
ಪರಪ್ಪನ ಅಗ್ರಹಾರ ಜೈಲಿನಲ್ಲಿ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗನನ್ನ ಭೇಟಿಯಾದ ನಟ ದರ್ಶನ್.
ಜೈಲಿನಲ್ಲಿ ಪತ್ನಿ ವಿಜಯಲಕ್ಷ್ಮಿಯನ್ನು ಭೇಟಿಯಾದ ನಟ ದರ್ಶನ್
ಜಾಮೀನು ನಿರಾಕರಣೆಯಿಂದ ಕುಗ್ಗಿದ ನಟ ದರ್ಶನ್ ಅವರನ್ನ ಪತ್ನಿ ವಿಜಯಲಕ್ಷ್ಮಿ ಜೈಲಿನಲ್ಲಿ ಭೇಟಿಯಾದರು. ಮಾನಸಿಕ ಸ್ಥಿತಿ ಪರಿಗಣಿಸಿ ಜೈಲಾಧಿಕಾರಿಗಳು ವಿಶೇಷ ಒಳ ಸಂದರ್ಶನಕ್ಕೆ ಅವಕಾಶ ನೀಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನಿಂದ ಜಾಮೀನು ನಿರಾಕರಿಸಲ್ಪಟ್ಟ ನಂತರ ನಟ ದರ್ಶನ್ ಮಾನಸಿಕವಾಗಿ ತೀವ್ರವಾಗಿ ಕುಗ್ಗಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮತ್ತು ಇಂದು ಅವರ ವಿವಾಹ ವಾರ್ಷಿಕೋತ್ಸವವೂ ಆಗಿರುವುದರಿಂದ, ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಜೈಲಿನ ನಿಯಮಾವಳಿಗಳ ಪ್ರಕಾರ ವಿಶೇಷ 'ಒಳ ಸಂದರ್ಶನ'ಕ್ಕಾಗಿ ಜೈಲು ಅಧೀಕ್ಷಕ ಅಂಶುಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಸಾಮಾನ್ಯವಾಗಿ ಕೈದಿಯು ಮಾನಸಿಕವಾಗಿ ನೊಂದಿರುವ ಸಂದರ್ಭಗಳಲ್ಲಿ ಜೈಲು ಮ್ಯಾನ್ಯುಯಲ್ ಪ್ರಕಾರ ಇಂತಹ ವಿಶೇಷ ಭೇಟಿಗೆ ಅವಕಾಶ ನೀಡಬಹುದಾಗಿದ್ದು, ಜೈಲಾಧಿಕಾರಿಗಳು ಈ ಕೋರಿಕೆಯನ್ನು ಪುರಸ್ಕರಿಸಿ ಇಂದು ಮಧ್ಯಾಹ್ನ ಭೇಟಿಗೆ ಅನುಮತಿ ನೀಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನ ಪ್ರತ್ಯೇಕ ಕೊಠಡಿಯಲ್ಲಿ ಇಂದು ಮಧ್ಯಾಹ್ನ ಸುಮಾರು ಮೂರು ಗಂಟೆಯ ವೇಳೆಗೆ ಈ ಭೇಟಿ ನಡೆಯುವ ಸಾಧ್ಯತೆಯಿದೆ. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ಸೇರಿದಂತೆ ಒಟ್ಟು ಐದು ಜನರಿಗೆ ಮಾತ್ರ ಈ ಒಳ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಓರ್ವ ಅಡಿಷನಲ್ ಸೂಪರ್ಡೆಂಟ್ ಸಮ್ಮುಖದಲ್ಲಿ ನಡೆಯಲಿರುವ ಈ ಮುಕ್ತ ಭೇಟಿಗೆ ಒಟ್ಟು ಮೂವತ್ತು ನಿಮಿಷಗಳ ಕಾಲಾವಕಾಶ ನೀಡಲಾಗಿದ್ದು, ಮನೆಯಿಂದ ತರುವ ಹಣ್ಣು ಮತ್ತು ತಿನಿಸುಗಳನ್ನು ನೀಡಲು ಕೂಡ ಅನುಮತಿ ಕೊಡಲಾಗಿದೆ.
ಈ ಭೇಟಿಯು ಬ್ಯಾರಕ್ ಮಾದರಿಯ ಸ್ಥಳದಲ್ಲಿ ನಡೆಯಲಿದ್ದು, ಭದ್ರತೆಯ ದೃಷ್ಟಿಯಿಂದ ಇಡೀ ಪ್ರದೇಶವನ್ನು ಸಂಪೂರ್ಣವಾಗಿ ಸಿಸಿಟಿವಿ ಕಣ್ಗಾವಲಿನಲ್ಲಿ ಇಡಲಾಗಿದೆ. ಅಲ್ಲದೆ ಡಿಜಿ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್ ಮೂಲಕವೂ ಈ ಭೇಟಿಯ ಪ್ರಕ್ರಿಯೆಯನ್ನು ನೇರವಾಗಿ ಮಾನಿಟರ್ ಮಾಡಲಾಗುತ್ತದೆ. ಜೈಲು ಅಧೀಕ್ಷಕರು ಈ ಒಳ ಸಂದರ್ಶನದ ಪ್ರಕ್ರಿಯೆಯ ಸಂಪೂರ್ಣ ಮೇಲ್ವಿಚಾರಣೆ ನಡೆಸಲಿದ್ದಾರೆ.

