
ಧುರಂದರ್ ಸಿನಿಮಾ ಒಟಿಟಿಗೆ ಬರಲಿದೆ.
ಚಿತ್ರಮಂದಿರಗಳಲ್ಲಿ ಸಂಚಲನ ಸೃಷ್ಟಿಸಿದ 'ಧುರಂಧರ್' ಈಗ ಒಟಿಟಿಯಲ್ಲಿ ಬಿಡುಗಡೆ
ಚಿತ್ರಮಂದಿರಗಳಲ್ಲಿ ತೆರೆಕಂಡು ಭಾರೀ ಕಲೆಕ್ಷನ್ ಮಾಡಿರುವ 'ಧುರಂಧರ್' ಸಿನಿಮಾ ಇದೀಗ ಒಟಿಟಿಗೆ ಬರಲು ಸಿದ್ದವಾಗಿದೆ. ಫೆಬ್ರವರಿ - 1 ರಂದು ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಾಣಲಿದೆ.
ರಣವೀರ್ ಸಿಂಗ್ ಅಭಿನಯದ ಆದಿತ್ಯ ದರ್ ನಿರ್ದೇಶನ 'ಧುರಂಧರ್' ಸಿನಿಮಾ ಜನವರಿ 30ರಂದು ಒಟಿಟಿಗೆ ಬರಲಿದ್ದು, ಸ್ಟ್ರೀಮಿಂಗ್ ಬೆಳಿಗ್ಗೆ 12 ಗಂಟೆಗೆ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಈ ಬಗ್ಗೆ ನೆಟ್‌ಫ್ಲಿಕ್ಸ್ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಧುರಂದರ್ ಸಿನಿಮಾವನ್ನು ನೆಟ್‌ಫ್ಲಿಕ್ಸ್ ಭಾರೀ ಮೊತ್ತಕ್ಕೆ ಖರೀದಿಸಿದೆ ಎನ್ನಲಾಗುತ್ತಿದೆ.
'ಧುರಂಧರ್' ಒಂದು ಸ್ಪೈ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್, ಆರ್. ಮಾಧವನ್ ಮತ್ತು ಅರ್ಜುನ್ ರಾಂಪಾಲ್ ನಟಿಸಿದ್ದಾರೆ. ಈ ಚಿತ್ರವು ಭಾರತದ ವಿದೇಶಿ ಗುಪ್ತಚರ ಸಂಸ್ಥೆ 'ರಾ' ಮುಖ್ಯಸ್ಥ ಅಜಯ್ ಸನ್ಯಾಲ್ (ಆರ್. ಮಾಧವನ್) ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಜಾಲ ನಾಶಮಾಡಲು ನಡೆಸಿದ ರಹಸ್ಯ ಕಾರ್ಯಾಚರಣೆಯ ಕಥೆಯನ್ನು ಆಧರಿಸಿದೆ. ವರದಿಗಳ ಪ್ರಕಾರ, ಈ ಚಿತ್ರವು ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ಗೆ ಮಾರಾಟವಾಗಲಿದ್ದು, ಜನವರಿ ೩೦ರಂದು ಬಿಡುಗಡೆಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಇವೆಲ್ಲವೂ ಸದ್ಯದ ಮಟ್ಟಿಗೆ ಕೇವಲ ಸುದ್ದಿಗಳಾಗಿದ್ದು, ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ.
ಈ ಸಿನಿಮಾ ಬಿಡುಗಡೆಯಾಗಿ 55 ದಿನಗಳ ಬಳಿಕವೂ ಥಿಯೇಟರ್‌ಗಳಲ್ಲಿ ತನ್ನ ಅಧಿಪತ್ಯ ಮುಂದುವರಿಸಿದ್ದು, ಗಳಿಕೆಯಲ್ಲಿ 1000 ಕೋಟಿ ರೂಪಾಯಿಗಳ ಗಡಿ ದಾಟಿದೆ. ಈ ಸಾಧನೆಯ ಮೂಲಕ ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಸಿನಿಮಾಗಳ ಸಾಲಿಗೆ ಈ ಚಿತ್ರ ಸೇರ್ಪಡೆಯಾಗಿದೆ. ವಿಶೇಷವೆಂದರೆ, ಭಾರತದಲ್ಲಿ ಇದುವರೆಗೆ ಕೇವಲ ಬೆರಳೆಣಿಕೆಯ ಸಿನಿಮಾಗಳು ಮಾತ್ರ ಈ ಐತಿಹಾಸಿಕ ಮೈಲಿಗಲ್ಲನ್ನು ತಲುಪಿವೆ. ಈ ಪಟ್ಟಿಗೆ ಸೇರಿದ ಮೊಟ್ಟಮೊದಲ ಏಕ-ಭಾಷೆಯ (ಹಿಂದಿ) ಚಿತ್ರ ಎಂಬ ಹೆಗ್ಗಳಿಕೆಗೆ 'ಧುರಂಧರ್' ಪಾತ್ರವಾಗಿದೆ. ಈ ಹಿಂದೆ ಸಾವಿರ ಕೋಟಿ ಗಳಿಸಿದ ಇತರ ಚಿತ್ರಗಳು ಬಹುಭಾಷೆಗಳಲ್ಲಿ ಬಿಡುಗಡೆಯಾಗಿದ್ದವು. ಈಗ ಬಾಲಿವುಡ್‌ನ ಈ ಚಿತ್ರವು ಆ ಎಲ್ಲಾ ದಾಖಲೆಗಳನ್ನು ಅಳಿಸಿಹಾಕಿ ತನ್ನದೇ ಆದ ಸ್ಥಾನ ಭದ್ರಪಡಿಸಿಕೊಂಡಿದೆ.
ಬರುತ್ತಿದೆ ಪಾರ್ಟ್-2
'ಧುರಂಧರ್ ' ಎರಡನೇ ಭಾಗವು ಈಗಾಗಲೇ ಅಧಿಕೃತವಾಗಿ ಘೋಷಣೆಯಾಗಿದೆ. 'ಧುರಂಧರ್ 2' ಚಿತ್ರವು 2026ರ ಮಾರ್ಚ್ 19 ರಂದು ತೆರೆಗೆ ಬರಲಿದೆ. ಮೊದಲ ಭಾಗವು ಕೇವಲ ಹಿಂದಿಯಲ್ಲಿ ತೆರೆಕಂಡಿದ್ದರೂ, ದಕ್ಷಿಣ ಭಾರತದಲ್ಲಿ ಸಿಕ್ಕ ಭರ್ಜರಿ ಪ್ರತಿಕ್ರಿಯೆಯಿಂದಾಗಿ ಎರಡನೇ ಭಾಗವನ್ನು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಧುರಂಧರ್ 2 ಚಿತ್ರವು ಯಶ್ ಅವರ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ನೊಂದಿಗೆ ಪೈಪೋಟಿ ನಡೆಸಲಿದೆ. ಇಷ್ಟೇ ಅಲ್ಲ, ಅದಿವಿ ಶೇಷ್ ಮತ್ತು ಮೃಣಾಲ್ ಠಾಕೂರ್ ಅಭಿನಯದ 'ಡಕಾಯಿತ್' ಚಿತ್ರ ಕೂಡ ಅದೇ ದಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

