
ಹೋಮಿ ಅದಾಜಾನಿಯಾ ನಿರ್ದೇಶನದಲ್ಲಿ ಮೂಡಿಬಂದಿರುವ, ಜೂನ್ 19, 2026 ರಂದು ತೆರೆಕಾಣಲಿರುವ ಬಹುನಿರೀಕ್ಷಿತ 'ಕಾಕ್ಟೇಲ್ 2' ಸಿನಿಮಾದ ಅಧಿಕೃತ ಪೋಸ್ಟರ್ನಲ್ಲಿ ಮುಖ್ಯ ಭೂಮಿಕೆಯ ನಟರಾದ ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ.
ಕಾಕ್ಟೇಲ್ 2' ಚಿತ್ರಕ್ಕೆ 'ಎ' ರೇಟ್ ಕೊಟ್ಟ ಸೆನ್ಸಾರ್ ಮಂಡಳಿ
ಶಾಹಿದ್ ಕಪೂರ್ ನಟನೆಯ 'ಕಾಕ್ಟೇಲ್ 2' ಚಿತ್ರಕ್ಕೆ ಯಾವುದೇ ದೃಶ್ಯ ಕಟ್ಗಳಿಲ್ಲದೆ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್ ನೀಡಿದ್ದು, ಸಂಭಾಷಣೆಯ 'ಅಗ್ನಿ' ಪದವನ್ನು 'ದಿಯಾ' ಎಂದು ಬದಲಿಸಿದೆ.
ಬಾಲಿವುಡ್ ಅಂಗಳದಲ್ಲಿ ಭಾರಿ ಕುತೂಹಲ ಮೂಡಿಸಿರುವ ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ರೋಮ್ಯಾಂಟಿಕ್ ಡ್ರಾಮಾ 'ಕಾಕ್ಟೇಲ್ 2' ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (CBFC) ಸೆನ್ಸಾರ್ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ವಿಶೇಷವೆಂದರೆ, ಚಿತ್ರದ ಯಾವುದೇ ರೋಮ್ಯಾಂಟಿಕ್ ಹಾಗೂ ಆಪ್ತ ದೃಶ್ಯಗಳಿಗೆ ಕತ್ತರಿ ಹಾಕದ ಸೆನ್ಸಾರ್ ಮಂಡಳಿಯು, ಯಾವುದೇ ದೃಶ್ಯಗಳ ಕಟ್ಗಳಿಲ್ಲದೆ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಚಿತ್ರದಲ್ಲಿರುವ ವಯಸ್ಕರ ಕಂಟೆಂಟ್ ಹಿನ್ನೆಲೆಯಲ್ಲಿ ಇದಕ್ಕೆ 'ಎ' (A) ಪ್ರಮಾಣಪತ್ರವನ್ನು ನೀಡಲಾಗಿದೆ.
ಚಿತ್ರದ ದೃಶ್ಯಗಳು ಯಥಾವತ್ತಾಗಿ ಉಳಿದುಕೊಂಡಿದ್ದರೂ, ಆಡಿಯೋ ಟ್ರ್ಯಾಕ್ನಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲು ಸೆನ್ಸಾರ್ ಮಂಡಳಿ ಸೂಚಿಸಿದೆ. ಚಿತ್ರದ ಸಂಭಾಷಣೆಯಲ್ಲಿ ಬರುವ 'ಅಗ್ನಿ' ಎಂಬ ಪದವನ್ನು ತೆಗೆದುಹಾಕಿ ಅದರ ಜಾಗದಲ್ಲಿ 'ದಿಯಾ' ಎಂದು ಬಳಸಲು ಮಂಡಳಿ ನಿರ್ದೇಶನ ನೀಡಿದೆ. ಇದರೊಂದಿಗೆ ಸಬ್ಟೈಟಲ್ಗಳಲ್ಲಿ ಇದ್ದ ಕೆಲವು ಆಕ್ಷೇಪಾರ್ಹ ಪದಗಳನ್ನು ಹಾಗೂ ಸಂಭಾಷಣೆಯಲ್ಲಿದ್ದ 'ಜ್ಯೂ ಆನ್ ದಿ ರನ್' ಎಂಬ ಪ್ರಸ್ತಾಪವನ್ನು ಸೆನ್ಸಾರ್ ಮಾಡಲಾಗಿದೆ. ಈ ಎಲ್ಲಾ ಆಡಿಯೋ ಬದಲಾವಣೆಗಳ ಬಳಿಕ ಜೂನ್ 16 ರಂದು ಚಿತ್ರಕ್ಕೆ ಅಧಿಕೃತ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದ್ದು, ಸಿನಿಮಾ ಒಟ್ಟು 2 ಗಂಟೆ 29 ನಿಮಿಷಗಳ ರನ್ಟೈಮ್ ಹೊಂದಿದೆ.
ಅಂದಹಾಗೆ, ಈ ಚಿತ್ರವು ಬಾಲಿವುಡ್ ನಟಿ ಕೃತಿ ಸನೋನ್ ಅವರ ಹತ್ತು ವರ್ಷಗಳ ಸಿನಿ ಬದುಕಿನಲ್ಲೇ ಮೊದಲ 'ಎ' ರೇಟೆಡ್ ಸಿನಿಮಾವಾಗಿದೆ. 2012ರಲ್ಲಿ ದೀಪಿಕಾ ಪಡುಕೋಣೆ, ಸೈಫ್ ಅಲಿ ಖಾನ್ ಮತ್ತು ಡಯಾನಾ ಪೆಂಟಿ ನಟನೆಯಲ್ಲಿ ಸೂಪರ್ ಹಿಟ್ ಆಗಿದ್ದ 'ಕಾಕ್ಟೇಲ್' ಚಿತ್ರದ ಮುಂದುವರಿದ ಭಾಗವಾಗಿ ಈ ಸಿನಿಮಾ ಮೂಡಿಬರುತ್ತಿದೆ. ಹಳೆಯ ಚಿತ್ರವು ತ್ರಿಕೋನ ಪ್ರೇಮಕಥೆಯಾಗಿದ್ದರೆ, ಈ ಹೊಸ ಸೀಕ್ವೆಲ್ ಇಂದಿನ ಜನರೇಷನ್ನ ಆಧುನಿಕ ಸಂಬಂಧಗಳು ಮತ್ತು ಪ್ರೀತಿಯ ಗೊಂದಲಗಳ ಸುತ್ತ ಸಾಗಲಿದೆ. ಹೋಮಿ ಅದಾಜಾನಿಯಾ ನಿರ್ದೇಶನದ, ಮ್ಯಾಡಾಕ್ ಫಿಲ್ಮ್ಸ್ ನಿರ್ಮಿಸಿರುವ ಈ ಚಿತ್ರವು ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

