ಧುರಂಧರ್ 2| ಬಿಡುಗಡೆಗೂ ಮುನ್ನವೇ ಮುಂಗಡ ಬುಕಿಂಗ್‌ನಲ್ಲಿ ಹೊಸ ಇತಿಹಾಸ
x

ಬಿಡುಗಡೆಗೂ ಮುನ್ನವೇ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ರಣವೀರ್ ಸಿಂಗ್ ಅಭಿನಯದ 'ಧುರಂಧರ್: ದಿ ರಿವೇಂಜ್'

ಧುರಂಧರ್ 2| ಬಿಡುಗಡೆಗೂ ಮುನ್ನವೇ ಮುಂಗಡ ಬುಕಿಂಗ್‌ನಲ್ಲಿ ಹೊಸ ಇತಿಹಾಸ

ಧುರಂಧರ್ 2 ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಸಂಜಯ್ ದತ್, ಅರ್ಜುನ್ ರಾಂಪಾಲ್, ಆರ್. ಮಾಧವನ್, ಅಕ್ಷಯ್ ಖನ್ನಾ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


Click the Play button to hear this message in audio format

ಆದಿತ್ಯ ಧರ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಧುರಂಧರ್: ದಿ ರಿವೇಂಜ್' ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ಬಿಡುಗಡೆಗೆ ಇನ್ನು ಹತ್ತು ದಿನಗಳು ಬಾಕಿ ಇರುವಂತೆಯೇ ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ದಾಖಲೆ ಬರೆಯುತ್ತಿದೆ.

ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವು ಮಾರ್ಚ್ 18 ರಂದು ಪೇಯ್ಡ್ ಪ್ರಿವ್ಯೂ ಮೂಲಕ ಹಾಗೂ ಮಾರ್ಚ್ 19 ರಂದು ವಿಶ್ವಾದ್ಯಂತ ಭರ್ಜರಿಯಾಗಿ ತೆರೆಕಾಣಲಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಈ ಸಿನಿಮಾ ಅಬ್ಬರಿಸುತ್ತಿದ್ದು, ವಿಶೇಷವಾಗಿ ಉತ್ತರ ಅಮೆರಿಕಾದಲ್ಲಿ ಈಗಾಗಲೇ 2 ಮಿಲಿಯನ್ ಡಾಲರ್ ಗಳಿಕೆಯತ್ತ ದಾಪುಗಾಲು ಹಾಕುತ್ತಿದೆ. ಅಮೆರಿಕದ ಟೆಕ್ಸಾಸ್, ಕ್ಯಾಲಿಫೋರ್ನಿಯಾ ಮತ್ತು ನ್ಯೂಜೆರ್ಸಿ ರಾಜ್ಯಗಳಲ್ಲಿ ಈ ಚಿತ್ರಕ್ಕೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಇಲ್ಲಿಯವರೆಗೆ ಅಮೆರಿಕದಾದ್ಯಂತ ಸಾವಿರಕ್ಕೂ ಹೆಚ್ಚು ಶೋಗಳಿಗೆ ಸುಮಾರು 38,545 ಟಿಕೆಟ್‌ಗಳು ಮಾರಾಟವಾಗಿದ್ದು, ವೀಕೆಂಡ್ ಮುಂಗಡ ಬುಕಿಂಗ್ ಈಗಾಗಲೇ 1.70 ಮಿಲಿಯನ್ ಡಾಲರ್ ತಲುಪಿದೆ ಎಂದು ವರದಿಯಾಗಿದೆ.

ಇನ್ನು ಭಾರತದ ಬಾಕ್ಸ್ ಆಫೀಸ್ ವಿಚಾರಕ್ಕೆ ಬರುವುದಾದರೆ, 'ಧುರಂಧರ್ 2' ಎಲ್ಲಾ ಭಾಷೆಗಳಿಂದ ಒಟ್ಟು 18.1 ಕೋಟಿ ರೂಪಾಯಿಗಳಷ್ಟು ಮುಂಗಡ ಸಂಗ್ರಹ ಮಾಡಿದೆ ಎಂದು ಸ್ಯಾಕ್ನಿಲ್ಕ್ ವರದಿ ತಿಳಿಸಿದೆ. ಕೇವಲ ಹಿಂದಿ ಆವೃತ್ತಿಯಿಂದಲೇ ಸುಮಾರು 12.07 ಕೋಟಿ ರೂಪಾಯಿ ಹರಿದುಬಂದಿದೆ. ಈ ಹಿಂದೆ ಬಿಡುಗಡೆಯಾಗಿದ್ದ 'ಸ್ತ್ರೀ 2' ಚಿತ್ರದ ಪೇಯ್ಡ್ ಪ್ರಿವ್ಯೂ ದಾಖಲೆಯನ್ನು ಕೇವಲ 24 ಗಂಟೆಗಳಲ್ಲಿ ಈ ಸಿನಿಮಾ ಮುರಿದು ಹೊಸ ಇತಿಹಾಸ ಬರೆದಿದೆ.

ಮೊದಲ ಭಾಗ ಕೇವಲ ಹಿಂದಿಯಲ್ಲಿ ತೆರೆಕಂಡಿದ್ದರೆ, ಈ ಎರಡನೇ ಭಾಗವು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆಯಾಗುತ್ತಿದೆ. ಸಂಜಯ್ ದತ್, ಆರ್. ಮಾಧವನ್, ಅಕ್ಷಯ್ ಖನ್ನಾ ಮತ್ತು ಯಾಮಿ ಗೌತಮ್ ಅವರಂತಹ ತಾರಾಬಳಗ ಈ ಚಿತ್ರದಲ್ಲಿರುವುದು ಪ್ರೇಕ್ಷಕರ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಇತ್ತೀಚೆಗೆ ಧುರಂಧರ್ - 2 ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿತ್ತು. ಎರಡನೇ ಭಾಗದ ಟ್ರೈಲರ್‌ನಲ್ಲಿ ರಣವೀರ್ ಸಿಂಗ್ ಮತ್ತೆ ಜಸ್ಕಿರತ್ ಸಿಂಗ್ ರಂಗಿ ಪಾತ್ರದಲ್ಲಿ ಮಿಂಚಿದ್ದಾರೆ. ಮೊದಲ ಭಾಗದಲ್ಲಿ ಅಕ್ಷಯ್ ಖನ್ನಾ ಅಭಿನಯದ ರೆಹಮಾನ್ ಡಕಾಯಿತನ ಗ್ಯಾಂಗ್‌ಗೆ ಭಾರತೀಯ ಗೂಢಚಾರನಾಗಿ ನುಗ್ಗಿದ್ದ ಜಸ್ಕಿರತ್, ಈಗ ಅದೇ ಗ್ಯಾಂಗ್‌ನಲ್ಲಿ 'ಲ್ಯಾರಿಯ ಬಾದ್‌ಶಾ' ಆಗಿ ಬೆಳೆಯುವ ಹಂತವನ್ನು ಟ್ರೈಲರ್‌ನಲ್ಲಿ ತೋರಿಸಲಾಗಿದೆ. ಬಾಂಬೆ ರಾಕರ್ಸ್‌ನ ಖ್ಯಾತ 'ಅರಿ ಅರಿ' ಹಾಡಿನ ರಿಮಿಕ್ಸ್ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಟ್ರೈಲರ್‌ನಲ್ಲಿ, ಪಾಕಿಸ್ತಾನದ ಭವಿಷ್ಯವನ್ನು ಇನ್ಮುಂದೆ ಭಾರತವೇ ನಿರ್ಧರಿಸಲಿದೆ ಎಂಬ ಡೈಲಾಗ್‌ ಇದೆ.

'ಧುರಂಧರ್' 2 ನ ಟ್ರೇಲರ್‌ ಇಲ್ಲಿದೆ..

ವಿಶೇಷವೆಂದರೆ, ಈ ಹಿಂದೆ ಮಾರ್ಚ್ 19ರಂದೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಮಧ್ಯಪ್ರಾಚ್ಯದ ಪ್ರಸ್ತುತ ಯುದ್ಧದ ಸನ್ನಿವೇಶದಿಂದಾಗಿ 'ಟಾಕ್ಸಿಕ್' ಚಿತ್ರತಂಡವು ತನ್ನ ಬಿಡುಗಡೆಯನ್ನು ಜೂನ್ ತಿಂಗಳಿಗೆ ಮುಂದೂಡಿದೆ. ಇದರಿಂದಾಗಿ 'ಧುರಂಧರ್ 2' ಚಿತ್ರಕ್ಕೆ ದೊಡ್ಡ ಮಟ್ಟದ ಸೋಲೋ ಎಂಟ್ರಿ ಸಿಕ್ಕಂತಾಗಿದೆ. ಈ ಬಾರಿ ಚಿತ್ರವು ಕೇವಲ ಹಿಂದಿಯಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿರುವುದು ವಿಶೇಷ. ಸಂಜಯ್ ದತ್, ಅರ್ಜುನ್ ರಾಂಪಾಲ್, ಆರ್. ಮಾಧವನ್ ಅವರಂತಹ ಬಲಿಷ್ಠ ತಾರಾಗಣ ಹೊಂದಿರುವ ಈ ಚಿತ್ರಕ್ಕೆ ತೆಲುಗಿನಲ್ಲಿ ಪವನ್ ಕಲ್ಯಾಣ್ ಅವರ 'ಉಸ್ತಾದ್ ಭಗತ್ ಸಿಂಗ್' ಹೊರತುಪಡಿಸಿ ಬೇರೆ ಯಾವುದೇ ಪ್ರಬಲ ಸ್ಪರ್ಧೆಯಿಲ್ಲ. ರಾಮ್ ಚರಣ್ ಅವರ 'ಪೆದ್ದಿ' ಮತ್ತು ನಾನಿ ಅವರ 'ದಿ ಪ್ಯಾರಡೈಸ್' ಸಿನಿಮಾಗಳು ಕೂಡ ಮಾರ್ಚ್ ಬಿಡುಗಡೆಯಿಂದ ಹಿಂದೆ ಸರಿದಿರುವುದು ಚಿತ್ರಕ್ಕೆ ಮತ್ತಷ್ಟು ಪ್ಲಸ್ ಪಾಯಿಂಟ್ ಆಗಿದೆ.

Read More
Next Story