ಸಚಿನ್‌ ತೆಂಡೂಲ್ಕರ್ ಮನೆಯಲ್ಲಿ ಮದುವೆ ಸಂಭ್ರಮ: ಸಾನಿಯಾ ಚಾಂದೋಕ್ ಜೊತೆ ಅರ್ಜುನ್ ತೆಂಡೂಲ್ಕರ್ ವಿವಾಹ
x

ಸಚಿನ್ ಸೊಸೆಯಾಗಿ ಮನೆ ಬೆಳಗಲಿರುವ ಸಾನಿಯಾ ಚಾಂದೋಕ್ ಅವರು ಮುಂಬೈನ ಖ್ಯಾತ ಉದ್ಯಮಿ ಘಾಯ್ ಕುಟುಂಬದ ಕುಡಿಯಾಗಿದ್ದಾರೆ. 

ಸಚಿನ್‌ ತೆಂಡೂಲ್ಕರ್ ಮನೆಯಲ್ಲಿ ಮದುವೆ ಸಂಭ್ರಮ: ಸಾನಿಯಾ ಚಾಂದೋಕ್ ಜೊತೆ ಅರ್ಜುನ್ ತೆಂಡೂಲ್ಕರ್ ವಿವಾಹ

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಹಾಗೂ ಉದ್ಯಮಿ ಸಾನಿಯಾ ಚಾಂದೋಕ್ ಮುಂಬೈನಲ್ಲಿ ಅದ್ಧೂರಿಯಾಗಿ ವಿವಾಹವಾದರು. ಧೋನಿ, ಗಂಭೀರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.


Click the Play button to hear this message in audio format

ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಸಾನಿಯಾ ಚಾಂದೋಕ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನ ದಕ್ಷಿಣ ಭಾಗದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ಕ್ರಿಕೆಟ್, ಸಿನಿಮಾ ಮತ್ತು ಉದ್ಯಮ ಕ್ಷೇತ್ರದ ಗಣ್ಯರು ಪಾಲ್ಗೊಂಡು ನವಜೋಡಿಗೆ ಶುಭ ಹಾರೈಸಿದರು.

ಈ ವಿವಾಹ ಮಹೋತ್ಸವವು ಭಾರತೀಯ ಕ್ರಿಕೆಟ್ ತಾರೆಯರ ಸಮಾಗಮಕ್ಕೆ ಸಾಕ್ಷಿಯಾಯಿತು. ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ತಮ್ಮ ಪತ್ನಿ ಸಾಕ್ಷಿ ಅವರೊಂದಿಗೆ ಆಗಮಿಸಿ ಗಮನ ಸೆಳೆದರೆ, ಭಾರತ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಕೂಡ ಪತ್ನಿ ನತಾಶಾ ಜೈನ್ ಅವರೊಂದಿಗೆ ಪಾಲ್ಗೊಂಡಿದ್ದರು. ವಿಶೇಷವೆಂದರೆ, ಅಂದೇ ಸಂಜೆ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಗಂಭೀರ್ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಮತ್ತೊಂದೆಡೆ ಸುನಿಲ್ ಗಾವಸ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ರವಿಶಾಸ್ತ್ರಿ ಅವರಂತಹ ದಿಗ್ಗಜರು ಈ ಸಂಭ್ರಮದ ಭಾಗವಾಗಿದ್ದರು. ಯುವರಾಜ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ವಿರೇಂದ್ರ ಸೆಹ್ವಾಗ್ ಮತ್ತು ಹರ್ಭಜನ್ ಸಿಂಗ್ ಸೇರಿದಂತೆ ಅನೇಕ ಮಾಜಿ ಆಟಗಾರರು ತಮ್ಮ ಕುಟುಂಬದೊಂದಿಗೆ ಆಗಮಿಸಿದ್ದರು. ಐಸಿಸಿ ಅಧ್ಯಕ್ಷ ಜೈ ಶಾ ಮತ್ತು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಕೂಡ ಹಾಜರಿದ್ದು ವಧು-ವರರಿಗೆ ಆಶೀರ್ವದಿಸಿದರು.

ಸಿನೆಮಾ ರಂಗದಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ ದಂಪತಿ ಆಗಮಿಸಿ ಮೆರುಗು ನೀಡಿದರೆ, ಉದ್ಯಮ ಲೋಕದ ಮುಖೇಶ್ ಮತ್ತು ನೀತಾ ಅಂಬಾನಿ ಕುಟುಂಬ ಸಮಾರಂಭದ ಮುಂದಾಳತ್ವ ವಹಿಸಿತ್ತು.

ಸಚಿನ್ ಸೊಸೆಯಾಗಿ ಮನೆ ಬೆಳಗಲಿರುವ ಸಾನಿಯಾ ಚಾಂದೋಕ್ ಅವರು ಮುಂಬೈನ ಖ್ಯಾತ ಉದ್ಯಮಿ ಘಾಯ್ ಕುಟುಂಬದ ಕುಡಿಯಾಗಿದ್ದಾರೆ. ಪ್ರಸಿದ್ಧ 'ಕ್ವಾಲಿಟಿ ಐಸ್ ಕ್ರೀಮ್' ಮತ್ತು 'ಬಾಸ್ಕಿನ್ ರಾಬಿನ್ಸ್ ಇಂಡಿಯಾ' ಸಂಸ್ಥೆಗಳನ್ನು ನಡೆಸುತ್ತಿರುವ ಗ್ರ್ಯಾವಿಸ್ ಹಾಸ್ಪಿಟಾಲಿಟಿ ಈ ಕುಟುಂಬಕ್ಕೆ ಸೇರಿದ್ದಾಗಿದೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪದವಿ ಪಡೆದಿರುವ ಸಾನಿಯಾ, ಪ್ರಾಣಿ ಪ್ರೇಮಿಯಾಗಿದ್ದು 'ಮಿಸ್ಟರ್ ಪಾಸ್' ಎಂಬ ಐಷಾರಾಮಿ ಪೆಟ್ ಸ್ಪಾ ನಡೆಸುತ್ತಿದ್ದಾರೆ. ಮದುವೆಗೂ ಮುನ್ನ ಮಹಾಲಕ್ಷ್ಮಿ ರೇಸ್‌ಕೋರ್ಸ್‌ನಲ್ಲಿ ಮೆಹಂದಿ ಕಾರ್ಯಕ್ರಮ ಹಾಗೂ ಜಾಮ್‌ನಗರದಲ್ಲಿ ಅಂಬಾನಿ ಕುಟುಂಬದಿಂದ ಪ್ರೀ-ವೆಡ್ಡಿಂಗ್ ಸಂಭ್ರಮ ಕೂಡ ಏರ್ಪಡಿಸಲಾಗಿತ್ತು.

Read More
Next Story