
ಅಮಿತಾಭ್ ಬಚ್ಚನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದು ಸುಳ್ಳು ಸುದ್ದಿ
Amitabh Bachchan| ಅಭಿಮಾನಿಗಳನ್ನು ಭೇಟಿಯಾದ ಬಿಗ್ ಬಿ; ಆಸ್ಪತ್ರೆ ವದಂತಿಗಳಿಗೆ ತೆರೆ
ಅಮಿತಾಭ್ ಬಚ್ಚನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದು ಸುಳ್ಳು ಸುದ್ದಿ. ಅವರು ಎಂದಿನಂತೆ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಾಲಿವುಡ್‌ನ ಹಿರಿಯ ನಟ, ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು,ಈ ವರದಿಗಳು ಸಂಪೂರ್ಣವಾಗಿ ಸುಳ್ಳಾಗಿದ್ದು, ಅಮಿತಾಭ್ ಬಚ್ಚನ್ ಅವರು ಸಂಪೂರ್ಣ ಆರೋಗ್ಯವಾಗಿದ್ದಾರೆ.
ಕಳೆದ ಶನಿವಾರ ಅಮಿತಾಭ್ ಬಚ್ಚನ್ ಅವರು ಮುಂಬೈನ ನಾನಾವತಿ ಆಸ್ಪತ್ರೆಗೆ ಭೇಟಿ ನೀಡಿದ್ದು ನಿಜವಾದರೂ, ಅದು ಕೇವಲ ಅವರ ಮಾಸಿಕ ವಾಡಿಕೆಯ ಆರೋಗ್ಯ ತಪಾಸಣೆಗಾಗಿ ಮಾತ್ರ ಆಗಿತ್ತು. ತಪಾಸಣೆಯ ನಂತರ ಅವರು ತಕ್ಷಣವೇ ಮನೆಗೆ ಮರಳಿದ್ದಾರೆ. ಅವರು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಆಸ್ಪತ್ರೆಯ ವಿಐಪಿ ವಿಭಾಗದಲ್ಲಿ ದಾಖಲಾಗಿದ್ದಾರೆ ಮತ್ತು ಅವರ ಮಗ ಅಭಿಷೇಕ್ ಬಚ್ಚನ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಬಚ್ಚನ್ ಕುಟುಂಬಕ್ಕೆ ಹತ್ತಿರವಿರುವ ಮೂಲಗಳು ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದು, ಈ ಸುದ್ದಿಗಳು ತಪ್ಪು ಮಾಹಿತಿಯಿಂದ ಕೂಡಿವೆ ಎಂದು ಸ್ಪಷ್ಟಪಡಿಸಿವೆ.
ಶನಿವಾರದ ನಿಯಮಿತ ತಪಾಸಣೆಯ ನಂತರ ಅಮಿತಾಭ್ ಅವರು ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಭಾನುವಾರದಂದು ತಮ್ಮ ನಿವಾಸದ ಮುಂದೆ ನೆರೆದಿದ್ದ ನೂರಾರು ಅಭಿಮಾನಿಗಳನ್ನು ಭೇಟಿಯಾಗಿ ಅವರ ಶುಭ ಹಾರೈಕೆಯನ್ನು ಸ್ವೀಕರಿಸಿದ್ದಾರೆ. ಈ ಭೇಟಿಯ ಚಿತ್ರಗಳನ್ನು ಅವರು ತಮ್ಮ ಬ್ಲಾಗ್‌ನಲ್ಲಿಯೂ ಹಂಚಿಕೊಂಡಿದ್ದಾರೆ. ಅಲ್ಲದೆ ಅವರು ತಮ್ಮ ಜಲ್ಸಾ ನಿವಾಸದಿಂದ ಜನಕ್ ಕಚೇರಿಗೆ ಸ್ವತಃ ಕಾರು ಚಲಾಯಿಸಿಕೊಂಡು ಹೋಗಿರುವುದೂ ಕಂಡುಬಂದಿದೆ. ಆಸ್ಪತ್ರೆಗೆ ದಾಖಲಾಗಿರುವ ವದಂತಿಗಳ ನಡುವೆಯೇ ಅಮಿತಾಭ್ ಬಚ್ಚನ್ ಅವರು ತಮ್ಮ ಬ್ಲಾಗ್‌ನಲ್ಲಿ ಮಾರ್ಮಿಕ ಕವಿತೆಯೊಂದನ್ನು ಬರೆದು ಪರೋಕ್ಷವಾಗಿ ವದಂತಿ ಹಬ್ಬಿಸುವವರಿಗೆ ಟಾಂಗ್ ನೀಡಿದ್ದಾರೆ. ಸದ್ಯ ಅವರು ಕಲ್ಕಿ 2898 ಎಡಿ ಚಿತ್ರದ ಮುಂದಿನ ಭಾಗ ಹಾಗೂ ಸೆಕ್ಷನ್ 84 ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

