
ಕಾಲಿವುಡ್ ಸ್ಟಾರ್ ಧನುಷ್ ಮತ್ತು ಬಾಲಿವುಡ್ ಬೆಡಗಿ ಮೃಣಾಲ್ ಠಾಕೂರ್ ಕಳೆದ ಕೆಲವು ಸಮಯದಿಂದ ಆಪ್ತವಾಗಿ ಕಾಣಿಸಿಕೊಳ್ಳುತ್ತಿದ್ದರು.
ವ್ಯಾಲೆಂಟೈನ್ಸ್ ಡೇಗೆ ಧನುಷ್-ಮೃಣಾಲ್ ಮದುವೆ?
ಬಹುಭಾಷಾ ನಟ ಧನುಷ್ ಮತ್ತು ನಟಿ ಮೃಣಾಲ್ ಠಾಕೂರ್ ಪರಸ್ಪರ ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ವದಂತಿ ಕೇಳಿಬರುತ್ತಿದೆ.
ಕಾಲಿವುಡ್ ಸ್ಟಾರ್ ಧನುಷ್ ಮತ್ತು ಬಾಲಿವುಡ್ ಬೆಡಗಿ ಮೃಣಾಲ್ ಠಾಕೂರ್ ಕಳೆದ ಕೆಲವು ಸಮಯದಿಂದ ಆಪ್ತವಾಗಿ ಕಾಣಿಸಿಕೊಳ್ಳುತ್ತಿದ್ದು, ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂಬ ಮಾತುಗಳು ಚಿತ್ರರಂಗದಲ್ಲಿ ಕೇಳಿಬರುತ್ತಿದ್ದವು. ಇದೀಗ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧತೆ ನಡೆಸುತ್ತಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದೆ.
ಪ್ರೇಮಿಗಳ ದಿನದಂದೇ ವಿವಾಹ?
ಸಿನಿಮಾ ವಲಯದಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ, ಫೆಬ್ರವರಿ 14 ಅಂದರೆ ಪ್ರೇಮಿಗಳ ದಿನದಂದು ಧನುಷ್ ಮತ್ತು ಮೃಣಾಲ್ ಠಾಕೂರ್ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಮದುವೆ ಸಮಾರಂಭವು ಅತ್ಯಂತ ಖಾಸಗಿಯಾಗಿ ನಡೆಯಲಿದ್ದು, ಕೇವಲ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರಿಗೆ ಮಾತ್ರ ಆಮಂತ್ರಣ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ತಮ್ಮ ವೈಯಕ್ತಿಕ ಜೀವನದ ವಿಚಾರಗಳನ್ನು ಗುಟ್ಟಾಗಿಡಲು ಇಷ್ಟಪಡುವ ಈ ಇಬ್ಬರು ನಟರು, ಈ ಸಂಭ್ರಮವನ್ನು ಕೂಡ ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ಮೃಣಾಲ್ ಮತ್ತು ಧನುಷ್ ಹಲವು ಪಾರ್ಟಿಗಳಲ್ಲಿ ಹಾಗೂ ಸಿನಿಮಾ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಮೃಣಾಲ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಧನುಷ್ ಭಾಗವಹಿಸಿದ್ದು ಮತ್ತು ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಪರಸ್ಪರ ಕಾಮೆಂಟ್ ಮಾಡುತ್ತಿರುವುದು ಅಭಿಮಾನಿಗಳಲ್ಲಿ ಅನುಮಾನ ಹುಟ್ಟಿಸಿತ್ತು. ಅಲ್ಲದೆ, ಮೃಣಾಲ್ ಅವರು ಧನುಷ್ ಅವರ ಸಹೋದರಿಯರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿರುವುದು ಈ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.
ಈ ಹಿಂದೆ ಡೇಟಿಂಗ್ ವದಂತಿಗಳು ಕೇಳಿಬಂದಾಗ ಮೃಣಾಲ್ ಠಾಕೂರ್ ಅವರು ಧನುಷ್ ಕೇವಲ "ಒಳ್ಳೆಯ ಸ್ನೇಹಿತ" ಎಂದು ಹೇಳಿ ಸುದ್ದಿಯನ್ನು ತಳ್ಳಿಹಾಕಿದ್ದರು. ಆದರೆ ಈಗ ಮದುವೆಯ ಬಗ್ಗೆ ಹಬ್ಬಿರುವ ಈ ಹೊಸ ಸುದ್ದಿಯ ಕುರಿತು ಧನುಷ್ ಆಗಲಿ ಅಥವಾ ಮೃಣಾಲ್ ಆಗಲಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಪ್ರಸ್ತುತ ಧನುಷ್ ಅವರು ತಮ್ಮ ನಿರ್ದೇಶನದ ಮತ್ತು ನಟನೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೆ, ಮೃಣಾಲ್ ಅವರು ಕೂಡ ದಕ್ಷಿಣ ಭಾರತ ಮತ್ತು ಬಾಲಿವುಡ್‌ನ ಹಲವು ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ.

