ನಟ ದಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನ ಕೋರಿ ಕೋರ್ಟ್​ ಮೆಟ್ಟಿಲೇರಿದ ಪತ್ನಿ ಸಂಗೀತಾ
x

2021 ರಿಂದ ವಿಜಯ್ ಅವರು ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಸಂಗೀತ ಆರೋಪಿಸಿದ್ದಾರೆ.

ನಟ ದಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನ ಕೋರಿ ಕೋರ್ಟ್​ ಮೆಟ್ಟಿಲೇರಿದ ಪತ್ನಿ ಸಂಗೀತಾ

ನಟ ಮತ್ತು ರಾಜಕಾರಣಿ ವಿಜಯ್ ವಿರುದ್ಧ ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.


Click the Play button to hear this message in audio format

ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಅವರ 27 ವರ್ಷಗಳ ಸುದೀರ್ಘ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ಅವರ ಪತ್ನಿ ಸಂಗೀತ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಸಂಗೀತ ಅವರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯಲ್ಲಿ ವಿಜಯ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ ಎನ್ನಲಾಗಿದೆ.

ಪರಸ್ತ್ರೀ ಸಂಬಂಧದ ಆರೋಪ

ಸಂಗೀತ ಅವರ ಅರ್ಜಿಯ ಪ್ರಕಾರ, ವಿಜಯ್ ಅವರಿಗೆ 2021ರಿಂದಲೇ ಬೇರೊಬ್ಬ ನಟಿಯೊಂದಿಗೆ ಸಂಬಂಧವಿತ್ತು ಎಂದು ಉಲ್ಲೇಖಿಸಲಾಗಿದೆ. ಈ ವಿಷಯ 2021ರಲ್ಲೇ ಸಂಗೀತ ಅವರಿಗೆ ತಿಳಿದುಬಂದಿದ್ದು, ಆ ಸಮಯದಲ್ಲಿ ವಿಜಯ್ ಈ ಸಂಬಂಧವನ್ನು ಕೊನೆಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಭರವಸೆ ನೀಡಿದ ಮೇಲೆಯೂ ವಿಜಯ್ ತಮ್ಮ ಅನೈತಿಕ ಸಂಬಂಧವನ್ನು ಮುಂದುವರಿಸಿದ್ದಾರೆ ಮತ್ತು ಈ ಬಗ್ಗೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ ಎಂದು ಸಂಗೀತ ಅರ್ಜಿಯಲ್ಲಿ ದೂರಿದ್ದಾರೆ ಎನ್ನಲಾಗಿದೆ.

ವಿಜಯ್ ಅವರ ಈ ನಡೆಯಿಂದ ಮನನೊಂದ ಸಂಗೀತ ಅವರು ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದ್ದು, ಈಗ ಕಾನೂನುಬದ್ಧವಾಗಿ ವಿಚ್ಛೇದನ ಕೋರಿದ್ದಾರೆ. 'ವಿಶೇಷ ವಿವಾಹ ಕಾಯ್ದೆ 1954'ರ ಸೆಕ್ಷನ್ 27(1)(a) ಮತ್ತು 27(1)(d) ಅಡಿಯಲ್ಲಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ. ವ್ಯಭಿಚಾರ ಮತ್ತು ಕ್ರೌರ್ಯದ ಆಧಾರದ ಮೇಲೆ ಸಂಗೀತ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

1999ರಲ್ಲಿ ವಿವಾಹವಾಗಿದ್ದ ಈ ಜೋಡಿ, ಚಿತ್ರರಂಗದ ಅತ್ಯಂತ ಯಶಸ್ವಿ ಹಾಗೂ ಮಾದರಿ ದಂಪತಿಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿತ್ತು. ಆದರೆ ಕಳೆದ ಕೆಲವು ಸಮಯದಿಂದ ಇವರ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ್ದವು. 2021ರಲ್ಲಿ ವಿಜಯ್ ಅವರ ಹೆಸರು ಸಹನಟಿಯೊಬ್ಬರ ಜೊತೆ ತಳುಕು ಹಾಕಿಕೊಂಡಾಗ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿರುವ ಬಗ್ಗೆ ವದಂತಿಗಳು ಹಬ್ಬಿದ್ದವು. ಈಗ ಸಂಗೀತ ಅವರು ಅಧಿಕೃತವಾಗಿ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಆ ಎಲ್ಲಾ ಹಳೆಯ ಗುಸುಗುಸು ಸುದ್ದಿಗಳು ಮತ್ತೆ ಮುನ್ನೆಲೆಗೆ ಬಂದಿವೆ.

ದಳಪತಿ ವಿಜಯ್ ಅವರು ಇತ್ತೀಚೆಗಷ್ಟೇ ರಾಜಕೀಯಕ್ಕೆ ಪ್ರವೇಶಿಸಿ 'ತಮಿಳಗ ವೆಟ್ರಿ ಕಳಗಂ' ಪಕ್ಷವನ್ನು ಸ್ಥಾಪಿಸಿದ್ದು, 2026ರ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಚ್ಛೇದನದ ಸುದ್ದಿ ಅವರ ಅಭಿಮಾನಿಗಳಿಗೆ ಭಾರಿ ಆಘಾತ ತಂದಿದೆ. ಅಲ್ಲದೆ, ಅವರ ಕೊನೆಯ ಸಿನಿಮಾ 'ಜನ ನಾಯಕನ್' ಬಿಡುಗಡೆಗೆ ಸಜ್ಜಾಗುತ್ತಿರುವಾಗಲೇ ಇಂತಹ ವೈಯಕ್ತಿಕ ಸಮಸ್ಯೆಗಳು ಎದುರಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಸದ್ಯ ಈ ಪ್ರಕರಣ ಜಿಲ್ಲಾ ನ್ಯಾಯಾಲಯದ ಪರಿಗಣನೆಯಲ್ಲಿದ್ದು, ಏಪ್ರಿಲ್ 20ರಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ನಟ ವಿಜಯ್ ಕಡೆಯಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

Read More
Next Story