್ನು ನೆನಪಿಸಿರುವ ನೆಟ್ಟಿಗರು, ನಿರ್ದೇಶಕರು ಯಾರ ಮೆಚ್ಚುಗೆ ಗಳಿಸಲು ಇಂತಹ ತರ್ಕಹೀನ ವಾದ ಮಂಡಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಪೋಸ್ಟ್ ಕೇವಲ ಜನರ ಗಮನ ಸೆಳೆಯುವ ಹತಾಶ ಪ್ರಯತ್ನ ಎಂದು ಹಲವರು ಟೀಕಿಸಿದ್ದಾರೆ.
ಇನ್ನು ಪ್ರಕರಣದ ಹಿನ್ನೆಲೆ ನೋಡುವುದಾದರೆ, ನಟಿ ರಿಯಾ ಚಕ್ರವರ್ತಿ 2020 ರಲ್ಲಿ ಸುಶಾಂತ್ ಸಿಂಗ್ ರಾಜ್‌ಪುತ್ ನಿಧನದ ನಂತರ ತೀವ್ರ ಮೀಡಿಯಾ ಟ ಮತ್ತು ಕಾನೂನು ಸಂಕಷ್ಟಗಳನ್ನು ಎದುರಿಸಿದ್ದರು. ಮತ್ತೊಂದೆಡೆ, ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಅವರ ನಿಶ್ಚಿತ ವಧು ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿ ಸೇರಿ ಲೋಹಗಢ ಕೋಟೆಯ ಪ್ರಪಾತಕ್ಕೆ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಸದ್ಯ ಈ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದ್ದು, ಕಾನೂನು ಪ್ರಕ್ರಿಯೆಗಳು ಚುರುಕಾಗಿ ಸಾಗುತ್ತಿವೆ.

