Deepika Padukone| ನಾನು ನಿಮ್ಮೆಲ್ಲರಿಗಿಂತ ಮೊದಲೇ ಧುರಂಧರ್-2 ಸಿನಿಮಾ ನೋಡಿದ್ದೇನೆ
x

ದೀಪಿಕಾ ಮತ್ತು ರಣವೀರ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವದಂತಿಗಳಿಗೆ ಪೂರ್ಣವಿರಾಮ ಬಿದ್ದಿದೆ.

Deepika Padukone| "ನಾನು ನಿಮ್ಮೆಲ್ಲರಿಗಿಂತ ಮೊದಲೇ ಧುರಂಧರ್-2 ಸಿನಿಮಾ ನೋಡಿದ್ದೇನೆ"

ಧುರಂಧರ್ 2 ಯಶಸ್ಸಿನ ಬಗ್ಗೆ ಮೌನ ಮುರಿದ ದೀಪಿಕಾ ಪಡುಕೋಣೆ, ಪತಿ ರಣವೀರ್ ಸಿಂಗ್‌ಗೆ ಬೆಂಬಲ ಸೂಚಿಸಿ ಟ್ರೋಲಿಗರಿಗೆ ಖಡಕ್ ಉತ್ತರ ನೀಡಿದ್ದಾರೆ. ವದಂತಿಗಳಿಗೆ ಈಗ ತೆರೆ ಬಿದ್ದಿದೆ.


Click the Play button to hear this message in audio format

"ನನ್ನ ಮೌನದ ಬಗ್ಗೆ ಜನರು ಅತಿಯಾಗಿ ಊಹಿಸುತ್ತಿದ್ದಾರೆ ಅಷ್ಟೇ. ಅಂದಹಾಗೆ, ನೀವೆಲ್ಲರೂ ಸಿನಿಮಾ ನೋಡುವ ಮೊದಲೇ ನಾನು ಈ ಚಿತ್ರವನ್ನು ನೋಡಿದ್ದೆ. ಈಗ ಯಾರು ಹಾಸ್ಯದ ವಸ್ತುವಾದರು ಗೊತ್ತಾಯಿತೇ?" ಹೀಗೆಂದು ವ್ಯಂಗ್ಯವಾಗಿ ಪ್ರಶ್ನಿಸುವ ಮೂಲಕ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಪತಿ ರಣವೀರ್ ಸಿಂಗ್ ಅಭಿನಯದ 'ಧುರಂಧರ್: ದಿ ರಿವೆಂಜ್' ಚಿತ್ರದ ಕುರಿತಾದ ಮೌನಕ್ಕೆ ಸಂಬಂಧಿಸಿದಂತೆ ಟ್ರೋಲಿಗರಿಗೆ ಸರಿಯಾದ ಉತ್ತರ ನೀಡಿದ್ದಾರೆ.

ಕಳೆದ ಮಾರ್ಚ್ 19 ರಂದು ಬಿಡುಗಡೆಯಾದ 'ಧುರಂಧರ್ 2' ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದ್ದರೂ, ದೀಪಿಕಾ ಪಡುಕೋಣೆ ಅವರು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಂಚಿಕೊಳ್ಳದಿರುವುದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಮುಂಬೈನಲ್ಲಿ ನಡೆದ ಚಿತ್ರದ ವಿಶೇಷ ಪ್ರದರ್ಶನಕ್ಕೂ ದೀಪಿಕಾ ಗೈರಾಗಿದ್ದರಿಂದ, ಅಭಿಮಾನಿಗಳು ಅವರ ಮೌನದ ಹಿಂದೆ ಏನೋ ಗಂಭೀರ ಕಾರಣವಿದೆ ಎಂದು ಭಾವಿಸಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ನಡೆದ ಚರ್ಚೆಯೊಂದಕ್ಕೆ ದೀಪಿಕಾ ಈಗ ನೇರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ದೀಪಿಕಾ ಅವರ ಅನುಪಸ್ಥಿತಿಯನ್ನು ಪ್ರಶ್ನಿಸಿ ಹಂಚಿಕೊಳ್ಳಲಾಗಿದ್ದ ವಿಡಿಯೋವೊಂದಕ್ಕೆ ಸ್ವತಃ ದೀಪಿಕಾ ಅವರೇ ಕಮೆಂಟ್ ಮಾಡಿದ್ದಾರೆ. "ನನ್ನ ಮೌನದ ಬಗ್ಗೆ ಜನರು ಅತಿಯಾಗಿ ಊಹಿಸುತ್ತಿದ್ದಾರೆ ಅಷ್ಟೇ. ಅಂದಹಾಗೆ, ನೀವೆಲ್ಲರೂ ಸಿನಿಮಾ ನೋಡುವ ಮೊದಲೇ ನಾನು ಈ ಚಿತ್ರವನ್ನು ನೋಡಿದ್ದೆ. ಈಗ ಯಾರು ಹಾಸ್ಯದ ವಸ್ತುವಾದರು ಗೊತ್ತಾಯಿತೇ?" ಎಂದು ವ್ಯಂಗ್ಯವಾಗಿ ಪ್ರಶ್ನಿಸುವ ಮೂಲಕ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.

ಈ ಮೂಲಕ ತಾವು ರಣವೀರ್ ಸಿಂಗ್ ಮತ್ತು ಅವರ 'ಧುರಂಧರ್' ಚಿತ್ರದ ಬೆನ್ನಿಗೆ ಸದಾ ನಿಂತಿರುವುದನ್ನು ದೀಪಿಕಾ ಸ್ಪಷ್ಟಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕದಿದ್ದರೂ ಕೂಡ ತಮ್ಮ ಪತಿಯ ಕೆಲಸಕ್ಕೆ ಪೂರ್ಣ ಬೆಂಬಲವಿದೆ ಎಂಬುದನ್ನು ತಿಳಿಸುವ ಮೂಲಕ ಹಬ್ಬಿದ್ದ ಅಂತೆಕಂತೆಗಳಿಗೆ ತೆರೆ ಎಳೆದಿದ್ದಾರೆ.

ಬಾಲಿವುಡ್‌ನ ಸ್ಟಾರ್ ನಟ ರಣವೀರ್ ಸಿಂಗ್ ಮತ್ತು ನಿರ್ದೇಶಕ ಆದಿತ್ಯ ಧರ್ ಕಾಂಬಿನೇಷನ್‌ನ ಸ್ಪೈ ಥ್ರಿಲ್ಲರ್ 'ಧುರಂಧರ್' 2025ರ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಮೊದಲ ಭಾಗದ ಭರ್ಜರಿ ಯಶಸ್ಸಿನ ಬೆನ್ನಲ್ಲೇ, ಕಳೆದ ಮಾರ್ಚ್ 19ರಂದು ಬಿಡುಗಡೆಯಾದ ಇದರ ಮುಂದುವರಿದ ಭಾಗ 'ಧುರಂಧರ್: ದಿ ರಿವೆಂಜ್' ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಧೂಳಿಪಟ ಮಾಡುತ್ತಿದೆ.

ಕೇವಲ 20 ದಿನಗಳಲ್ಲಿ ಈ ಚಿತ್ರವು ವಿಶ್ವಾದ್ಯಂತ ಸುಮಾರು 1,641 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತವನ್ನು ಗಳಿಸುವ ಮೂಲಕ 2026ರ ಅತ್ಯಂತ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿದೆ. ಭಾರತದ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಅಬ್ಬರಿಸುತ್ತಿರುವ ಈ ಸಿನಿಮಾ, ಉತ್ತರ ಅಮೆರಿಕಾದಲ್ಲಿ 25 ಮಿಲಿಯನ್ ಡಾಲರ್ ಗಳಿಸಿದ ಮೊದಲ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಚಿತ್ರವು ಕನ್ನಡ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಂಡು ದಕ್ಷಿಣ ಭಾರತದಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಜಾಸ್ಕಿರತ್ ಸಿಂಗ್ ರಂಗಿ ಎಂಬ ಭಾರತೀಯ ಗುಪ್ತಚರ ಅಧಿಕಾರಿಯ ಸಾಹಸಗಾಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್ ಮತ್ತು ಆರ್. ಮಾಧವನ್ ಅವರಂತಹ ಘಟಾನುಘಟಿ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಸುಮಾರು 3 ಗಂಟೆ 49 ನಿಮಿಷಗಳ ಸುದೀರ್ಘ ಅವಧಿಯಿದ್ದರೂ ಸಹ, ಪ್ರೇಕ್ಷಕರು ಚಿತ್ರದ ಆಕ್ಷನ್ ಮತ್ತು ಕಥೆಗೆ ಮಾರುಹೋಗಿದ್ದಾರೆ. ಸದ್ಯಕ್ಕೆ ಈ ಚಿತ್ರವು 1,700 ಕೋಟಿ ರೂಪಾಯಿಗಳ ಮೈಲಿಗಲ್ಲನ್ನು ತಲುಪುವತ್ತ ದಾಪುಗಾಲು ಹಾಕುತ್ತಿದ್ದು, ಭಾರತದ ಸಾರ್ವಕಾಲಿಕ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ.

Read More
Next Story