ಭಾರತದಲ್ಲಿ 500 ಕೋಟಿ ರೂ. ಗಳಿಸಿದ ರಣವೀರ್ ಸಿಂಗ್‌ರ ಧುರಂಧರ್ 2 ಹೊಸ ದಾಖಲೆ
x

ಆದಿತ್ಯ ಧರ್ ನಿರ್ದೇಶನದ ರಣವೀರ್ ಸಿಂಗ್ ಅಭಿನಯದ 'ಧುರಂಧರ್: ದಿ ರಿವೆಂಜ್' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಧಿಪತ್ಯವನ್ನು ಮುಂದುವರಿಸಿದೆ.

ಭಾರತದಲ್ಲಿ 500 ಕೋಟಿ ರೂ. ಗಳಿಸಿದ ರಣವೀರ್ ಸಿಂಗ್‌ರ 'ಧುರಂಧರ್ 2' ಹೊಸ ದಾಖಲೆ

ರಣವೀರ್ ಸಿಂಗ್ ಅಭಿನಯದ 'ಧುರಂಧರ್: ದಿ ರಿವೆಂಜ್' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ಕೇವಲ 5 ದಿನಗಳಲ್ಲಿ ಭಾರತದಲ್ಲಿ 500 ಕೋಟಿ ರೂಪಾಯಿಗಳ ನಿವ್ವಳ ಸಂಗ್ರಹವನ್ನು ದಾಟಿದೆ.


Click the Play button to hear this message in audio format

ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ತನ್ನ ವಿಜಯಯಾತ್ರೆಯನ್ನು ಮುಂದುವರಿಸಿದ್ದು, ಸೋಮವಾರದ ಚಿತ್ರವು ಒಟ್ಟು 20,382 ಶೋಗಳ ಮೂಲಕ ಅಂದಾಜು 65 ಕೋಟಿ ರೂಪಾಯಿಗಳನ್ನು ಗಳಿಸಿದೆ.

ಚಿತ್ರದ ಒಟ್ಟು ದೇಶೀಯ ಗಳಿಕೆ 619.76 ಕೋಟಿ ರೂಪಾಯಿಗಳಾಗಿದ್ದರೆ, ವಿದೇಶಿ ಮಾರುಕಟ್ಟೆಯಿಂದ ಬಂದ 210 ಕೋಟಿ ರೂಪಾಯಿಗಳನ್ನು ಒಳಗೊಂಡು ಜಾಗತಿಕವಾಗಿ ಈ ಚಿತ್ರವು ಬರೊಬ್ಬರಿ 829.76 ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡಿದೆ. ಬಿಡುಗಡೆಗೂ ಮುನ್ನ ನಡೆದ ಪೇಯ್ಡ್ ಪ್ರಿವ್ಯೂಗಳಲ್ಲೇ 43 ಕೋಟಿ ರೂಪಾಯಿ ಗಳಿಸಿದ್ದ ಈ ಸಿನಿಮಾ, ಮೊದಲ ದಿನವೇ 102.55 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿತ್ತು.

2025ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿದ್ದ 'ಧುರಂಧರ್' ಮೊದಲ ಭಾಗದ ಭರ್ಜರಿ ಯಶಸ್ಸಿನ ನಂತರ, ಮಾರ್ಚ್ 19, 2026 ರಂದು ತೆರೆಕಂಡ ಈ ಎರಡನೇ ಭಾಗವು ಈಗ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಚಿತ್ರವು ಈಗಾಗಲೇ ಭಾರತದಲ್ಲಿ 500 ಕೋಟಿ ರೂಪಾಯಿಗಳ ನಿವ್ವಳ ಸಂಗ್ರಹವನ್ನು ದಾಟುವ ಮೂಲಕ ಬಾಲಿವುಡ್‌ನ ಹೊಸ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದೆ.

ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಣವೀರ್ ಸಿಂಗ್ ಜೊತೆಗೆ ಸಂಜಯ್ ದತ್, ಆರ್. ಮಾಧವನ್ ಮತ್ತು ಅರ್ಜುನ್ ರಾಂಪಾಲ್ ಅವರಂತಹ ಘಟಾನುಘಟಿ ಕಲಾವಿದರ ಅಭಿನಯವು ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುತ್ತಿದೆ. ಭಾರತೀಯ ರಹಸ್ಯ ಏಜೆಂಟ್ ಶತ್ರುಗಳ ನೆಲೆಯನ್ನು ಹೇಗೆ ಧ್ವಂಸಗೊಳಿಸುತ್ತಾನೆ ಎಂಬ ರೋಚಕ ಕಥೆಯನ್ನು ಹೊಂದಿರುವ ಈ ಚಿತ್ರವು ಈಗಲೂ ಚಿತ್ರಮಂದಿರಗಳಲ್ಲಿ ಶೇಕಡಾ 44 ಕ್ಕಿಂತ ಹೆಚ್ಚು ಆಕ್ಯುಪೆನ್ಸಿಯೊಂದಿಗೆ ಪ್ರದರ್ಶನ ಕಾಣುತ್ತಿದೆ.

ಚಿತ್ರರಂಗದ ದಿಗ್ಗಜರಿಂದ ಮೆಚ್ಚುಗೆಯ ಮಹಾಪೂರ

ಈ ಚಿತ್ರವನ್ನು ನೋಡಿದ ಘಟಾನುಘಟಿ ಕಲಾವಿದರು ಫಿದಾ ಆಗಿದ್ದಾರೆ. ಹಿರಿಯ ನಟ ಅನುಪಮ್ ಖೇರ್ ಅವರು ಬರೋಬ್ಬರಿ 9 ನಿಮಿಷಗಳ ವಿಡಿಯೋ ಮಾಡಿ ಚಿತ್ರದ ಬಗ್ಗೆ ಅದ್ಭುತ ವಿಮರ್ಶೆ ನೀಡಿದ್ದಾರೆ. ಇವರಷ್ಟೇ ಅಲ್ಲದೆ ದಕ್ಷಿಣ ಭಾರತದ ಸ್ಟಾರ್‌ಗಳಾದ ಅಲ್ಲು ಅರ್ಜುನ್, ಮಹೇಶ್ ಬಾಬು, ರಿಷಬ್ ಶೆಟ್ಟಿ ಮತ್ತು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಚಿತ್ರವನ್ನು ನೋಡಿ ಮನಸಾರೆ ಹೊಗಳಿದ್ದಾರೆ.

ಕನ್ನಡದ ಸ್ಟಾರ್ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ಸಿನಿಮಾ ವೀಕ್ಷಿಸಿ ಚಿತ್ರತಂಡದ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟರ್) ನಲ್ಲಿ ತಮ್ಮ ವಿಮರ್ಶೆಯನ್ನು ಹಂಚಿಕೊಂಡಿರುವ ಅವರು, ಸಿನಿಮಾದ ಮೇಕಿಂಗ್ ಮತ್ತು ಕಲಾವಿದರ ನಟನೆಯನ್ನು ಹಾಡಿ ಹೊಗಳಿದ್ದಾರೆ.

ಸಿನಿಮಾದ ಬಗ್ಗೆ ಬರೆದುಕೊಂಡಿರುವ ರಿಷಬ್ ಶೆಟ್ಟಿ, "ಸಿನಿಮಾದ ಮೊದಲ ದೃಶ್ಯವೇ ನಿಮ್ಮನ್ನು ಒಮ್ಮೆಲೇ ಸೆಳೆದುಕೊಂಡು, ಕೊನೆಯವರೆಗೂ ಕುರ್ಚಿಯ ತುದಿಯಲ್ಲಿ ಕೂರುವಂತೆ ಹಿಡಿದಿಟ್ಟುಕೊಳ್ಳುತ್ತದೆ. ಸಿನಿಮಾದ ಪ್ರತಿಯೊಂದು ಫ್ರೇಮ್ ಕೂಡ ನೈಜ ಯುದ್ಧದಂತೆಯೇ ಭಾಸವಾಗುತ್ತದೆ" ಎಂದು ರೋಮಾಂಚನ ವ್ಯಕ್ತಪಡಿಸಿದ್ದಾರೆ. "ಇದೊಂದು ಕೇವಲ 'ಧುರಂಧರ್' ಚಿತ್ರದ ಮುಂದುವರಿದ ಭಾಗ (ಸೀಕ್ವೆಲ್) ಮಾತ್ರವಲ್ಲ, ಸಹೋದರ ಆದಿತ್ಯ ಧರ್ ಅವರು ಈ ಕಥೆಯನ್ನು ಅದ್ಭುತವಾಗಿ ಹೆಣೆದು ಸೃಷ್ಟಿಸಿದ್ದಾರೆ. ಕಥೆಯ ಪ್ರತಿಯೊಂದು ವಿಷಯವನ್ನು ಅತ್ಯಂತ ಅಚ್ಚುಕಟ್ಟಾಗಿ ವಿವರಿಸಿದ ರೀತಿ ನನಗೆ ತುಂಬಾ ಇಷ್ಟವಾಯಿತು" ಎಂದು ನಿರ್ದೇಶಕರ ಬೆನ್ನು ತಟ್ಟಿದ್ದಾರೆ.

Read More
Next Story