
ಕಳೆದ ಕೆಲವು ದಿನಗಳಿಂದ ಅನುಷ್ಕಾ ಶೆಟ್ಟಿ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಅನುಷ್ಕಾ ಮದುವೆ; ವದಂತಿಗಳಿಗೆ ಖಡಕ್ ವಾರ್ನಿಂಗ್
ನಟಿ ಅನುಷ್ಕಾ ಶೆಟ್ಟಿ ಮದುವೆ ವದಂತಿಗೆ ಅವರ ತಂಡ ಖಡಕ್ ಪ್ರತಿಕ್ರಿಯೆ ನೀಡಿದೆ. ವಯಸ್ಸಿನ ಬಗ್ಗೆ ಟೀಕಿಸುವವರಿಗೆ ಮತ್ತು ಸುಳ್ಳು ಸುದ್ದಿ ಹಬ್ಬಿಸುವವರಿಗೆ ಎಚ್ಚರಿಕೆ ನೀಡಿದೆ.
ನಟಿ ಅನುಷ್ಕಾ ಶೆಟ್ಟಿ ಮದುವೆ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. ಇತ್ತೀಚೆಗೆ ಅವರು ಬೆಂಗಳೂರಿನ ಉದ್ಯಮಿಯೊಬ್ಬರನ್ನು ವಿವಾಹವಾಗಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ಹಿಂದೆಲ್ಲಾ ತಮ್ಮ ಮದುವೆಯ ಗಾಸಿಪ್‌ಗಳಿಗೆ ತಲೆಕೆಡಿಸಿಕೊಳ್ಳದೇ ಮೌನವಾಗಿರುತ್ತಿದ್ದ ಅನುಷ್ಕಾ ಶೆಟ್ಟಿ ಈ ಬಾರಿ ಆಕ್ರೋಶ ಹೊರಹಾಕಿದ್ದಾರೆ. ಅನುಷ್ಕಾ ಪರ ಅವರ ತಂಡವು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ಗಾಸಿಪ್‌ಗಳಿಗೆ ಬ್ರೇಕ್ ಹಾಕಿದೆ.
ಮಾಧ್ಯಮಗಳ ನಡೆಗೆ ಅನುಷ್ಕಾ ತಂಡವು ಅಸಮಾಧಾನ ವ್ಯಕ್ತಪಡಿಸಿದೆ. ಯಾರದ್ದೋ ವೈಯಕ್ತಿಕ ಜೀವನವನ್ನು ಪ್ರತಿದಿನದ ಸುದ್ದಿಯನ್ನಾಗಿ ಮಾಡುವ ಮೊದಲು ಅದರ ಸತ್ಯಾಸತ್ಯತೆ ಪರಿಶೀಲಿಸಬೇಕು ಎಂದು ಸಲಹೆ ನೀಡಿದೆ. ಕೇವಲ ಊಹೆಗಳ ಆಧಾರದ ಮೇಲೆ ಮತ್ತು ಅನಧಿಕೃತ ಮಾಹಿತಿ ಪ್ರಕಟಿಸುವುದು ಸರಿಯಾದ ಕ್ರಮವಲ್ಲ ಎಂದು ಕಿಡಿಕಾರಿದೆ. ಮುಖ್ಯವಾಗಿ ಅನುಷ್ಕಾ ಅವರ ವಯಸ್ಸನ್ನು ಪ್ರತಿ ಪೋಸ್ಟ್‌ನಲ್ಲಿ '44' ಎಂದು ಹೈಲೈಟ್ ಮಾಡುತ್ತಿರುವುದಕ್ಕೆ ತಂಡವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ವಯಸ್ಸನ್ನು ಒಂದು ವಿವಾದಾತ್ಮಕ ವಿಷಯವಾಗಿ ಬಿಂಬಿಸುತ್ತಿರುವುದು ಅತ್ಯಂತ ನಿರಾಶಾದಾಯಕ ಸಂಗತಿ ಎಂದು ಹೇಳಿರುವ ತಂಡವು, ಇದೇ ರೀತಿಯ ಉತ್ಸಾಹವನ್ನು ಹಿರಿಯ ನಟರ ವಿಷಯದಲ್ಲಿ ಯಾಕೆ ತೋರುವುದಿಲ್ಲ ಎಂದು ಪ್ರಶ್ನಿಸಿದೆ. ಮಹಿಳಾ ನಟಿಯರ ವಿಷಯದಲ್ಲಿ ಮಾತ್ರ ಈ ತಾರತಮ್ಯವೇಕೆ ಎಂಬ ಗಂಭೀರ ಪ್ರಶ್ನೆ ಎತ್ತಿದೆ. ಅನುಷ್ಕಾ ಶೆಟ್ಟಿ ಅವರು ತಮ್ಮ ಪ್ರತಿಭೆ ಮತ್ತು ಗೌರವದ ಮೂಲಕ ಚಿತ್ರರಂಗದಲ್ಲಿ ಸ್ಥಾನ ಗಳಿಸಿದ್ದಾರೆ. ಅವರು ಯಾವುದೇ ಪಬ್ಲಿಸಿಟಿ ಸ್ಟಂಟ್‌ಗಳನ್ನು ಅವಲಂಬಿಸಿಲ್ಲ ಎಂದು ತಂಡ ಸ್ಪಷ್ಟಪಡಿಸಿದೆ.
ಮದುವೆ ಎಂಬುದು ವೈಯಕ್ತಿಕ ನಿರ್ಧಾರ. ಇದು ಕೇವಲ 'ಬ್ರೇಕಿಂಗ್ ನ್ಯೂಸ್' ಅಲ್ಲ ಅಥವಾ ವೀವ್ಸ್‌ಗಾಗಿ ಬಳಸಿಕೊಳ್ಳುವ ವಿಷಯವಲ್ಲ ಎಂದು ತಂಡ ಹೇಳಿದೆ. ಪ್ರತಿಯೊಬ್ಬರಿಗೂ ತಮ್ಮ ವೈಯಕ್ತಿಕ ಬದುಕನ್ನು ಗೌಪ್ಯವಾಗಿಡುವ ಹಕ್ಕಿದೆ. ಆ ನಿರ್ಧಾರವನ್ನು ಗೌರವಿಸಬೇಕು ಎಂದು ಕೋರಿದೆ. ಇನ್ನಾದರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಿ ಮತ್ತು ನಟಿಯರನ್ನು ಕೂಡ ನಟರಷ್ಟೇ ಸಮಾನವಾಗಿ ಗೌರವಿಸಿ ಎಂದು ಅನುಷ್ಕಾ ಶೆಟ್ಟಿ ತಂಡ ಮಾಧ್ಯಮಗಳಿಗೆ ಖಡಕ್ ಸಂದೇಶ ರವಾನಿಸಿದೆ.
ಕಳೆದ ಹಲವು ವರ್ಷಗಳಿಂದ ಅನುಷ್ಕಾ ಅವರ ಮದುವೆಯ ಬಗ್ಗೆ ಅನೇಕ ಊಹಾಪೋಹಗಳು ಹರಿದಾಡುತ್ತಿದ್ದವು, ವಿಶೇಷವಾಗಿ ನಟ ಪ್ರಭಾಸ್ ಅವರೊಂದಿಗೆ ಹೆಸರು ಕೇಳಿಬರುತ್ತಿತ್ತು. ಆದರೆ, ಅವೆಲ್ಲವೂ ಕೇವಲ ವದಂತಿಗಳಾಗಿಯೇ ಉಳಿದಿದ್ದವು. ಪ್ರಸ್ತುತ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ, ಎರಡೂ ಕುಟುಂಬಗಳ ನಡುವೆ ಮಾತುಕತೆಗಳು ಅಂತಿಮ ಹಂತಕ್ಕೆ ತಲುಪಿದ್ದು, ಈ ವರ್ಷದ ಅಂತ್ಯದ ವೇಳೆಗೆ ವಿವಾಹ ಮಹೋತ್ಸವ ನೆರವೇರುವ ಸಾಧ್ಯತೆಯಿದೆ.

