
ರಣವೀರ್ ಸಿಂಗ್ ಅಭಿನಯದ ಹೈ-ವೋಲ್ಟೇಜ್ ಆಕ್ಷನ್ ಸಿನಿಮಾ 'ಧುರಂಧರ್-2'ಈಗ ಅಧಿಕೃತವಾಗಿ ಕನ್ನಡದಲ್ಲಿ ತೆರೆಕಾಣುತ್ತಿದೆ.
ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್-2 ಅಬ್ಬರ: ಇಂದಿನಿಂದ ಕನ್ನಡದಲ್ಲೂ ಲಭ್ಯ
ಬಾಕ್ಸ್ ಆಫೀಸ್ ದಾಖಲೆಗಳನ್ನು ಉಡೀಸ್ ಮಾಡುತ್ತಿರುವ ರಣವೀರ್ ಸಿಂಗ್ ಅಭಿನಯದ ಹೈ-ವೋಲ್ಟೇಜ್ ಆಕ್ಷನ್ ಸಿನಿಮಾ 'ಧುರಂಧರ್-2' ಈಗ ಅಧಿಕೃತವಾಗಿ ಕನ್ನಡದಲ್ಲಿ ತೆರೆಕಾಣುತ್ತಿದೆ.
ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿರುವ 'ಧುರಂಧರ್-2' ಸಿನಿಮಾ ಈಗ ಕನ್ನಡದಲ್ಲಿ ತೆರೆಕಾಣುತ್ತಿದೆ. ಕಳೆದ ನಾಲ್ಕು ದಿನಗಳಿಂದ ಕನ್ನಡಿಗರು ಅನಿವಾರ್ಯವಾಗಿ ಹಿಂದಿ ಆವೃತ್ತಿಯನ್ನೇ ನೋಡುತ್ತಿದ್ದರು. ಆದರೆ ಈಗ ವಿತರಣಾ ಸಂಸ್ಥೆ ಜಿಯೋ ಸ್ಟುಡಿಯೋಸ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಸಿಹಿ ಸುದ್ದಿ ನೀಡಿದ್ದು, ಇಂದಿನಿಂದ (ಮಾರ್ಚ್ 23) ಕನ್ನಡ ವರ್ಶನ್ ಲಭ್ಯವಿರುವುದಾಗಿ ತಿಳಿಸಿದೆ.
ಸಿನಿಮಾ ರಿಲೀಸ್ ಆದ ಮೊದಲ ದಿನದಿಂದಲೇ ದಾಖಲೆ ಬರೆಯುತ್ತಿರುವ ಈ ಸಿನಿಮಾ, ಮೊದಲ ದಿನ 102.55 ಕೋಟಿ ರೂಪಾಯಿ ಗಳಿಸಿತ್ತು. ಎರಡನೇ ದಿನ 80.72 ಕೋಟಿ ಹಾಗೂ ಮೂರನೇ ದಿನ 113 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಭಾನುವಾರವಂತೂ ಬರೋಬ್ಬರಿ 114.85 ಕೋಟಿ ರೂಪಾಯಿ ಬಾಚಿಕೊಂಡಿದೆ.
ಚಿತ್ರರಂಗದ ದಿಗ್ಗಜರಿಂದ ಮೆಚ್ಚುಗೆಯ ಮಹಾಪೂರ
ಈ ಚಿತ್ರವನ್ನು ನೋಡಿದ ಘಟಾನುಘಟಿ ಕಲಾವಿದರು ಫಿದಾ ಆಗಿದ್ದಾರೆ. ಹಿರಿಯ ನಟ ಅನುಪಮ್ ಖೇರ್ ಅವರು ಬರೋಬ್ಬರಿ 9 ನಿಮಿಷಗಳ ವಿಡಿಯೋ ಮಾಡಿ ಚಿತ್ರದ ಬಗ್ಗೆ ಅದ್ಭುತ ವಿಮರ್ಶೆ ನೀಡಿದ್ದಾರೆ. ಇವರಷ್ಟೇ ಅಲ್ಲದೆ ದಕ್ಷಿಣ ಭಾರತದ ಸ್ಟಾರ್‌ಗಳಾದ ಅಲ್ಲು ಅರ್ಜುನ್, ಮಹೇಶ್ ಬಾಬು, ರಿಷಬ್ ಶೆಟ್ಟಿ ಮತ್ತು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಚಿತ್ರವನ್ನು ನೋಡಿ ಮನಸಾರೆ ಹೊಗಳಿದ್ದಾರೆ.
ಕನ್ನಡದಲ್ಲಿ ಬುಕಿಂಗ್ ಓಪನ್
ಮಾರ್ಚ್ 22 ರಂದೇ ಜಿಯೋ ಸ್ಟುಡಿಯೋ ಈ ಸುದ್ದಿಯನ್ನು ರಿವೀಲ್ ಮಾಡಿದ್ದು, ಇಂದಿನಿಂದ (ಮಾರ್ಚ್ 23) ಕರ್ನಾಟಕದಾದ್ಯಂತ ಕನ್ನಡದ 'ಧುರಂಧರ್-2' ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ. ನೀವು ಕೂಡ ನಿಮ್ಮ ನೆಚ್ಚಿನ ಭಾಷೆಯಲ್ಲೇ ಈ ಸಿನಿಮಾವನ್ನು ನೋಡಲು ಬುಕ್ ಮೈ ಶೋ ಅಥವಾ ಹತ್ತಿರದ ಥಿಯೇಟರ್‌ಗಳಲ್ಲಿ ಟಿಕೆಟ್ ಕಾಯ್ದಿರಿಸಬಹುದು ಎಂದು ತಿಳಿಸಿತ್ತು.
ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ಅಭಿನಯದ ಹೈ-ವೋಲ್ಟೇಜ್ ಆಕ್ಷನ್ ಸ್ಪೈ ಥ್ರಿಲ್ಲರ್ 'ಧುರಂಧರ್-2' ಮೊದಲ ದಿನದಿಂದಲೇ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಮೊದಲ ದಿನ 102.55ರೂ. ಕೋಟಿ ಗಳಿಸುವ ಮೂಲಕ ಭರ್ಜರಿ ಓಪನಿಂಗ್ ಪಡೆದಿತ್ತು. ಎರಡನೇ ದಿನ 80.72 ಕೋಟಿ ರೂ., ಮೂರನೇ ದಿನ 113 ಕೋಟಿ ರೂ. ಮತ್ತು ನಾಲ್ಕನೇ ದಿನವಾದ ಭಾನುವಾರ 114.85 ಕೋಟಿ ರೂ. ಗಳಿಸಿದೆ. ಒಟ್ಟಾರೆಯಾಗಿ ಭಾರತದಲ್ಲಿ 450 ರೂ. ಕೋಟಿಗೂ ಅಧಿಕ ನೆಟ್ ಕಲೆಕ್ಷನ್ ಮಾಡಿರುವ ಈ ಚಿತ್ರ, ಸಾರ್ವಕಾಲಿಕ ದಾಖಲೆಗಳತ್ತ ಮುನ್ನುಗ್ಗುತ್ತಿದೆ.
ಸಿನಿಮಾದಲ್ಲಿ ರಣವೀರ್ ಸಿಂಗ್ ಅವರು 'ಹಮ್ಜಾ ಅಲಿ ಮಜಾರಿ' ಎಂಬ ಅಂಡರ್ ಕವರ್ ಏಜೆಂಟ್ ಪಾತ್ರದಲ್ಲಿ ಮಿಂಚಿದ್ದಾರೆ. ಅವರೊಂದಿಗೆ ಸಂಜಯ್ ದತ್ (ಸಿಂಧ್ ಪೊಲೀಸ್ ಅಧಿಕಾರಿ ಪಾತ್ರ), ಅರ್ಜುನ್ ರಾಂಪಾಲ್ (ಮೇಜರ್ ಇಕ್ಬಾಲ್ ಪಾತ್ರ), ಆರ್. ಮಾಧವನ್ (ಐಬಿ ಡೈರೆಕ್ಟರ್ ಪಾತ್ರ) ಮತ್ತು ರಾಕೇಶ್ ಬೇಡಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

