ಬೆಂಗಳೂರು ಚಿತ್ರೋತ್ಸವಕ್ಕೆ ಕ್ಷಣಗಣನೆ: ಜನವರಿ 29 ರಂದು ಚಾಲನೆ
x

ಜಾಗತಿಕ ಚಿತ್ರರಂಗದ ಅದ್ಭುತಗಳನ್ನು ಕನ್ನಡಿಗರಿಗೆ ಉಣಬಡಿಸುವ 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ಬೆಂಗಳೂರು ಚಿತ್ರೋತ್ಸವಕ್ಕೆ ಕ್ಷಣಗಣನೆ: ಜನವರಿ 29 ರಂದು ಚಾಲನೆ

17ನೇ ಆವೃತ್ತಿಯ ಈ ಚಿತ್ರೋತ್ಸವವು ಜನವರಿ 29 ರಿಂದ ಫೆಬ್ರವರಿ 06ರವರೆಗೆ ನಡೆಯಲಿದೆ. ಜನವರಿ 29 ರಂದು ಸಂಜೆ ವಿಧಾನಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಿನಿಮೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.


Click the Play button to hear this message in audio format

ಜಾಗತಿಕ ಚಿತ್ರರಂಗದ ಅದ್ಭುತಗಳನ್ನು ಕನ್ನಡಿಗರಿಗೆ ಉಣಬಡಿಸುವ 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಬಾರಿಯ ಚಿತ್ರೋತ್ಸವವು ಹಳೆಯ ನೆನಪುಗಳ ಮೆಲುಕು ಹಾಗೂ ಹೊಸ ತಲೆಮಾರಿನ ಸೃಜನಶೀಲತೆಯ ಸಂಗಮವಾಗಿರಲಿದ್ದು, ಅನೇಕ ವಿಶೇಷತೆಗಳನ್ನು ಒಳಗೊಂಡಿದೆ. ಜನವರಿ 29 ರಿಂದ ಫೆಬ್ರವರಿ 6 ರವರೆಗೆ ನಡೆಯಲಿರುವ ಈ ಚಿತ್ರೋತ್ಸವಕ್ಕೆ ಜನವರಿ 29 ರಂದು ಸಂಜೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಈ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ದೇಶ-ವಿದೇಶದ ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ.

ಈ ಬಾರಿಯ ಚಿತ್ರೋತ್ಸವವು "ಸ್ತ್ರೀ ಎಂದರೆ ಅಷ್ಟೇ ಸಾಕೆ?" ಎಂಬ ಅರ್ಥಪೂರ್ಣ ಧ್ಯೇಯವಾಕ್ಯದಡಿ ನಡೆಯುತ್ತಿದ್ದು, 'ಸ್ತ್ರೀ ಸಂವೇದನೆ ಮತ್ತು ಸಮಾನತೆಯ ದನಿ' ಎಂಬ ಟ್ಯಾಗ್ ಲೈನ್ ಹೊಂದಿದೆ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಕವಿತೆಯ ಸಾಲಿನಿಂದ ಪ್ರೇರಿತವಾದ ಈ ವಿಷಯದ ಅಡಿಯಲ್ಲಿ ಮಹಿಳಾ ಪ್ರಧಾನ ಮತ್ತು ಮಹಿಳಾ ನಿರ್ದೇಶಕರ ಚಿತ್ರಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಖ್ಯಾತ ನಟ ಪ್ರಕಾಶ್ ರಾಜ್ ಅವರು ಈ ಬಾರಿಯ ಚಿತ್ರೋತ್ಸವದ ರಾಯಭಾರಿಯಾಗಿದ್ದಾರೆ.

ಜಗತ್ತಿನ 65ಕ್ಕೂ ಹೆಚ್ಚು ದೇಶಗಳ ಸುಮಾರು 225 ಅತ್ಯುತ್ತಮ ಸಿನಿಮಾಗಳು ಈ ಬಾರಿ ಪ್ರದರ್ಶನಗೊಳ್ಳಲಿವೆ. ಬೆಂಗಳೂರಿನ ರಾಜಾಜಿನಗರದ ಲುಲು ಮಾಲ್‌ನಲ್ಲಿರುವ ಸಿನೆಪೊಲಿಸ್‌ನ 11 ಪರದೆಗಳಲ್ಲಿ ಮುಖ್ಯವಾಗಿ ಪ್ರದರ್ಶನಗಳು ನಡೆಯಲಿದ್ದು, ಇದರೊಂದಿಗೆ ಚಾಮರಾಜಪೇಟೆಯ ಕಲಾವಿದರ ಸಂಘ ಹಾಗೂ ಬನಶಂಕರಿಯ ಸುಚಿತ್ರಾ ಫಿಲಂ ಸೊಸೈಟಿಯಲ್ಲೂ ಸಿನಿಮಾಗಳು ತೆರೆಕಾಣಲಿವೆ. ಅಮೆರಿಕ, ಜರ್ಮನಿ, ಫ್ರಾನ್ಸ್, ದಕ್ಷಿಣ ಕೊರಿಯಾ ಸೇರಿದಂತೆ ಜಗತ್ತಿನ ವಿವಿಧ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದ ಚಿತ್ರಗಳನ್ನು ವೀಕ್ಷಿಸುವ ಅವಕಾಶ ಸಿನಿಮಾ ಪ್ರಿಯರಿಗೆ ಲಭಿಸಲಿದೆ.

ಸ್ಪರ್ಧಾ ವಿಭಾಗಗಳು

ಎಂದಿನಂತೆ ಈ ಬಾರಿಯೂ ಚಿತ್ರೋತ್ಸವದಲ್ಲಿ ಏಷಿಯನ್‌, ಭಾರತೀಯ ಹಾಗೂ ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗಗಳಿರಲಿವೆ. ಈ ಮೂರು ವಿಭಾಗಗಳಲ್ಲಿ ತಲಾ ಮೂರು ಅತ್ಯುತ್ತಮ ಚಲನಚಿತ್ರಗಳಿಗೆ ಪ್ರಶಸ್ತಿ ನೀಡಲಾಗುವುದು.

ಚಿತ್ರೋತ್ಸವದ ವಿವಿಧ ವಿಭಾಗಗಳು ಮತ್ತು ಕಾರ್ಯಕ್ರಮಗಳು

1. ಏಷಿಯನ್‌ ಸಿನಿಮಾ ಸ್ಪರ್ಧಾ ವಿಭಾಗ

2. ಚಿತ್ರ ಭಾರತಿ-ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗ

3. ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ

4. ಸಮಕಾಲೀನ ವಿಶ್ವ ಸಿನಿಮಾ

5. ಕನ್ನಡ ಜನಪ್ರಿಯ ಸಿನಿಮಾ

6. ಫಿಪ್ರೆಸ್ಕಿ - ವಿಮರ್ಶಕರ ವಾರ

7. ಜೀವನ ಕಥನ ಆಧಾರಿತ ಚಿತ್ರಗಳು

8. ದೇಶ ಕೇಂದ್ರಿತ ವಿಶೇಷ: ಪೋಲೆಂಡ್‌

9. ಭಾರತೀಯ ಉಪಭಾಷಾ ಚಲನಚಿತ್ರಗಳು

ಡಾ. ರಾಜ್‌ಕುಮಾರ್ ಚಿತ್ರಗಳ 4K ಮೆರುಗು

ಕನ್ನಡದ ಮೇರು ನಟ, ಪದ್ಮಭೂಷಣ ಡಾ. ರಾಜ್‌ಕುಮಾರ್ ಅವರ ಅಭಿನಯದ ಐದು ಪ್ರಮುಖ ಚಿತ್ರಗಳನ್ನು NFDC ( National Film Development Chamber Bangalore) ಹಾಗೂ ಪುಣೆಯ NFAI ಸಂಸ್ಥೆಯು ಅತ್ಯಾಧುನಿಕ 4K ತಂತ್ರಜ್ಞಾನದಲ್ಲಿ ಸಂರಕ್ಷಿಸಿದ್ದು , ಈ ಚಿತ್ರೋತ್ಸವದಲ್ಲಿ ಅವುಗಳ ಪ್ರದರ್ಶನ ನಡೆಯಲಿದೆ. 1960ರ 'ಭಕ್ತ ಕನಕದಾಸ', 1964ರ 'ಉಯ್ಯಾಲೆ', 1966ರ 'ಸಂಧ್ಯಾರಾಗ', 1978ರ ಕಲ್ಟ್ ಕ್ಲಾಸಿಕ್ 'ಶಂಕರ್ ಗುರು' ಹಾಗೂ 1992ರ 'ಜೀವನಚೈತ್ರ' ಚಿತ್ರಗಳು ಹೊಸ ಮಾದರಿಯ ದೃಶ್ಯವೈಭವದೊಂದಿಗೆ ತೆರೆಯ ಮೇಲೆ ರಾರಾಜಿಸಲಿವೆ.

ಅಂತರರಾಷ್ಟ್ರೀಯ ಮತ್ತು ಭಾರತೀಯ ಸಿನೆಮಾಗಳ ಸಮ್ಮಿಲನ

ಜಾಗತಿಕ ಸಿನಿಮಾ ವಿಭಾಗದಲ್ಲಿ ಪೋಲೆಂಡಿನ ಖ್ಯಾತ ನಿರ್ದೇಶಕ ಆಂದ್ರೆ ವಾಜ್ದಾ ಅವರ ನಿರ್ದೇಶನದ ಏಳು ಚಿತ್ರಗಳು ಪ್ರದರ್ಶನಗೊಳ್ಳಲಿವೆ. ದೆಹಲಿಯ ಪೋಲಿಷ್ ಇನ್ಸ್‌ಟ್ಯುಟ್ ಸಹಯೋಗದೊಂದಿಗೆ ಈ ವಿಶೇಷ ವಿಭಾಗವನ್ನು ಆಯೋಜಿಸಲಾಗಿದೆ. ಅಲ್ಲದೆ, ಥಾಯ್ಲೆಂಡಿನ ಖ್ಯಾತ ನಿರ್ದೇಶಕ ಅಚಿತಪಾಂಗ್ ವೀರಸೆಥಕುಲ್ ಅವರ ನಾಲ್ಕು ಪ್ರಮುಖ ಚಿತ್ರಗಳು ಸಮಕಾಲೀನ ಸಿನೆಮಾ ವಿಭಾಗದ ಆಕರ್ಷಣೆಯಾಗಲಿವೆ.

ಸ್ಮಿತಾ ಪಾಟೀಲ್ ನೆನಪು ಹಾಗೂ ಸ್ತ್ರೀ ಸಂವೇದನೆ

ಅಕಾಲಿಕ ಮರಣ ಹೊಂದಿದ ಖ್ಯಾತ ಅಭಿನೇತ್ರಿ ಸ್ಮಿತಾ ಪಾಟೀಲ್ ಅವರಿಗೆ ಗೌರವ ಸಲ್ಲಿಸಲು ಅವರ ಐದು ಚಿತ್ರಗಳಾದ ಭೂಮಿಕಾ, ಗಮನ್, ಭಾವ್ನಿ ಭವಾಯ್, ಚಿದಂಬರಂ ಮತ್ತು ಮಿರ್ಚ್ ಮಸಾಲ ಪ್ರದರ್ಶನಗೊಳ್ಳಲಿವೆ.

ಹಳೆಯ ಸಿನೆಮಾಗಳನ್ನು ಉಳಿಸುವ ನಿಟ್ಟಿನಲ್ಲಿ ಸಂರಕ್ಷಿಸಲ್ಪಟ್ಟ ಹೇಮಾವತಿ (ಎಸ್. ಸಿದ್ದಲಿಂಗಯ್ಯ), ಪಡುವಾರಹಳ್ಳಿ ಪಾಂಡವರು (ಪುಟ್ಟಣ್ಣ ಕಣಗಾಲ್) ಸೇರಿದಂತೆ ದೋ ಬಿಘಾ ಜಮೀನ್ ಹಾಗೂ ಜಾಗತಿಕ ಸಿನೆಮಾ 'ಕ್ಲಿಯೋ ಫ್ರಮ್ 5 ಟು 7' ಚಿತ್ರಗಳು ಪ್ರದರ್ಶನಕ್ಕೆ ಸಿದ್ಧವಾಗಿವೆ. ಇದರೊಂದಿಗೆ ಚಿತ್ರರಂಗದ ಗಣ್ಯರ ಶತಮಾನೋತ್ಸವ ಸ್ಮರಣೆ ಹಾಗೂ ಇತ್ತೀಚೆಗೆ ನಿಧನರಾದ ಸಾಧಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ವಿಶೇಷ ವಿಭಾಗಗಳೂ ಚಿತ್ರೋತ್ಸವದ ಭಾಗವಾಗಿವೆ.

ಸಾರ್ವಜನಿಕರಿಗೆ ಈ ಸಂಭ್ರಮದಲ್ಲಿ ಭಾಗಿಯಾಗಲು ಜನವರಿ 16 ರಿಂದಲೇ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಆಸಕ್ತರು biffes.org ಜಾಲತಾಣದ ಮೂಲಕ 800 ರೂಪಾಯಿ ಪಾವತಿಸಿ (ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರಿಗೆ 400 ರೂ.) ಪ್ರತಿನಿಧಿಗಳಾಗಿ ನೋಂದಾಯಿಸಿಕೊಳ್ಳಬಹುದು. ಫೆಬ್ರವರಿ 6 ರಂದು ಸುಲೋಚನ ಚಿತ್ರಮಂದಿರದಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು ವಿಜೇತ ಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Read More
Next Story