
ಬಾಲಿವುಡ್‌ನ ಹಿರಿಯ ಹಾಗೂ ಪ್ರಖ್ಯಾತ ಚಲನಚಿತ್ರ ನಿರ್ದೇಶಕ ಮಹೇಶ್ ಭಟ್ ಅವರು ಇನ್ನು ಮುಂದೆ ಎಂದಿಗೂ ಸಿನಿಮಾ ನಿರ್ದೇಶನಕ್ಕೆ ಮರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಿನಿಮಾ ನಿರ್ದೇಶನಕ್ಕೆ ಮಹೇಶ್ ಭಟ್ ಗುಡ್‌ಬೈ- ಯಾಕೆ ಈ ದಿಢೀರ್ ನಿರ್ಧಾರ?
ಚಿತ್ರರಂಗದ ಕಾರ್ಪೊರೇಟ್ ಶೈಲಿ ಹಾಗೂ ಮುಂಚಿತವಾಗಿ ನಿರ್ಧಾರವಾಗುವ ಕಂಟೆಂಟ್‌ಗಳಿಂದ ಬೇಸತ್ತ ಬಾಲಿವುಡ್ ಹಿರಿಯ ನಿರ್ದೇಶಕ ಮಹೇಶ್ ಭಟ್ ಸಿನಿಮಾ ನಿರ್ದೇಶನಕ್ಕೆ ಕಾಯಂ ವಿದಾಯ ಘೋಷಿಸಿದ್ದಾರೆ.
ಬಾಲಿವುಡ್‌ನ ಹಿರಿಯ ಹಾಗೂ ಪ್ರಖ್ಯಾತ ಚಲನಚಿತ್ರ ನಿರ್ದೇಶಕ ಮಹೇಶ್ ಭಟ್ ಅವರು ಇನ್ನು ಮುಂದೆ ಎಂದಿಗೂ ಸಿನಿಮಾ ನಿರ್ದೇಶನಕ್ಕೆ ಮರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ನಿರ್ಧಾರವನ್ನು ಹಂಚಿಕೊಂಡಿರುವ ಅವರು, ಇಂದಿನ ಚಿತ್ರರಂಗದ ಪರಿಸ್ಥಿತಿ ಮತ್ತು ಕಥೆ ಹೇಳುವ ಶೈಲಿ ಸಂಪೂರ್ಣವಾಗಿ ಬದಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತಮ್ಮ ಮಗಳು ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಮತ್ತು 2020 ರಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿದ್ದ 'ಸಡಕ್ 2' ಚಿತ್ರವೇ ತಮ್ಮ ವೃತ್ತಿಜೀವನದ ಕೊನೆಯ ನಿರ್ದೇಶನದ ಸಿನಿಮಾ ಎಂದು ಅವರು ಘೋಷಿಸಿದ್ದಾರೆ. ಆಲಿಯಾ ಭಟ್ ಅವರೊಂದಿಗೆ ಮತ್ತೊಮ್ಮೆ ಸಿನಿಮಾ ಮಾಡುವ ಆಸೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಹೇಶ್ ಭಟ್, ತಮ್ಮ ಮತ್ತು ಆಲಿಯಾ ಅವರ ಕಾಂಬಿನೇಷನ್‌ನ 'ಸಡಕ್ 2' ಒಂದು ಅತ್ಯಂತ ವಿಫಲ ಸಿನಿಮಾವಾಗಿತ್ತು ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಮನರಂಜನಾ ಜಗತ್ತಿನಲ್ಲಿ ಯಶಸ್ಸಿನ ಅಮಲು ಮತ್ತು ಪ್ರಶಂಸೆಗಳು ಹೇಗೆ ಸಿಗುತ್ತವೆಯೋ, ಅದೇ ರೀತಿ ವೈಫಲ್ಯದ ಕಹಿ ಮತ್ತು ಟೀಕೆಗಳನ್ನು ಕೂಡ ಅಷ್ಟೇ ಸಹಜವಾಗಿ ಸ್ವೀಕರಿಸಬೇಕು ಎಂದು ಅವರು ಹೇಳಿದ್ದಾರೆ. ಹೀಗಾಗಿಯೇ ತಾವು ನಿರ್ದೇಶನದ ಜವಾಬ್ದಾರಿಯಿಂದ ಸಂಪೂರ್ಣವಾಗಿ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದಾರೆ.
ಇಂದಿನ ಸಿನಿಮಾ ರಂಗದ ಬದಲಾವಣೆಗಳ ಬಗ್ಗೆ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಚಲನಚಿತ್ರಗಳು ಕೇವಲ ವ್ಯಾಪಾರದ ಆಲ್ಗೊರಿದಮ್‌ಗಳು ಮತ್ತು ಮೊದಲೇ ನಿರ್ಧಾರಿತವಾದ ಕಾರ್ಪೊರೇಟ್ ಕಂಟೆಂಟ್‌ಗಳ ಆಧಾರದ ಮೇಲೆ ರೂಪುಗೊಳ್ಳುತ್ತಿವೆ. ಕಲೆಯ ಸೃಜನಶೀಲತೆಗಿಂತ ಲೆಕ್ಕಾಚಾರಗಳೇ ಇಲ್ಲಿ ಮುಖ್ಯವಾಗುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಾವು ಈಗ ಆರಿಹೋದ ಜ್ವಾಲಾಮುಖಿಯಂತಾಗಿದ್ದು, ಇಂದಿನ ತಲೆಮಾರಿನ ಸಿನಿಮಾಗಳಿಗೆ ಬೇಕಾದ ತೀವ್ರ ಹಪಾಹಪಿ ಅಥವಾ ಕಾಲದ ಮರಳಿನ ಮೇಲೆ ತಮ್ಮ ಹೆಜ್ಜೆಗುರುತುಗಳನ್ನು ಬಿಟ್ಟು ಹೋಗಬೇಕೆಂಬ ಹಠ ತಮ್ಮಲ್ಲಿ ಉಳಿದಿಲ್ಲ ಎಂದಿದ್ದಾರೆ. ತಾವೊಬ್ಬ ಔಟ್‌ಡೇಟೆಡ್ ನಿರ್ದೇಶಕ ಎಂದು ಕರೆದುಕೊಂಡಿರುವ ಅವರು, ಈಗ ತಮಗೆ ನಿರ್ದೇಶನಕ್ಕಿಂತ ಹೊಸಬರಿಗೆ ಮಾರ್ಗದರ್ಶನ ನೀಡುವುದು ಹೆಚ್ಚು ತೃಪ್ತಿ ತರುತ್ತಿದೆ ಎಂದು ಹೇಳಿದ್ದಾರೆ.

