Actor Darshan| ಕುಟುಂಬಸ್ಥರು ಹೋದ ಬೆನ್ನಲ್ಲೇ ಮತ್ತೆ ಮೌನಕ್ಕೆ ಶರಣಾದ ದರ್ಶನ್; ಸಹ ಕೈದಿಗಳ ಜೊತೆಯೂ ಮಾತಿಲ್ಲ
x

 ಜೈಲಿನಲ್ಲಿ ಪತ್ನಿ-ಮಗನನ್ನು ಕಂಡು ಕಣ್ಣೀರಿಟ್ಟ ದರ್ಶನ್

Actor Darshan| ಕುಟುಂಬಸ್ಥರು ಹೋದ ಬೆನ್ನಲ್ಲೇ ಮತ್ತೆ ಮೌನಕ್ಕೆ ಶರಣಾದ ದರ್ಶನ್; ಸಹ ಕೈದಿಗಳ ಜೊತೆಯೂ ಮಾತಿಲ್ಲ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗನನ್ನು ಕಂಡು ನಟ ದರ್ಶನ್ ಕಣ್ಣೀರಿಟ್ಟಿದ್ದಾರೆ. ಕುಟುಂಬಸ್ಥರು ತಂದಿದ್ದ ಹಣ್ಣುಗಳನ್ನು ತಿನ್ನಲು ನಟ ನಿರಾಕರಿಸಿದ್ದಾರೆ.


Click the Play button to hear this message in audio format

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್ ಭೇಟಿಯಾಗಿದ್ದಾರೆ. ತಮ್ಮ ಮದುವೆಯ ವಾರ್ಷಿಕೋತ್ಸವದ ಸಂದರ್ಭದಲ್ಲೇ ಜೈಲಾಧಿಕಾರಿಗಳ ವಿಶೇಷ ಅನುಮತಿ ಪಡೆದು ಈ ಭೇಟಿ ನಡೆದಿದ್ದು, ಭೇಟಿಯ ವೇಳೆ ಜೈಲಿನೊಳಗೆ ತೀವ್ರ ಭಾವುಕ ಸನ್ನಿವೇಶ ಸೃಷ್ಟಿಯಾಗಿದೆ ಎಂದು ವರದಿಯಾಗಿದೆ.

ಕಾರಾಗೃಹದ ನಿಯಮಾವಳಿಗಳ ಅನ್ವಯ ಸಿಸಿಟಿವಿ ಕಣ್ಗಾವಲು ಹಾಗೂ ಹಿರಿಯ ಜೈಲಾಧಿಕಾರಿಗಳ ಸಮ್ಮುಖದಲ್ಲೇ ಸುಮಾರು 30 ನಿಮಿಷಗಳ ಕಾಲ ಈ ಮುಖಾಮುಖಿ ನಡೆದಿದೆ. ಪತ್ನಿ ಮತ್ತು ಮಗ ಭೇಟಿ ಮಾಡುವ ಜಾಗಕ್ಕೆ ಬರುತ್ತಿದ್ದಂತೆ ನಟ ದರ್ಶನ್ ತೀವ್ರ ಭಾವುಕರಾಗಿ ಇಬ್ಬರನ್ನೂ ಗಟ್ಟಿಯಾಗಿ ಅಪ್ಪಿಕೊಂಡು ಕಣ್ಣೀರಿಟ್ಟಿದ್ದಾರೆ. ಇದನ್ನು ಕಂಡು ವಿಜಯಲಕ್ಷ್ಮಿ ಮತ್ತು ವಿನೀಶ್ ಕೂಡ ಭಾವುಕರಾಗಿದ್ದಾರೆ. ಇತ್ತೀಚೆಗೆ ಜಾಮೀನು ಅರ್ಜಿ ವಜಾಗೊಂಡಿದ್ದರಿಂದ ತೀವ್ರ ಬೇಸರದಲ್ಲಿದ್ದ ದರ್ಶನ್, ಪತ್ನಿ ಮತ್ತು ಮಗನ ಜೊತೆ ಕೆಲ ಕಾಲ ಆಪ್ತವಾಗಿ ಮಾತನಾಡಿದ್ದಾರೆ. ಮದುವೆ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ಅವರು ದರ್ಶನ್ ಕೈಹಿಡಿದು ಶುಭಾಶಯ ಕೋರಿದಾಗ ದರ್ಶನ್ ಮುಖದಲ್ಲಿ ಸಣ್ಣದೊಂದು ಮುಗುಳ್ನಗೆ ಮೂಡಿಬಂದಿತ್ತು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಕುಟುಂಬಸ್ಥರು ದರ್ಶನ್ ಅವರಿಗಾಗಿ ಹಣ್ಣುಗಳನ್ನು ತೆಗೆದುಕೊಂಡು ಹೋಗಿದ್ದರು. ಕಾರಾಗೃಹದ ನಿಯಮಗಳ ಪ್ರಕಾರ ಕೇವಲ ಹಣ್ಣುಗಳನ್ನು ಮಾತ್ರ ಒಳಗೆ ಕೊಂಡೊಯ್ಯಲು ಅಧಿಕಾರಿಗಳು ಅನುಮತಿ ನೀಡಿದ್ದರು. ಆದರೆ, ಕುಟುಂಬಸ್ಥರು ಅಷ್ಟು ಪ್ರೀತಿಯಿಂದ ತಂದಿದ್ದ ಹಣ್ಣುಗಳನ್ನು ನಟ ದರ್ಶನ್ ಸವಿಯಲಿಲ್ಲ ಎಂದು ತಿಳಿದುಬಂದಿದೆ. ಪತ್ನಿ-ಮಗ ಜೈಲಿನಿಂದ ನಿರ್ಗಮಿಸಿದ ನಂತರ ದರ್ಶನ್ ಮತ್ತೆ ಮೌನಕ್ಕೆ ಶರಣಾಗಿದ್ದು, ಕುಟುಂಬ ತಂದಿದ್ದ ಹಣ್ಣುಗಳನ್ನು ತಿನ್ನದೇ ತಮ್ಮ ಬ್ಯಾರಕ್‌ನ ಕಪಾಟಿನಲ್ಲಿ ಹಾಗೇ ಎತ್ತಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕುಟುಂಬಸ್ಥರ ಭೇಟಿಯ ನಂತರ ದರ್ಶನ್ ಮತ್ತಷ್ಟು ಅಪ್‌ಸೆಟ್ ಆಗಿರುವುದು ಕಂಡುಬಂದಿದ್ದು, ಸಹ ಕೈದಿಗಳೊಂದಿಗೂ ಹೆಚ್ಚು ಮಾತನಾಡದೆ ಮೌನವಾಗಿಯೇ ಉಳಿದಿದ್ದಾರೆ. ಜಾಮೀನು ಸಿಗದೇ ಇರುವುದರಿಂದ ಅವರು ಮಾನಸಿಕವಾಗಿ ಸಾಕಷ್ಟು ಕುಗ್ಗಿದ್ದಾರೆ ಎನ್ನಲಾಗುತ್ತಿದ್ದು, ಜೈಲಾಧಿಕಾರಿಗಳು ಅವರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇದೇ ಭೇಟಿಯ ವೇಳೆ ದರ್ಶನ್ ಅವರ ಮುಂದಿನ ಕಾನೂನು ಹೋರಾಟ ಹಾಗೂ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಕುರಿತು ಕೂಡ ಕುಟುಂಬದವರೊಂದಿಗೆ ಸುದೀರ್ಘ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.

Read More
Next Story